ಆರೋಗ್ಯ ವಿಭಾಗ ಕಟ್ಟಡ ನಿರ್ಮಾಣಕ್ಕೆ ಚಾಲನೆ
ಯಾದಗಿರಿ: ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ ಮಂಜೂರಾಗಿರುವ ಸುಮಾರು ರು. 10 ಕೋಟಿ ವೆಚ್ಚದ 60 ಹಾಸಿಗೆಯುಳ್ಳ ತಾಯಿ ಮತ್ತು ಮಕ್ಕಳ ಆರೋಗ್ಯ ವಿಭಾಗದ ಕಟ್ಟಡ ನಿರ್ಮಾಣಕ್ಕೆ ಯಾದಗಿರಿ ಶಾಸಕ ಡಾ. ಎ.ಬಿ. ಮಲಕರೆಡ್ಡಿ ಭಾನುವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯಾದಗಿರಿ ಜಿಲ್ಲೆಯಾಗಿ ಘೋಷಣೆಯಾದಾಗಿನಿಂದ ಜಿಲ್ಲಾ ಆಸ್ಪತ್ರೆ ತಾಲೂಕು ಮಟ್ಟದ ಆಸ್ಪತ್ರೆಯಂತಿತ್ತು. ಹೆಚ್ಚುವರಿ ಅನುದಾನದ ಕೊರತೆ ಮತ್ತು ಆಸ್ಪತ್ರೆಯಲ್ಲಿ ಹೆಚ್ಚಿನ ಹಾಸಿಗೆಗಳ ಕೊರತೆ ಇತ್ತು. ಇದನ್ನು ಮನಗಂಡು ಸತತ ಪ್ರಯತ್ನದ ಫಲವಾಗಿ ತಾಯಿ ಮತ್ತು ಮಕ್ಕಳ ಆರೋಗ್ಯ ಸುಧಾರಣೆಗಾಗಿ ಈಗ ಭಾರತ ಸರ್ಕಾರದಿಂದ ಈ ಆಸ್ಪತ್ರೆಯಲ್ಲಿ 60 ಹಾಸಿಗೆಯುಳ್ಳ ತಾಯಿ ಮತ್ತು ಮಕ್ಕಳ ಆರೋಗ್ಯ ಕಟ್ಟಡ ನಿರ್ಮಾಣಕ್ಕೆ ರು. 10 ಕೋಟಿ ಮಂಜೂರು ಮಾಡಲಾಗಿದೆ. ಇದರಿಂದ ಉತ್ತಮ ಆರೋಗ್ಯ ಸೌಲಭ್ಯ ದೊರೆಯಲಿದೆ ಎಂದರು.
ಮೇಲ್ದರ್ಜೆಗೆ: ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ. ಭಗವಂತ ಅನ್ವರ್, ಜಿಲ್ಲಾ ಆಸ್ಪತ್ರೆಯನ್ನು ಈಗಾಗಲೇ 100 ಹಾಸಿಗೆಯುಳ್ಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿದೆ. ಅದರಂತೆ ಈಗ ಮೊದಲನೇ ಮಹಡಿಯಲ್ಲಿ 60 ಹಾಸಿಗೆಯುಳ್ಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯು ಎನ್ಆರ್ಎಚ್ಎಂ ಯೋಜನೆಯಡಿ ನಿರ್ಮಾಣಗೊಳ್ಳಲಿದೆ. ಅದೇ ರೀತಿ ವೈದ್ಯಾಧಿಕಾರಿಗಳು ಮತ್ತು ಗ್ರೂಪ್ ಡಿ ನೌಕರರಿಗೆ ತಲಾ 4 ವಸತಿ ಗೃಹಗಳು ಮತ್ತು 6 ಸ್ಟಾಫ್ ನರ್ಸ್ಗಳಿಗೆ 6 ವಸತಿ ಗೃಹಗಳು, ಔಷಧಿಕೋಣೆ, ಉಗ್ರಾಣ, ಸುರಕ್ಷತ ಕೋಣೆ, ಆಸ್ಪತ್ರೆ ನವೀಕರಣ ಸೇರಿದಂತೆ ಇಂತಹ ಹಲವು ಸೌಲಭ್ಯಗಳಿಗೆ ಈ ಅನುದಾನ ಸದ್ಬಳಕೆಯಾಗಲಿದೆ. ಅದರಂತೆ ನೂತನ ವೈದ್ಯಕೀಯ ಕಾಲೇಜಿಗಾಗಿ 29.29 ಎಕರೆ ಜಮೀನು ಖರೀದಿಗೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಇದರಿಂದ ಅಲ್ಲಿ 250 ಹಾಸಿಗೆಯುಳ್ಳ ಆಸ್ಪತ್ರೆಯು ಸಹ ನಿರ್ಮಾಣವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಲ್ಲಿಕಾರ್ಜುನ ಮಕ್ಕಾ, ತಾಲೂಕು ಆರೋಗ್ಯ ಅಧಿಕಾರಿ ಚಂದ್ರಕಾಂತ್ ನರಬೋಳಿ, ನಗರಸಭೆ ಸದಸ್ಯ ಎಸ್. ನಾಯಿಕ್, ಶಿವಕುಮಾರ ದೊಡಮನಿ, ಮಾಜಿ ನಗರಸಭೆ ಅಧ್ಯಕ್ಷ ಎಂ. ದಾಸನಕೇರಿ, ನಿವೃತ್ತ ಪ್ರಾಚಾರ್ಯ ಸಿದ್ದಲಿಂಗಪ್ಪ ಮತ್ತಿತರರಿದ್ದರು.