'ಜನಸ್ನೇಹಿಯಾಗಿದ್ದ ದಿ. ಶಿರವಾಳರು'
ಶಹಾಪುರ: ಜನ ಸೇವೆಯಲ್ಲಿ ನೆಮ್ಮದಿ ಸಂತೃಪ್ತಿ ಕಂಡ ದಿ.ಶಿವಶೇಖರಪ್ಪಗೌಡ ಶಿರವಾಳರು ಸಹನೆ, ತಾಳ್ಮೆ, ಕರುಣಾಶೀಲ ಗುಣಗಳಿಂದ ಬಡಜನರ ಕಣ್ಣೀರೊರೆಸುವ ಕಾರ್ಯದಲ್ಲಿ ತೊಡಗಿದ್ದರು. ತಾಲೂಕಿನ ಸಮಸ್ತ ಜನತೆಗೆ ಹತ್ತಿರವಾಗಿದ್ದರು ಎಂದು ಅಬ್ಬೆತುಮಕೂರಿನ ಸಿದ್ಧಸಂಸ್ಥಾನ ಮಠದ ಪೀಠಾಧಿಪತಿ ಡಾ.ಗಂಗಾಧರ ಶಿವಾಚಾರ್ಯ ತಿಳಿಸಿದರು. ತಾಲೂಕಿನ ಶಿರವಾಳ ಗ್ರಾಮದಲ್ಲಿ ದಿ.ಶಿವಶೇಖರಪ್ಪಗೌಡರ ನಾಲ್ಕನೇ ಪುಣ್ಯಸ್ಮರಣೆ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ, ದಿ. ಶಿವಶೇಖರಪ್ಪಗೌಡ ಶಿರವಾಳ ಮನೆತನವೇ ಮಾನವೀಯತೆ ಧರ್ಮದ ಮೇಲೆ ನಿಂತಿದೆ ಎಂಬುವದಕ್ಕೆ ಅವರ ಪುಣ್ಯಸ್ಮರಣೆಗೆ ಆಗಮಿಸಿದ ಅಭಿಮಾನಿಗಳೆ ಸಾಕ್ಷಿ. ಸಂತಮಹಾತ್ಮರಿಗೆ ನೀಡುವ ಗೌರವ, ಎಲ್ಲರನ್ನೂ ಪ್ರೀತಿ ವಾತ್ಸಲ್ಯದಿಂದ ಕಾಣುವ ಮತ್ತು ನೊಂದವರಿಗೆ ಆತ್ಮಸ್ಥೈರ್ಯ ತುಂಬುವ ಮಾನವೀಯ ಗುಣಗಳಿಂದ ನೆಮ್ಮದಿ ವಾತಾವರಣವಿದ್ದುದರ ಫಲವಾಗಿ ಶಿರವಾಳ ಮನೆತನ ತನ್ನದೇ ಆದ ವೈಶಿಷ್ಟ್ಯ ಪಡೆದಿದೆ ಎಂದರು. ಅನ್ನದಾನ ಸ್ವಾಮಿ ಮಾತನಾಡಿ, ಪ್ರಸ್ತುತ ಧರ್ಮರಕ್ಷಣೆ ಮುಖ್ಯ ಕಾರ್ಯವೆಂದು ಸನ್ನಡತೆಯಿಂದ ಬದುಕಿದಾಗ ಅದಕ್ಕೊಂದು ಅರ್ಥ ಬರುತ್ತದೆ ಎಂದರು.
ಆಶೀರ್ವಚನ: ಸೊನ್ನದ ಶಿವಾನಂದ ಮಹಾಸ್ವಾಮಿ, ಗುರುಪಾದ ಮಹಾಸ್ವಾಮಿ, ಕಾಳಹಸ್ತೇಂದ್ರ ಶ್ರೀ, ದೇವಪುರದ ಶಿವಮೂರ್ತಿ ಶಿವಾಚಾರ್ಯ ಆಶೀರ್ವಚನ ನೀಡಿದರು.
ಮುಖಂಡರಾದ ಭೀಮಯ್ಯ ಗೌಡಕಟ್ಟಿಮನಿ, ಮಲ್ಲಣ್ಣಮಡ್ಡಿ, ಶಿವಶೇಖರಪ್ಪಗೌಡ ಶಿರವಾಳರ ಅಂದಿನ ಕಾರ್ಯವೈಖರಿ ಕುರಿತು ಮಾತನಾಡಿದರು. ವೇದಿಕೆ ಮೇಲೆ ಕಡಕೋಳದ ರುದ್ರಮುನಿ ಶಿವಾಚಾರ್ಯ, ದೋರನಹಳ್ಳಿ ವೀರಮಹಾಂತ ಶಿವಾಚಾರ್ಯ, ಗುಂಬಳಾಪುರ ಮಠದ ಸಿದ್ದೇಶ್ವರಶ್ರೀ, ಸಗರ ವಕ್ಕಲಿಗೇರ ಮಠ ಶ್ರೀ ಮಡಿವಾಳೇಶ್ವರ ಶಿವಾಚಾರ್ಯ, ಚನ್ನಮಲ್ಲಸ್ವಾಮಿ, ಚನ್ನವೀರಶಿವಾಚಾರ್ಯ ಮಲ್ಲಿಕಾರ್ಜುನ ದೇವರು, ಚರಬಸವೇಶ್ವರ ಸಂಸ್ಥಾನ ಮಠದ ಬಸಯ್ಯಶರಣರು, ಧರ್ಮಗುರು ಸೈಯದ್ ಪೀರ್ ಪಾಶಾ ಮತ್ತಿತರರು ಪಾಲ್ಗೊಂಡಿದ್ದರು.
ಸಂಗೀತ: ಶಿರವಾಳಗೌಡರ ಕುರಿತು ರಚಿಸಿರುವ ಹಾಡಿಗೆ ವಿಶಿಷ್ಟ ರಾಗ ಸಂಯೋಜನೆ ಮಾಡಿ ಮಾರುತಿಕಾಸರ ಹಾಡಿದರು. ಛಾಯಾಚಿತ್ರಗಳನ್ನು ಪ್ರಸ್ತುತ ಪಡಿಸಿದ ಸೋಮು ಪಾಲ್ಪುರೆ ಅವರಿಗೆ ಶಿರವಾಳ ಗೌಡರ ಕುಟುಂಬ ವರ್ಗದ ಪರವಾಗಿ ವಿಶೇಷ ರೀತಿಯಲ್ಲಿ ಸನ್ಮಾನ ಮಾಡಲಾಯಿತು.
ವಿಜ್ಞಾನ ದಿನಾಚರಣೆ
ಯಾದಗಿರಿ: ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢವಿಭಾಗ) ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಉಪಪ್ರಾಚಾರ್ಯೆ ಸಲೀಮಾ ಬೇಗಂ ವಹಿಸಿದ್ದರು.ಅದೇ ರೀತಿ ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವನ್ನು ಲಿಂಗೇರಿ ಶಾಲೆಯ ಶಿಕ್ಷಕ ಸೂರ್ಯಪ್ರಕಾಶ ಘನಾತೆ ವಹಿಸಿದ್ದರು. ಅತಿಥಿ ಸ್ಥಾನವನ್ನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಯಾದಗಿರಿ ಜಿಲ್ಲಾ ಸಂಚಾಲಕ ಬಿ ರಾಜಶೇಖರಗೌಡ ವಹಿಸಿದ್ದರು. ವಿಜ್ಞಾನ ಶಿಕ್ಷಕ ಹನುಮಯ್ಯ ಕಲಾಲ್ ಮಾತನಾಡಿ, ರಾಮನ್ ದೇಶಕ್ಕೆ ನೀಡಿದ ಕೊಡುಗೆ ಅಪಾರ ಎಂದರು.