ನಾಳೆ ಮೆಡಿಕಲ್ ಕಾಲೇಜು ಕಟ್ಟಡ ಭೂಮಿ ಪೂಜೆ
ಗುಲ್ಬರ್ಗ: ಜಿಲ್ಲೆಯವರ ಬಹುದಿನಗಳ ಬೇಡಿಕೆಯಾಗಿದ್ದ ಸರ್ಕಾರಿ ಮೆಡಿಕಲ್ ಕಾಲೇಜು ಹಾಗೂ ಸುಸಜ್ಜಿತ ಆಸ್ಪತ್ರೆ ಸೌಲಭ್ಯ ಮಾ.4ರಂದು ಈಡೇರಲಿದೆ. ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಗುಲ್ಬರ್ಗಕ್ಕೆ ಮಂಜೂರಾಗಿರುವ ಸರ್ಕಾರಿ ವೈದ್ಯ ವಿದ್ಯಾಲಯದ ಭೂಮಿ ಪೂಜೆ ನೆರವೇರಿಸುವರು. ಅಂದೇ ಹೊಸತಾಗಿ ನಿಮಾರ್ಣಗೊಂಡಿರುವ 550 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಲೋಕಾರ್ಪಣೆ ಮಾಡಲಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿರುವ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಗುಲ್ಬರ್ಗ ಇತಿಹಾಸದ ಬಹುನಿರೀಕ್ಷಿತ ಕ್ಷಣ ಮಾ.4ರಂದು ನನಸಾಗಲಿದೆ ಎಂದರು.
ಗುಲ್ಬರ್ಗ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಈಗಿರುವ ಜಿಲ್ಲಾಸ್ಪತ್ರೆ ಅಂಗಳದಲ್ಲೇ 30 ಎಕರೆ ಭೂಮಿ ಲಭ್ಯವಿದೆ. ಸರ್ಕಾರ ಈ ಭೂಮಿಯನ್ನು ವೈದ್ಯಕೀಯ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಿದೆ. ಇಲ್ಲಿರುವ ಆಸ್ಪತ್ರೆ ಸಿಬ್ಬಂದಿ ವಸತಿ ಸಂಕೀರ್ಣ ಶಿಥಿಲಗೊಂಡಿದ್ದು ಅದನ್ನು ನೆಲಸಮ ಮಾಡಿ ಅಲ್ಲೇ ವೈದ್ಯ ವಿದ್ಯಾಲಯಕ್ಕೆ ಭೂಮಿ ಪೂಜೆ ನೆರವೇರಿಸಲಾಗುತ್ತದೆ ಎಂದರು.
ನಾಳೆ ಭೂಮಿ ಪೂಜೆ: ಎಂಸಿಐ ನಿಯಮಗಳ ಪ್ರಕಾರ- ಹೊಸ ಮೆಡಿಕಲ್ ಕಾಲೇಜಿಗೆ ಕನಿಷ್ಠ 20 ಎಕರೆ ಭೂಮಿ ಅಗತ್ಯ. ಆದರೆ ಗುಲ್ಬರ್ಗದಲ್ಲಿ 30 ಎಕರೆ ಭೂಮಿ ಲಭ್ಯವಿದೆ. ಹೀಗಾಗಿ ಇಲ್ಲಿನ ವೈದ್ಯ ಕಾಲೇಜು ಕಟ್ಟಡ ಕೆಲಸಕ್ಕೆ ಪೂಜೆ ನೆರವೇರಿಸಲಾಗುತ್ತಿದೆ ಎಂದರು.
ಗುಲ್ಬರ್ಗ ವೈದ್ಯ ವಿದ್ಯಾಲಯ ನಿರ್ಮಾಣಕ್ಕೆ ಈಗಾಗಲೇ 29 ಕೋಟಿ ಬಿಡುಗಡೆಯಾಗಿದೆ. ಇದಲ್ಲದೆ ಹಿಂದೆಯೇ ಮಂಜೂರಾಗಿದ್ದ 6 ವೈದ್ಯ ವಿದ್ಯಾಲಯಗಳ ನಿರ್ಮಾಣಕ್ಕೆ ಸರ್ಕಾರ ಹೇಳಿದಂತೆ 175 ಕೋಟಿಯಲ್ಲಿ ಪ್ರತಿ ಕಾಲೇಜಿಗೂ ತಲಾ 29 ಕೋಟಿ ಮಂಜೂರು ಮಾಡಲಾಗಿದೆ ಎಂದು ಹೇಳಿದರು.
ಕ್ಯಾನ್ಸರ್ ಆಸ್ಪತ್ರೆ ಮೆಲ್ದರ್ಜೆಗೆ: ಕರ್ನಾಟಕ ಸರ್ಕಾರ ಈ ಬಜೆಟ್ನಲ್ಲಿ ಮಂಡ್ಯ ಹಾಗೂ ಗುಲ್ಬರ್ಗದಲ್ಲಿ ಕ್ಯಾನ್ಸರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಮೆಲ್ದರ್ಜೆಗೇರಿಸಲು ಯೋಜನೆ ರೂಪಿಸಿದೆ. ಇದಕ್ಕಾಗಿ ತಲಾ 45 ಕೋಟಿ ಮೀಸಲಿಟ್ಟಿದೆ. ಗುಲ್ಬರ್ಗದಲ್ಲಿರುವ ಪೆರಿಫೆರಲ್ ಕ್ಯಾನ್ಸರ್ ಕೇಂದ್ರದಲ್ಲಿ ರೆಡಿಯೇಶನ್ ಚಿಕಿತ್ಸೆ ಲಭ್ಯವಿದೆ. ಇಲ್ಲಿನ ವ್ಯವಸ್ಥೆಗಳನ್ನೆಲ್ಲ ಮೇಲ್ದರ್ಜೆಗೇರಿಸುವ ಮೂಲಕ ಬಡವರಿಗೂ ಉತ್ತಮ ಕ್ಯಾನ್ಸರ್ ಚಿಕಿತ್ಸೆ ದೊರಕುವಂತೆ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಗುಲ್ಬರ್ಗ ಕ್ಯಾನ್ಸರ್ ಪೆರಿಫೆರಲ್ ಸೆಂಟರ್ನಲ್ಲಿನ ಈಗಿರುವ ರೇಡಿಯೇಶನ್ 1 ತಿಂಗಳಲ್ಲಿ ತೀರುವ ಆತಂಕವಿದೆ. ಈ ಬಗ್ಗೆ ಬಾಬಾ ಅಣುಶಕ್ತಿ ಕೇಂದ್ರಕ್ಕೆ ವರದಿ ಮಾಡಲಾಗಿದೆ. ಇಲ್ಲಿನ ಈಗಿನ ಹಳೆಯ ಕಾಲದ ರೇಡಿಯೇಷನ್ ಪದ್ಧತಿಯನ್ನು ಮೇಲ್ದರ್ಜೆಗೇರಿಸಿ ಅಲ್ಲಿ ಲಿನಿಯರ್ ಪದ್ಧತಿಯ ಅತ್ಯಾಧುನಿಕ ರೇಡಿಯೇಷನ್ ಸೌಕರ್ಯ ತರುವ ಚಿಂತನೆ ಸಾಗಿದೆ ಎಂದರು.
550 ಹಾಸಿಗೆಯ ಆಸ್ಪತ್ರೆ: ಗುಲ್ಬರ್ಗದ 550 ಹಾಸಿಗೆ ಹೊಸ ಆಸ್ಪತ್ರೆಯಲ್ಲಿ ಎಲ್ಲಾ ವಿಭಾಗಗಳು ಕಾರ್ಯನಿರ್ವಹಿಸಲಿವೆ. ಆಸ್ಪತ್ರೆ ಲೋಕಾರ್ಪಣೆಗೊಂಡ ನಂತರ 4 ತಿಂಗಳಲ್ಲಿ ಅತ್ಯಾಧುನಿಕ ಯಂತ್ರಗಳು ಅಲ್ಲಿ ಸ್ಥಾಪನೆಗೊಳ್ಳಲಿವೆ. ಈಗಾಗಲೇ ಯಂತ್ರಗಳಿಗೆ ಆದೇಶಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಎಲ್ಲವೂ ಪೂರ್ಣಗೊಂಡಿದೆ ಎಂದು ಡಾ. ಶರಣ ಹೇಳಿದರು.
ಮಾ.4ರಂದು ಮ.2ಕ್ಕೆ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆಯವರು ಸರ್ಕಾರಿ ವೈದ್ಯವಿದ್ಯಾಲಯ ಭೂಮಿ ಪೂಜೆ ಹಾಗೂ 550 ಹಾಸಿಗೆ ಆಸ್ಪತ್ರೆಯ ಲೋಕಾರ್ಪಣೆ ನೆರವೇರಿಸುವರು. ಸಂಜೆ 4 ಗಂಟೆಗೆ ಸೇಡಂನಲ್ಲಿ ನೂತನ ಬಸ್ ನಿಲ್ದಾಣ ಕಾಮಗಾರಿಗೂ ಚಾಲನೆ ನೀಡಲಿದ್ದಾರೆ ಎಂದು ಹೇಳಿದ್ದಾರೆ.