ಮೂಲ ಸೌಲಭ್ಯ; ರಾಜ್ಯಕ್ಕೆ 1,333 ಕೋಟಿ: ಸಚಿವ
ಕ.ಪ್ರ. ವಾರ್ತೆ ಗುಲ್ಬರ್ಗ ಮಾ.2
ರಾಜ್ಯದ 39 ನಗರಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಕೊಳಚೆ ಪ್ರದೇಶಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಹಾಗೂ ಕೊಳಚೆ ನಿವಾಸಿಗಳಿಗೆ ರಾಜೀವ್ ಗಾಂಧಿ ಆವಾಸ್ ಯೋಜನೆಯಡಿ ಮನೆಗಳನ್ನು ನಿರ್ಮಿಸಿ ಕೊಡಲು 1,333 ಕೋಟಿ ರೂಪಾಯಿಗಳನ್ನು ಮೀಸಲಿಸಲಾಗಿದೆ ಎಂದು ಪೌರಾಡಳಿತ, ಸಾರ್ವಜನಿಕ ಉದ್ಯಮಗಳು, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಹೇಳಿದ್ದಾರೆ.
ಅವರು ವಸತಿ ಇಲಾಖೆ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ನರ್ಮ್ ಐಎಚ್‌ಎಸ್‌ಡಿ ಯೋಜನೆಯಡಿ ನಗರದ ರಾಜೀವ್‌ಗಾಂಧಿ ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೊಳಗೇರಿ ನಿವಾಸಿಗಳಿಗೆ ವಿವಿಧ ಕಲ್ಯಾಣ ಕಾರ್ಯಕ್ರಮ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಈ ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದ ಯೋಜನೆಯಾಗಿದ್ದು, ಕೇಂದ್ರದ ನೆರವನ್ನು ಬಳಸಿಕೊಂಡು ಗುಲ್ಬರ್ಗದಲ್ಲಿನ ಕೊಳಗೇರಿ ನಿವಾಸಿಗಳಿಗೆ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು ಎಂದರು.
ಬಹುಮಹಡಿ ವಸತಿ ಸಮುಚ್ಛಯ: ಮುಂಬಯಿ, ದೆಹಲಿ, ಚೆನೈ ಮೊದಲಾದ ನಗರಗಳಲ್ಲಿ ಕೊಳಚೆ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸುಮಾರು 12 ಅಂತಸ್ತುಗಳ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಿ ಕೊಡಲಾಗುತ್ತಿದೆ. ಅದೇ ಮಾದರಿಯಲ್ಲಿ ಗುಲ್ಬರ್ಗದ ಕೋರಂಟಿ ಹನುಮಾನ್ ಮಂದಿರದ ಹತ್ತಿರ ಸರ್ಕಾರದ 6 ಎಕರೆಯಲ್ಲಿ ರು. 180 ಕೋಟಿ ವೆಚ್ಚದಲ್ಲಿ ಮೂರು ಅಂತಸ್ತಿನ ಬಹುಮಹಡಿ ವಸತಿ ಸಮುಚ್ಛಯಗಳನ್ನು ನಿರ್ಮಿಸಲಾಗುವುದು. ಇದಕ್ಕಾಗಿ ಈಗಾಲೇ ಟೆಂಡರ್ ಕರೆಯುವ ಪ್ರಕ್ರಿಯೆ ನಡೆದಿದೆ. ನಗರದ ಕೊಳಚೆ ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಕಲ್ಪಿಸಲು ರು. 15 ಕೋಟಿ ಮಂಜೂರು ಮಾಡಲಾಗಿದೆ ಎಂದರು.
ಹಕ್ಕುಪತ್ರ ವಿತರಣೆ: ಈ ಹಿಂದೆ ತಾವು ವಸತಿ ಸಚಿವರಾಗಿದ್ದಾಗ ಕೊಳಚೆ ಪ್ರದೇಶ ಅಭಿವೃದ್ಧಿ ಕಾನೂನಿಗೆ ತಿದ್ದುಪಡಿ ತಂದು ಕೊಳಗೇರಿ ನಿವಾಸಿಗಳಿಗೆ ಜಾಗದ ಮಾಲೀಕತ್ವ ನೀಡಿ ಹಕ್ಕುಪತ್ರಗಳನ್ನು ನೀಡಲು ಕ್ರಮ ಜರುಗಿಸಲಾಗಿದೆ. ಈಗಾಗಲೇ ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ನೀಡುವ ಕೆಲಸ ಪ್ರಾರಂಭಿಸಲಾಗಿದೆ ಎಂದರು.
ಪಾಲಿಕೆ ಸದಸ್ಯರಾದ ವಿಠ್ಠಲ್ ಜಾಧವ, ರಾಜಕುಮಾರ ಕಪನೂರ, ಪಾಲಿಕೆ ಅಯುಕ್ತ ಶ್ರೀಕಾಂತ ಕಟ್ಟಿಮನಿ, ಮುಖಂಡ ಮಹ್ಮದ್ ಅಜಗರ್ ಚುಲ್‌ಬುಲ್, ಐಸಿಡಿಎಸ್ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ನಾರಾಯಣಸ್ವಾಮಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಸಿದ್ದಲಿಂಗಪ್ಪ, ಎಚ್‌ಕೆಸಿಎಎಲ್ ಕಾರ್ಯದರ್ಶಿ ಅಪರ್ಣಾ ಕೊಳ್ಳಾ, ಗೀತಾ ಹುಡುಗಿ, ಅಧಿಕಾರಿಗಳಾದ ಬಿ.ಎ. ಸಸಾಲಟ್ಟಿ, ಅರುಣಕುಮಾರ ಮಾಶೆಟ್ಟಿ, ಮೊಬಿನ್ ಮತ್ತಿತರರು ಉಪಸ್ಥಿತರಿದ್ದರು.
ಉದ್ಘಾಟನೆ: ಸಚಿವರು ಮಹಾನಗರ ಪಾಲಿಕೆ ಗುಲ್ಬರ್ಗವತಿಯಿಂದ ಮುಖ್ಯಮಂತ್ರಿಗಳ ಅನುದಾನದ ಯೋಜನೆಯಡಿ 2 ಕೋಟಿ ರು. ವೆಚ್ಚದ ಎಸ್‌ಟಿಬಿಟಿ ಮುಖ್ಯ ರಸ್ತೆಯಿಂದ ಜಗತ್ ವೃತ್ತದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಯ ಅಡಿಗಲ್ಲು, ಲೋಕೋಪಯೋಗಿ ಇಲಾಖೆಯಿಂದ ಎಸ್‌ಪಿ ಕಚೇರಿ ಎದುರಿನ ಸರ್ಕಾರಿ ಮಹಿಳಾ ಪಿಯು ಕಾಲೇಜಿನಲ್ಲಿ ರು. 3 ಕೋಟಿ ವೆಚ್ಚದ ಕಟ್ಟಡದ ಶಂಕುಸ್ಥಾಪನೆ, ಭವಾನಿ ನಗರ ರಿಂಗ್ ರಸ್ತೆಯಿಂದ ಪೂಜಾರಿ ಮಠ ಮಾರ್ಗವಾಗಿ ಫಿಲ್ಟರ್ ಬೆಡ್ ಸೇರುವ ರು. 1 ಕೋಟಿ ವೆಚ್ಚದ ರಸ್ತೆ ಕಾಮಗಾರಿ, ವಾರ್ಡ್ ಸಂಖ್ಯೆ 8ರ ಶಿವಾಜಿನಗರದಲ್ಲಿ ನೂತನ ಶೌಚಾಲಯ ಕಟ್ಟಡ ಉದ್ಘಾಟನೆ, ಕಾಕಡೇ ಚೌಕ್‌ನಿಂದ ಕಪನೂರ ರಸ್ತೆವರೆಗೆ ರು. 1 ಕೋಟಿ ವೆಚ್ಚದ ರಸ್ತೆಗೆ ಅಡಿಗಲ್ಲು, ತಾಜ್ ನಗರದಲ್ಲಿ ರು. 20 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಅಡಿಗಲ್ಲು, ರೋಸಾ ಪೆಟ್ರೋಲ್ ಪಂಪ್‌ನಿಂದ ಸಹಾರಾ ಲೇಔಟ್ ಮಾರ್ಗವಾಗಿ ಮಾಲಗತ್ತಿ ರಸ್ತೆವರೆಗಿನ 1 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ, ಬುಲಂದ ಪರ್ವೇಜ್ ಚೌಕ್‌ನಿಂದ ಮಾಲಗತ್ತಿ ರಸ್ತೆವರೆಗಿನ ರು. 75 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ, ಸಭಾ ಫಂಕ್ಷನ್ ಹಾಲ್‌ದಿಂದ ಅಬೂಬ್‌ಕರ್ ಮಸೀದಿವರೆಗಿನ ರು. 50 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ, ಅಲ್‌ನಜರ್ ಡಿ.ಇಡಿ ಕಾಲೇಜಿನಿಂದ ಸೇಡಂ ರಸ್ತೆ ಎಸ್‌ಎಚ್ 10ವರೆಗಿನ ರು. 75 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ಹಾಗೂ ನಯಾ ಮೊಹಲ್ಲಾದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯಿಂದ ಹಮ್ಮಿಕೊಂಡಿದ್ದ ರು. 199. 95 ಲಕ್ಷ ವೆಚ್ಚದ ಮೇಲ್ಪಟ್ಟ ಜಲ ಸಂಗ್ರಹಗಾರ ಮತ್ತು ಫೀಡರ್ ಕಾಮಗಾರಿಯನ್ನು ಸಚಿವರು ಉದ್ಘಾಟಿಸಿದರು.
ಪಾಲಿಕೆ ಸದಸ್ಯರಾದ ಬಾಬು ಒಂಟಿ, ಶಂಕರ ಅಂಬೇಡ್ಕರ್, ರಾಜಕುಮಾರ ಕಪನೂರ, ಶಿವಾನಂದ ಪಾಟೀಲ, ವಿಠಲ ಜಾಧವ, ಅಝಮನ್ ಗೋಲಾ, ಯಲ್ಲಪ್ಪ ನಾಯ್ಕೋಡಿ, ಅಬ್ದುಲ್ ರಹಮಾನ್, ಅಜಗರ್ ಚುಲಬುಲ್, ಭೀಮರೆಡ್ಡಿ ಪಾಟೀಲ ಕುರಕುಂದಿ, ಅಬ್ದುಲ್ ರಹೀಂ, ಅಪ್ಪರಾವ್ ಬೆಣ್ಣುರ, ಶೇಕ್ ಬಾಬಾ, ಶರಣು ಮೋದಿ, ವಿಶಾಲ ದರ್ಗಿ, ಸಿದ್ರಾಮ ವಳಕೇರಿ, ಸುರೇಶ ತಿವಾರಿ, ಮಲ್ಲಮ್ಮ ವಳಕೇರಿ, ಅಧಿಕಾರಿಗಳಾದ ಶ್ರೀಕಾಂತ ಕಟ್ಟೀಮನಿ, ಮಾರುತಿ ಗೋಖಲೆ, ಅಮೀನ್ ಮಕ್ತಾರ ಅಹಮ್ಮದ್ ಮತ್ತಿತರರು ಸಚಿವರೊಂದಿಗೆ ಉಪಸ್ಥಿತರಿದ್ದರು.