ಶಿಲ್ಪಕಲಾ ಅಕಾಡೆಮಿಗೆ ಮಹಾದೇವಪ್ಪ
ಚಿತ್ತಾಪುರ: ತನ್ನ ಪಾಡಿಗೆ ತಾನು ಶಿಲ್ಪಕಲೆ ಕೆಲಸ ಮಾಡುತ್ತಾ ಪರಿಚಯ ಬಯಸದೆ ಗ್ರಾಮೀಣ ಭಾಗದಲ್ಲಿ ನೆಲಸಿದ ಚಿತ್ತಾಪುರ ತಾಲೂಕಿನ ದಿಗ್ಗಾಂವ ಗ್ರಾಮದ ಮಹಾದೇವಪ್ಪ ಶಿಲ್ಪಿಗೆ ಶಿಲ್ಪಕಲೆ ಅಕಾಡೆಮಿ ಅಧ್ಯಕ್ಷ ಸ್ಥಾನ ಒದಗಿ ಬಂದಿದೆ.
ಅಧ್ಯಕ್ಷ ಸ್ಥಾನ ಬರುತ್ತದೆ ಎಂದು ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಕಳೆದ 10 ವರ್ಷ ಹಿಂದೆ 2002ರಲ್ಲಿ ಶಿಲ್ಪಕಲೆ ಅಕಾಡೆಮಿ ನೀಲಕಂಠಚಾರ್ಯ ಅವರ ಅಧ್ಯಕ್ಷತೆಯಲ್ಲಿ ಅಕಾಡೆಮಿ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ರಜಿಸ್ಟರ್ ಮರಿಸ್ವಾಮಿಯವರು ನನ್ನನ್ನು ಅಧ್ಯಕ್ಷನನ್ನಾಗಿ ಮಾಡಲು ಪ್ರಯತ್ನಿಸಿದರು. ಆದರೆ ಚಲಪತಿಯವರು ಆಧ್ಯಕ್ಷರಾದರು.
ಹತ್ತು ವರ್ಷ ಹಿಂದೆ ಅಧ್ಯಕ್ಷನಾಗುವ ನಿರೀಕ್ಷೆ ಹೊಂದಿದ್ದೆ. ಆದರೆ ಆ ನೀರೀಕ್ಷೆ ಇಂದು ಈಡೇರಿದೆ. ಈಗ ನಾನು ಅಧ್ಯಕ್ಷನಾಗುತ್ತೇನೆಂಬ ನಿರೀಕ್ಷೆ ನನಗಿರಲಿಲ್ಲ. ಇದು ಬಯಸದೆ ಬಂದ ಭಾಗ್ಯ ಎಂದು ಬಾವಿಸಿದ್ದೇನೆಂದು 'ಕನ್ನಡಪ್ರಭ' ಪ್ರತಿನಿಧಿಯೊಂದಿಗೆ ತಮ್ಮ ಸಂತಸ ಹಂಚಿಕೊಂಡರು.
ತಾವು ಸದಸ್ಯರಾದಾಗ ನಾಲ್ಕೈದು ಕಾರ್ಯಾಗಾರಗಳನ್ನು ಮಾಡಲಾಗಿದೆ. ಇನ್ನೂ ಅಧಿಕೃತವಾಗಿ ಆದೇಶ ಬಂದಿಲ್ಲ. ಅಧಿಕಾರ ಸ್ವೀಕರಿಸಿದ ನಂತರ ಮುಂದಿನ ಯೋಜನೆಗಳನ್ನು ರೂಪಿಸಿಕೊಳ್ಳತ್ತೇನೆ. ಎಲೆ ಮರೆಕಾಯಿಯಂತೆ ಇದ್ದ ಪ್ರತಿಭೆಗಳನ್ನು ಗುರುತಿಸಿ ಅವರ ಕಲೆಯನ್ನು ರಾಜ್ಯಾದ್ಯಂತ ಪ್ರಚಾರ ಪಡಿಸಿ ಅವರಿಗೆ ಸೂಕ್ತ ಸೌಲಭ್ಯ ಒದಗಿಸುವ ಯೋಜನೆ ರೂಪಿಸುವೆ ಎಂದು ಹೇಳಿದರು.