ದೇಶದ ಸುಭದ್ರತೆಗೆ ಮೋದಿ ಬೆಂಬಲಿಸಿ
ಕ.ಪ್ರ. ವಾರ್ತೆ ಜೇವರ್ಗಿ ಮಾ.3
ದೇಶದಲ್ಲಿನ ಹಿಂದೂಗಳ ರಕ್ಷಣೆಗೆ ಹಾಗೂ ದೇಶದ ಏಕತೆ, ಅಖಂಡತೆ ಹಾಗೂ ಸುಭದ್ರತೆ ಕಾಪಾಡುವ ನಿಟ್ಟಿನಲ್ಲಿ ದೇಶದ ಜನತೆ ನರೇಂದ್ರ ಮೋದಿಯನ್ನು ಬೆಂಬಲಿಸುವುದು ಅಗತ್ಯವೆಂದು ಶ್ರೀ ರಾಮಸೇನೆಯ ರಾಜ್ಯಾಧ್ಯಕ್ಷ ಪ್ರಮೋದ ಮುತಾಲಿಕ್ ಕರೆ ನೀಡಿದರು.
ತಾಲೂಕಿನ ಜೇರಟಗಿ ಗ್ರಾಮದಲ್ಲಿ ಶ್ರೀರಾಮಸೇನೆ ಗ್ರಾಮ ಘಟಕದ ವತಿಯಿಂದ ಇತ್ತೀಚೆಗೆ ಸರ್ದಾರ್ ಶರಣಗೌಡ ಇನಾಮದಾರ ವೇದಿಕೆಯಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ 150ನೇ ಜಯಂತ್ಯುತ್ಸವ ಹಾಗೂ ವಿರಾಟ್ ಹಿಂದೂ ಸಮಾವೇಶದಲ್ಲಿ ಮಾತನಾಡಿದರು.
ದೇಶ ಸುಭದ್ರತೆಗೆ ಮೋದಿ ಪ್ರಧಾನಿಯಾಗಲಿ: ದೇಶದಲ್ಲಿ ಶೇ.80ರಷ್ಟು ಹಿಂದೂಗಳಿದ್ದು, ರಾಜಕೀಯ ಪಕ್ಷಗಳು ಹಿಂದೂಗಳನ್ನು ಕಡೆಗಣಿಸುತ್ತಿರುವುದು ಸರಿಯಲ್ಲ. ನರೇಂದ್ರ ಮೋದಿ ಅವರನ್ನು ದೇಶದ 2ನೇ ಸರ್ದಾರ್ ವಲ್ಲಭಭಾಯಿ ಪಟೇಲ್ ಎಂದು ಬಣ್ಣಿಸಿದ ಮುತಾಲಿಕ್, ದೇಶ ಸುಭದ್ರವಾಗಿರಲು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಹಾಗೂ ಸಂಪೂರ್ಣ ಗೋಹತ್ಯೆ ತಡೆಯಲು ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂದು ತಿಳಿಸಿದರು.
ಶ್ರೀ ರಾಮಸೇನೆಯ ರಾಜ್ಯ ಗೌರವಾಧ್ಯಕ್ಷ ಹಾಗೂ ಆಂದೋಲಾ ಕರುಣೇಶ್ವರ ಮಠದ ಪೀಠಾಧಿಪತಿ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿದರು. ಸಮಾವೇಶಕ್ಕೂ ಮುನ್ನ ಪ್ರಮೋದ ಮುತಾಲಿಕ್ ಅವರನ್ನು ಜೇರಟಗಿ ಬಸ್ ನಿಲ್ದಾಣದಿಂದ ಮುಖ್ಯ ವೇದಿಕೆವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆ ತರಲಾಯಿತು.
ಹೊನ್ನಕಿರಣಗಿಯ ಚಂದ್ರಗುಂಡ ಶಿವಾಚಾರ್ಯಯರು, ಶ್ರೀನಿವಾಸ ಸರಡಗಿಯ ರೇವಣಸಿದ್ಧ ಶಿವಾಚಾರ್ಯರು, ಗಡಿ ಗೌಡಗಾಂವದ ಶಾಂತವೀರ ಶಿವಾಚಾರ್ಯರು, ಯಂಕಂಚಿಯ ಅಭಿನವ ರುದ್ರಮುನಿ ಶಿವಾಚಾರ್ಯರಕು ಸಾನ್ನಿಧ್ಯ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ರೇವುನಾಯಕ್ ಬೆಳಮಗಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಪ್ರವೀಣಕುಮಾರ ಕುಂಟೋಜಿಮಠ, ವಿದ್ಯಾಸಾಗರ ಕುಲಕರ್ಣಿ, ಧರ್ಮಣ್ಣ ದೊಡ್ಡಮನಿ, ಎಂ.ಬಿ. ಪಾಟೀಲ್ ಹರವಾಳ, ಭೀಮರಾವ ಗುಜಗೊಂಡ, ದೇವಿಂದ್ರಪ್ಪ ಸರ್ಕಾರ, ಶರಣಬಸಪ್ಪ ಕಾಡಾದಿ, ಬಿ.ಆರ್. ಪಾಟೀಲ್, ಡಾ. ಪಿ.ಎಂ. ಮಠ, ಎಂ.ಎಸ್. ಪಾಟೀಲ್, ರಾಘವೇಂದ್ರ ಕುಲಕರ್ಣಿ ಆಗಮಿಸಿದ್ದರು. ಸಾಹಿತಿ ಕೆ.ಎಂ. ಮಠ, ವೀರೇಶ ಪಾಟೀಲ್, ಶರಣು ಕೋಳಕೂರ, ಮಲ್ಲಶೆಟ್ಟೆಪ್ಪಗೌಡ ಹಿರೇಗೌಡ, ಅಶೋಕ ಗುಡೂರ ಇತರರು ಪಾಲ್ಗೊಂಡಿದ್ದರು. ರೇಣುಕ ಗವಾಯಿ, ಶಾಂತಕುಮಾರ ಜೇರಟಗಿ ಪ್ರಾರ್ಥಿಸಿದರು. ಮಡಿವಾಳಯ್ಯ ಕುಕನೂರ ಸ್ವಾಗತಿಸಿದರು. ಪ್ರವೀಣಕುಮಾರ ಕುಂಟೋಜಿಮಠ ನಿರೂಪಿಸಿದರು. ಮಹಾಂತಯ್ಯ ಮಠಪತಿ ವಂದಿಸಿದರು.