30ರವರೆಗೆ ನೀರು ಹರಿಸಲು ರೈತರ ಆಗ್ರಹ
ಸುರಪುರ: ನಾರಾಯಣಪುರದ ಬಸವಸಾಗರ ಜಲಾಶಯದಿಂದ ಎಡ ಮತ್ತು ಬಲದಂಡೆ ಕಾಲುವೆಗಳಿಗೆ ಮಾರ್ಚ್ 30ರವರೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ(ಹಸಿರು ಸೇನೆ) ಗಾಂಧೀಜಿ ವೃತ್ತದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.
ನೇತೃತ್ವ ವಹಿಸಿದ್ದ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಮಾತನಾಡಿ, ಕಾಲುವೆಗಳಿಗೆ ಮಾರ್ಚ್ 10ರವರೆಗೆ ನೀರು ಹರಿಸುವ ನೀರಾವರಿ ಸಲಹಾ ಸಮಿತಿಯ ತೀರ್ಮಾನ ಅವೈಜ್ಞಾನಿಕವಾಗಿದ್ದು, ರೈತರು ಕಣ್ಣೀರಿನಲ್ಲಿ ಕೈ ತೊಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಏಕಾಏಕಿ ನೀರು ಸ್ಥಗಿತಗೊಳಿಸುವುದರಿಂದ ರೈತರು ಈಗಾಗಲೇ ಜಮೀನಿನಲ್ಲಿ ಬೆಳೆದ ಹತ್ತಿ, ಶೇಂಗಾ, ಮೆಣಸಿನಕಾಯಿ ಸೇರಿದಂತೆ ಇತರೆ ಬೆಳೆಗಳು ಒಣಗಿ ಹೋಗುತ್ತವೆ. ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ರೈತರ ಹಿತಾಸಕ್ತಿ ಕಡೆಗಣಿಸಲಾಗಿದೆ. ಬತ್ತ ಮತ್ತು ತೊಗರಿ ಖರೀದಿ ಕೇಂದ್ರಗಳಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. ಆದರೆ ಸರ್ಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಕಾಣಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿ, ಜಿಲ್ಲೆಯಾದ್ಯಂತ ಎಪಿಎಂಸಿಗಳಲ್ಲಿ ರೈತರಿಗೆ ಬಿಳಿ ಚೀಟಿ ನೀಡಿ ಮೋಸ ಮಾಡಲಾಗುತ್ತಿದೆ. ತಕ್ಷಣವೇ ಇದನ್ನು ನಿಲ್ಲಿಸಬೇಕು. ಅನಧಿಕೃತ ಖರೀದಿದಾರರಿಗೆ ಕಡಿವಾಣ ಹಾಕಬೇಕು. ಟ್ರ್ಯಾಕ್ಟರ್ ಸಾಲ ವಸೂಲಾತಿಯಲ್ಲಿ ಬ್ಯಾಂಕ್‌ಗಳು ನೀಡುವ ಕಿರುಕುಳ ತಪ್ಪಿಸಬೇಕು ಎಂದು ಒತ್ತಾಯಿಸಿದರು.
ಪ್ರತಾಪರೆಡ್ಡಿ ಪಾಟೀಲ್, ಅಯ್ಯಣ್ಣ ಹಾಲಬಾವಿ, ಮುಖಂಡರಾದ ಲಕ್ಷ್ಮಣ ನಾಯಕ, ಸಂಗಣ್ಣ ಅಂಗಡಿ, ಚನ್ನಪ್ಪ ಗೊಬ್ಬೂರು, ಬಸವರಾಜ ಮಂಗೀಹಾಳ, ಪರಮಣ್ಣ ಮಂಗೀಹಾಳ, ತಿಪ್ಪಣ್ಣ ಚಾಗಲಿ, ಮಲ್ಲನಗೌಡ ಕಚಕನೂರು, ಯಂಕಾರೆಡ್ಡಿ, ಅಯ್ಯಣ್ಣ ಅರಳಹಳ್ಳಿ, ಮಲ್ಲಣ್ಣ ದಿವಾನ್, ರಾಘವೇಂದ್ರ ದಿವಾನ್, ಮಹಾಲಿಂಗಪ್ಪ ತಳಗೇರಿ, ಪ್ರತಾಪಗೌಡ ಕಚಕನೂರು, ಸಿದ್ದನಗೌಡ ಹೆಬ್ಬಾಳ ಇದ್ದರು.