ಆಳಂದದಲ್ಲಿ ಹಿಮಪಾತ!
ಕ.ಪ್ರ. ವಾರ್ತೆ ತಡಕಲ್/ದಣ್ಣೂರ ಮಾ.4
ಇನ್ನೇನ ದೌಂತಿ ಮುಗೀತು, ಹೊಲದಿಂದ ಮನಿಗೆ ಹೋಗಬೇಕು ಅನ್ನೋದ್ರೊಳ್ಗೆ ಮಳಿ ಬೀಳಕ್ಕತ್ತು. ಹನಿ ನೋಡಿದ್ರ ಬಕ್ಳ ಧಮ್ಮ ಇದ್ವು. ಇದೇನಪ್ಪಾ ವಿಚಿತ್ರ ಅದ ಮಳಿ ಅನ್ನೋದ್ರೊಳ್ಗೇ ಕವಣಿಗಲ್ಲ ಬೀಸದ್ಹಂಗ ಬೀಳಕ್ಕ ಶುರುವಿಟ್ವು ಆಣಿಕಲ್ಲ. 1 ಗಂಟಾ ಆಕಾಶದಿಂದ ಕಲ್ಲಿನ ಮಳಿ ಸುರೀತು. 1 ಫೂಟ್(ಅಡಿ)ಗಿಂತ ಹೆಚ್ಚ ಹಿಮ ಊರಾಗ, ಹೊಲದೊಳಗ ನಿಂತಿತ್ತು. ಇಡೀ ರಾತ್ರಿ ಆಲಿಕಲ್ಲು ರಾಶಿ ಹಂಗ ಕುಂತಿತ್ತು...
ಆಳಂದ ತಾಲೂಕಿನ ತಡಕಲ್, ಬೆಳಮಗಿ, ಕರಹರಿ, ವಿ.ಕೆ.ಸಲಗರ, ಸನಗುಂದಿ ಸೇರಿದಂತೆ ಸುತ್ತಲಿನ ಹತ್ತಾರು ಹಳ್ಳಿ ಮಂದಿ ಸೋಮವಾರ ಸೂರ್ಯಾಸ್ತ ಅಕ್ಷರಶಃ ಹಿಮಪಾತದ ಕರಾಳ ಅನುಭವಕ್ಕೆ ಸಾಕ್ಷಿಯಾದ್ರು.
ಹಿಮಪಾತದಂತಿತ್ತು: ನೋಡನೋಡುತ್ತಿದ್ದಂತೆಯೇ ಮನೆಯಂಗಳದಲ್ಲಿ ಆಲಿಕಲ್ಲು ರಾಶಿ ಕಂಡರೆ, ಹೋಲದಲ್ಲೆಲ್ಲಾ ಹಿಮದ ಮಳೆ, ಲಿಂಬೆಹಣ್ಣಿನ ಗಾತ್ರದಲ್ಲಿ ಸುರಿದ ಆಲಿಕಲ್ಲುಗಳು ಕಪ್ಪು ಹೊಲದಲ್ಲಿ ಬೆಳ್ಳನೆಯ ರಾಶಿಯಾಗಿ ಕುಳಿತದ್ದು ಕಂಡ್ರೆ ಹಿಮಪಾತದ ಸನ್ನಿವೇಶ ಅಲ್ಲಿ ನಿರ್ಮಾಣವಾಗಿತ್ತು.
ಮಂಗಳವಾರ ಬೆಳಗ್ಗೆ ಈ ಗ್ರಾಮಗಳಲ್ಲಿ ಸಂಚರಿಸಿದ 'ಕನ್ನಡಪ್ರಭ' ಪ್ರತಿನಿಧಿ ಅನುಭವಕ್ಕೆ ಬಂದಿದ್ದು ಮೈಕೊರೆಯುವ ಚಳಿ, ಆಲಿಕಲ್ಲು ಮಳೆಗೆ ನೆಲಕಚ್ಚಿದ ಜೋಳ, ಜವಿಗೋದಿ, ದ್ರಾಕ್ಷಿ, ಪಪ್ಪಾಯಿ, ಕಬ್ಬು ದಾರಿಯುದ್ದಕ್ಕೂ ಕಂಡವು. ರೈತರು ಇನ್ನೇನು ಜೋಳ, ಗೋದಿ ರಾಶಿ ಮಾಡಿ ಧಾನ್ಯದ ಚೀಲಗಳೊಂದಿಗೆ ಲಕ್ಷ್ಮೀಯನ್ನು ಮನೆ ತುಂಬಿಸಿಕೊಳ್ಳುವ ಹಂಬಲದಲ್ಲಿದ್ದರು. ಅಷ್ಟರೊಳಗೆ ಸುರಿದ ಅಕಾಲಿಕ ಆಲಿಕಲ್ಲು ಮಳೆ ರೈತರ ಕನಸನ್ನೆಲ್ಲ ನುಚ್ಚುನೂರು ಮಾಡಿತು.
ಕಂಡರಿಯದ ಅನುಭವ: 'ನಮ್ಮೂರಾಗ 11 ವರ್ಷದ ಹಿಂದೆ ಭಾರಿ ಮಳೆ ಸುರಿದಿತ್ತು. ಆದ್ರೆ ಆಲಿಕಲ್ಲು ಬಿದ್ದಿರಲಿಲ್ಲ. ಈಗ ನೋಡಿದ್ರ ಮಳೆ ಜೊತೆಗೇ ಆಲಿಕಲ್ಲು ಸುರಿದು ಆಘಾತ ಉಂಟಾಗಿದೆ. ಹೊಲದೊಳಗ ಬೆಳೆದು ನಿಂತಿದ್ದ ಬೆಳೆ ಹಾಳಾಗಿದೆ. ಊರಾಗ ಮನೆ ಛಾವಣಿ, ಅಂಗಳದಲ್ಲೆಲ್ಲಾ ಹಿಮರಾಶಿ. ಇದನ್ನು ಕಂಡು ನಾವು ಕಂಗಾಲಾಗಿದ್ದೇವೆ. ಈ ಪರಿಯಲ್ಲಿ ಮಳೆ, ಆಲಿಕಲ್ಲು ಸುರಿದದ್ದು ಇದೇ ಮೊದಲು' ಎನ್ನುತ್ತಾರೆ ತಡಕಲ್ ಊರಿನ ಹಿರಿಯರು.
ಇಲ್ಲಿನ ಗಫೂರ್ ಕೊತ್ಲಾಲ್, ಮಹಾದೇವಿ ಬಳ್ಳಿ, ಹರ್ಷಾನಂದ ಗುತ್ತೇದಾರ್, ನಿರ್ಮಲಾ ನಾಟೀಕಾರ್ ಸೇರಿದಂತೆ ಹಲವರಿಗೆ ಸೇರಿದ್ದ ನೂರಾರು ಎಕರೆ ದ್ರಾಕ್ಷಿ ತೋಟಗಳು ಹಾಳಾಗಿವೆ. ಬಳ್ಳಿಯವರ ತೋಟದಲ್ಲಂತೂ ದ್ರಾಕ್ಷಿ ಉದುರಿ ನೆಲಕಚ್ಚಿದೆ. ಇಡೀ ತೋಟವೇ ಹಾಳಾಗಿ ಭಣಗುಡುತ್ತಿದೆ. ಗಫೂರ್ ಹಾಗೂ ಬಳ್ಳಿ, ಹರ್ಷಾನಂದರಿಗೆ ಸೇರಿದ್ದ ಲಕ್ಷಾಂತರ ರುಪಾಯಿ ದ್ರಾಕ್ಷಿ ಹಾಳಾಗಿದೆ.
ಆಲಿಕಲ್ಲು ಮಳೆ ಆಳಂದದ ಖಜೂರಿ, ನರೋಣಾ ವಲಯದಲ್ಲಂತೂ ಭಾರಿ ಪ್ರಮಾಣದ ಬೆಳೆ ಹಾನಿಗೆ ಕಾರಣವಾಗಿದೆ. ಪಪ್ಪಾಯಿ ಗಿಡಗಳು ನೆಲಕಚ್ಚಿವೆ. ತಾಲೂಕಿನಲ್ಲಿ ಬೆಳೆದು ನಿಂತಿದ್ದ ತೋಟಗಾರಿಕೆ ಹಾಗೂ ಖುಷ್ಕಿ ಭೂಮಿಯಲ್ಲಿ ಬೆಳೆದ ಹಲವು ಬೆಳೆಗಳು ಮಣ್ಣು ಪಾಲಾಗಿ ಕೋಟ್ಯಂತರ ರು. ಮೌಲ್ಯದ ಬೆಳೆ ನಷ್ಟವಾಗಿದೆ.
ಇಲ್ಲೆಲ್ಲಾ ಭಾರಿ ಹಾನಿ...: ಆಳಂದ ತಾಲೂಕಿನ ನಿರುಗುಡಿ, ಮಟಕಿ, ತೀರ್ಥ, ತಡಕಲ್, ಬೆಳಮಗಿ, ಖಜೂರಿ, ಕಿಣ್ಣಿಸುಲ್ತಾನ, ರುದ್ರವಾಡಿ, ಜಮಗಾ ಕಣಮುಸ್, ಬೆಳಮಗಿ, ಸನಗುಂದಿ, ಕರಹರಿ, ವಿಕೆ ಸಲಗರ, ಕಮಲಾನಗರ, ಬೆಳಮಗಿ, ದಣ್ಣೂರು ಸೇರಿದಂತೆ ಹತ್ತಾರು ಗ್ರಾಮಗಳಲ್ಲಿನ ದ್ರಾಕ್ಷಿ, ಕಬ್ಬು, ಜೋಳ, ಗೋದಿ, ಕಡಲೆ, ಕುಸಬೆ ಬೆಳೆ ಆಲಿಕಲ್ಲು ಹೊಡೆತಕ್ಕೆ ಹಾಳಾಗಿವೆ.
ಬೆಳಮಗಿಯ ರೈತ ಸುಭಾಷ ಮುರುಡ ಅವರಿಗೆ ಸೇರಿದ 15 ಎಕರೆ ಪಪ್ಪಾಯಿ ಹಣ್ಣಿನ ಹೊಲ ಮಳೆ ಹೊಡೆತಕ್ಕೆ ಹಾಳಾಗಿದೆ. ಬಿರುಗಾಳಿಗೆ ಅಲ್ಲಲ್ಲಿ ಗಿಡಮರಗಳು ಉರುಳಿ ಬಿದ್ದಿವೆ.
ದಣ್ಣೂರಿನ ನೀರೂಲನಂಕ ಮಾಲೀಪಾಟೀಲ್, ಅಪ್ಪಾರಾವ್, ಸಿಡಿ ಪಾಟೀಲ್ ಸೇರಿದಂತೆ ಅನೇಕರ ದ್ರಾಕ್ಷಿ ತೋಟ ಮಳೆಯ ಹೊಡೆತಕ್ಕೆ ನಲುಗಿದೆ. ಇಲ್ಲೆಲ್ಲಾ ದ್ರಾಕ್ಷಿ ಗೊಂಚಲು ಗಿಡದಲ್ಲೇ ಬಣ್ಣ ಬದಲಾಯಿಸಿ ಕೊಳೆತು ನೆಲಕಚ್ಚುತ್ತಿದೆ ಎಂದು ನೋವಿನಿಂದ ಹೇಳುತ್ತಿದ್ದಾರೆ.
'ಕನ್ನಡಪ್ರಭ' ಜೊತೆ ಮಾತನಾಡಿದ ದಣ್ಣೂರ ರೈತರು ಗಿಡದಲ್ಲಿ ದ್ರಾಕ್ಷಿ ಗೊಂಚಲು ಇವೆ, ಅವು ಇನ್ನೆರಡು ದಿನದಲ್ಲಿ ಕೆಂಪಾಗಿ ನೆಲ ಸೇರುತ್ತವೆ. ಇರುವ ಗೊಂಚಲು ಕಡಿದು ಮಾರಿದರೆ ಬೆಲೆಯೂ ಬಾರದು, ನಾವು ಹಾಳಾಗಿ ಹೋದೆವು ಎನ್ನುತ್ತಾರೆ ಶಿವಶರಣಪ್ಪ ಪೊಲೀಸ್ ಪಾಟೀಲ್ ಹಾಗೂ ಇತರ ರೈತರು.
ಮಳೆಯಿಂದ ವಿದ್ಯುತ್ ಪರಿವರ್ತಕಗಳ ಹಾನಿ
ಚಿಂಚೋಳಿ: ತಾಲೂಕಿನಲ್ಲಿ ಕಳೆದ 3 ದಿನಗಳಿಂದ ಸಿಡಿಲು- ಗುಡುಗು ಸಹಿತ ಅಕಾಲಿಕ ಮಳೆಯಿಂದಾಗಿ 10 ವಿದ್ಯುತ್ ಕಂಬಗಳು ಮತ್ತು ಸಿಡಿಲಿಗೆ 6 ವಿದ್ಯುತ್ ಪರಿವರ್ತಕಗಳು ಹಾನಿಯಾಗಿವೆ ಎಂದು ಜೆಸ್ಕಾಂ ಎಇಇ ಪರಮೇಶ್ವರ ಬೀರಾದಾರ ತಿಳಿಸಿದ್ದಾರೆ.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನಲ್ಲಿ ಅಕಾಲಿಕ ಮಳೆಯಿಂದಾಗಿ ಚಿಂಚೋಳಿ ಪಟ್ಟಣದಲ್ಲಿ 3 ವಿದ್ಯುತ್ ಕಂಬಗಳು ಸೂರು ನಾಯಕ, ಫತ್ತು ನಾಯಕ ತಾಂಡದಲ್ಲಿ 6 ವಿದ್ಯುತ್ ಕಂಬಗಳು ಮತ್ತು 1 ವಿದ್ಯುತ್ ಪರಿವರ್ತಕ ಹಾನಿಯಾಗಿದೆ. ಕುಂಚಾವರಂ ಗ್ರಾಮದಲ್ಲಿ 2 ವಿದ್ಯುತ್ ಕಂಬಗಳು ಹಾನಿಯಾಗಿವೆ. ಭಾರಿ ಸಿಡಿಲಿನ ಹೊಡೆತಕ್ಕೆ 6 ವಿದ್ಯುತ್ ಪರಿವರ್ತಕಗಳು ಸುಟ್ಟು ಹೋಗಿದ್ದು, ಇದರಿಂದ ತಾಲೂಕಿನಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ. ಹಿಟ್ಟಿನ ಗಿರಣಿ,ಕುಡಿಯುವ ನೀರು ಸರಬರಾಜಿನಲ್ಲಿ ತೊಂದರೆ ಆಗದಂತೆ ಹಾಗೂ ಸಾರ್ವಜನಿಕರಿಗೆ ವಿದ್ಯುತ್ ಸಮಸ್ಯೆ ಆಗದಂತೆ ವಿದ್ಯುತ ತಂತಿ ಜೋಡಣೆ ಕಾರ್ಯ ಪ್ರಗತಿಯಲ್ಲಿದೆ ಎಂದು ಜೆಸ್ಕಾಂ ಎಇಇ ಪರಮೇಶ್ವರ ಬಿರಾದಾರ ತಿಳಿಸಿದ್ದಾರೆ.
ತಾಲೂಕಿನ ಪಟಪಳ್ಳಿ, ಎಂಪಳ್ಳಿ, ದೇಗಲಮಡಿ, ಫತ್ತೇಪುರ, ಸಿಕಾರ ಮೋತಕಪಳ್ಳಿ, ಗ್ರಾಮಗಳಲ್ಲಿ ಕಳೆದ 4 ದಿನಗಳಿಂದ ವಿದ್ಯುತ್ ಸಂಪರ್ಕವಿಲ್ಲದ ಕಾರಣ ಹಿಟ್ಟಿನ ಗಿರಣಿ ನಿಂತು ಹೋಗಿವೆ. ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ ಎಂದು ಮಲ್ಲಿಕಾರ್ಜುನ ಗಡಿಕೇಶ್ವರ ತಿಳಿಸಿದ್ದಾರೆ.
ಕಡೆಹಳ್ಳಿ ಹೊಲದಲ್ಲಿ ಬಿದ್ದ ಭಾರಿ ಗಾತ್ರದ ಆಲಿಕಲ್ಲು
ಶಹಾಬಾದ್: ಕಡೆಹಳ್ಳಿ ಗ್ರಾಮದಲ್ಲಿ ನಗರದ ಉದ್ಯಮೆ ಮಹಾಲಿಂಗಪ್ಪ ಇಂಗಿನಶೆಟ್ಟಿಯವರ ಹೊಲದಲ್ಲಿ ಮಂಗಳವಾರ ಭಾರಿ ಆಲಿಕಲ್ಲುಗಳು ಪತ್ತೆಯಾಗಿವೆ. ಇಂಗಿನಶೆಟ್ಟಿಯವರ ಹೊಲದಲ್ಲಿ ಹೊಸ ಪೈಪ್ಲೈನ್ಗಾಗಿ ಜೆಸಿಪಿಯಿಂದ ಅಗೆದ ಸ್ಥಳದಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಬಿದ್ದಿರುವ ಭಾರಿ ಗಾತ್ರದ ಆಲಿಕಲ್ಲುಗಳು ಹರಿದು ಬಂದು ತೆಗ್ಗಿನಲ್ಲಿ ನಿಂತಿವೆ. ಚಿಕ್ಕ ಗಾತ್ರದಿಂದ ಇಟ್ಟಿಗೆ ಆಕಾರದ ಹಾಗೂ ಕೆಲವು ಒಂದರಿಂದ ಮೂರು ಅಡಿ ದೊಡ್ಡದಾಗ ಅಲಿಕಲ್ಲುಗಳು ಮಂಗಳವಾರ ಕರಗದೆ ಹಾಗೆ ಇದ್ದುದರಿಂದ ನಡುವಿನಳ್ಳಿ, ಕಡೆಹಳ್ಳಿ ಗ್ರಾಮಗಳ ಕೆಲ ಗ್ರಾಮಸ್ಥರು ಈ ಅಲಿಕಲ್ಲುಗಳನ್ನು ಎತ್ತಿಕೊಂಡು ಮನೆಗೆ ಒಯ್ದಿದ್ದಾರೆ. ಮಂಗಳವಾರ ಹೊಲಕ್ಕೆ ಭೇಟಿ ನೀಡಿದ ಮಹಾಲಿಂಗಪ್ಪ ಇಂಗಿನಶೆಟ್ಟಿಯವರ ಪುತ್ರ ಈಶ್ವರಾಜ ಇಂಗಿನಶೆಟ್ಟಿ ತಮ್ಮ ಹೊಲದಲ್ಲಿ ಬಿದ್ದ ಭಾರಿ ಗಾತ್ರದ ಆಲಿಕಲ್ಲುಗಳನ್ನು ಕಂಡು ಪೋಟೋ ಕ್ಲಿಕ್ಕಿಸಿದ್ದಾರೆ.
ವಿದ್ಯುತ್ ಸಂಪರ್ಕ ಕಡಿತ
ಚಿಂಚೋಳಿ: ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಅಕಾಲಿಕ ಮಳೆಯಾಗುತ್ತಿರುವುದರಿಂದ ಕಟಾವಿಗೆ ಬಂದ ಜೋಳದ ಬೆಳೆ ಸಂಪೂರ್ಣ ನೆಲಕ್ಕುರುಳಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ.
ತಾಲೂಕಿನ ಅನೇಕ ಗ್ರಾಮಗಳಲ್ಲಿ ಕಳೆದ ಮೂರು ದಿನಗಳಿಂದ ಗುಡುಗು ಮಿಂಚಿನ ಮಳೆಯಾಗುತ್ತಿದ್ದು ಕಟಾವಿಗೆ ಬಂದ ಜೋಳದ ಬೆಳೆ ಉಳ್ಳಾಗಡ್ಡಿ ಹೂ, ಹಾನಿಯಾಗಿದ್ದು ರೈತರು ಆತಂಕಪಡುವಂತಾಗಿದೆ. ವಿದ್ಯುತ್ ಕಂಬಗಳು ಅಲ್ಲಲ್ಲಿ ನೆಲಕ್ಕುರುಳಿವೆ. ಮತ್ತು ವಿದ್ಯುತ್ ತಂತಿ ಕಡಿತದಿಂದಾಗಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ. ತಾಲೂಕಿನ ಕನಕಪುರ, ಚಿಮ್ಮನಚೋಡ, ಐನಾಪೂರ,ಸಾಲೇಬೀರನಳ್ಳಿ, ಹಸರಗುಂಡಗಿ, ಚಂದನಕೇರಾ, ಗಾರಂಪಳ್ಳಿ ಮುಂತಾದ ಕಡೆಗಳಲ್ಲಿ ಸೋಮವಾರ ಸಂಜೆ ಅಕಾಲಿಕ ಆಲಿಕಲ್ಲು ಮಳೆಯಾಗಿದೆ. ತಾಲೂಕಿನ ಅನೇಕ ಕಡೆಗಳಲ್ಲಿ ಹೂ ಮತ್ತು ಮಿಡಿಗಾಯಿಗಳಿಂದ ಕಂಗೊಳಿಸುತ್ತಿದ್ದ ಮಾವಿನ ಮರಗಳು ಹೂ ಮತ್ತು ಕಾಯಿ ಅಕಾಲಿಕ ಮಳೆ ಗಾಳಿಗೆ ಉದುರಿ ಹೋಗಿವೆ. ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಗುಡುಗು ಮಿಂಚಿನ ಮಳೆಯಾಗುತ್ತಿದ್ದು, ಯಾವುದೇ ಜನಜಾನುವಾರು ಜೀವಕ್ಕೆ ಹಾನಿಯಾಗಿಲ್ಲವೆಂದು ತಹಸೀಲ್ದಾರ ಮೋಹನ ಜೋಶಿ ತಿಳಿಸಿದ್ದಾರೆ.
ಶೇಷಮೂರ್ತಿ ಅವಧಾನಿ