ಕೇಂದ್ರೀಯ ವಿವಿ ಮೊದಲ ಕುಲಪತಿ ಅವಧಿ ಪೂರ್ಣಗೊಳಿಸಿದ ಡಾ. ಮೂರ್ತಿ
ಗುಲ್ಬರ್ಗ: ಇಲ್ಲಿರುವ ಕರ್ನಾಟಕ ಕೇಂದ್ರೀಯ ವಿವಿ ಕುಲಪತಿ ಡಾ. ಶ್ರೀನಿವಾಸ ಮೂರ್ತಿ ಮೊದಲ ಕುಲಪತಿಯವರ ಅವಧಿಯಲ್ಲಿನ ಉಳಿದ ಅವಧಿಯನ್ನು ಪೂರ್ಣಗೊಳಿಸಿ ಫೆ.28ರಂದು ಕುಲಪತಿ ಹುದ್ದೆಯ ತಮ್ಮ ಅಧಿಕಾರ ಸಮ ಕುಲಾಧಿಪತಿ ಡಾ. ಎಂಎನ್ಎಸ್ ರಾವ್ ಅವರಿಗೆ ವಹಿಸಿಕೊಟ್ಟಿದ್ದಾರೆ.
2009ರಲ್ಲಿ ಸ್ಥಾಪನೆಯಾಗಿದ್ದ ಕರ್ನಾಟಕ ಕೇಂದೀಯ ವಿವಿಗೆ ಮೊದಲ ಕುಲಪತಿಗಳಾಗಿ ಡಾ. ಪಠಾಣ ನೇಮಕಗೊಂಡಿದ್ದರು. ಇವರು ವಯೋನಿವೃತ್ತಿಯಾದ ಹಿನ್ನೆಲೆಯಲ್ಲಿ ಅವರ 5 ವರ್ಷ ಅವಧಿಯಲ್ಲಿನ ಉಳಿಕೆ ಅವಧಿಗೆ ಹೊಸ ಕುಲಪತಿಗಳಾಗಿ ಡಾ. ಮೂರ್ತಿ ನೇಮಕಗೊಂಡಿದ್ದರು. ಇದರೊಂದಿಗೆ ಡಾ. ಮೂರ್ತಿ ಕೇಂದ್ರೀಯ ವಿವಿ 2ನೇ ಕುಲಪತಿಗಳಾಗಿದ್ದರು. ಕುಲಪತಿ ಅವಧಿ 5 ವರ್ಷದ್ದು. 2009ರಲ್ಲೇ ಮೊದಲ ಕುಲಪತಿ ನೇಮಕಗೊಂಡಿದ್ದರಿಂದ 2014ರವರೆಗೂ ಆ ಅವಧಿ ಮುಂದುವರಿದಿತ್ತು.
ಜವಾಬ್ದಾರಿ: 2014ರ ಫೆ. 28ರಂದೇ ಡಾ. ಮೂರ್ತಿ ಅವರ ಕುಲಪತಿ ಹುದ್ದೆಯ ಅವಧಿ ಪೂರ್ಣಗೊಂಡಿದ್ದರಿಂದ ಕೇಂದ್ರದ ಮಾನವ ಸಂಪನ್ಮೂಲ ಸಚಿವಾಲಯ ಪತ್ರ ಬರೆದು ಹಿರಿಯರಿಗೆ ಕುಲಪತಿ ಹುದ್ದೆ ಜವಾಬ್ದಾರಿ ನೀಡುವಂತೆ ಸೂಚಿಸಿದ್ದರ ಹಿನ್ನೆಲೆಯಲ್ಲಿ ಡಾ. ಮೂರ್ತಿ ಮಾ. 4ರಂದು ಡಾ. ರಾವ್ ಅವರಿಗೆ ಕುಲಪತಿ ಪ್ರಭಾರಿ ಜವಾಬ್ದಾರಿ ವಹಿಸಿಕೊಟ್ಟಿದ್ದಾರೆ.
ಡಾ. ರಾವ್ ಕರ್ನಾಟಕ ಕೇಂದ್ರೀಯ ವಿವಿ ಕುಲಪತಿಗಳಾಗಿ ಆಗಮಿಸಿ ವರ್ಷ ಕಳೆದಿತ್ತು. ಇವರ ಅವಧಿಯಲ್ಲಿ ವಿವಿ ಜ್ಞಾನಗಂಗೆ ಅಂಗಳದಿಂದ ತನ್ನ ನೂತನ ಕಡಗಂಚಿ ಕ್ಯಾಂಪಸ್ಗೆ ಸ್ಥಳಾಂತರಗೊಂಡಿತ್ತು. ಇಲ್ಲಿ ಅನೇಕ ಕ್ಯಾಂಪಸ್ ಅಭಿವೃದ್ಧಿ ಚಟುವಟಿಕೆಗಳಿಗೂ ಡಾ. ಮೂರ್ತಿ ಚಾಲನೆ ನೀಡಿದ್ದರು. ಜೊತೆಗೇ ಕೇಂದ್ರೀಯ ವಿವಿಯಲ್ಲಿ ಗುಣಮಟ್ಟ ಇರುವಂತೆ ಅನೇಕ ಕಟ್ಟುನಿಟ್ಟು ಕ್ರಮಗಳನ್ನು ಕೈಗೊಂಡು ಅದರಿಂದಲೂ ಹೆಸರು ಮಾಡಿದ್ದರು. ಬೋಧಕ ಸಿಬ್ಬಂದಿ ನೇಮಕದಲ್ಲಿ ಗುಣಮಟ್ಟಕ್ಕೆ ರಾಜಿಯಾಗದೆ, ಸಾರ್ವಜನಿಕವಾಗಿ ತುಂಬ ಸುದ್ದಿಗೆ ಗ್ರಾಸವಾಗಿದ್ದ ಡಾ. ಮೂರ್ತಿ ಹೊಸ ಕ್ಯಾಂಪಸ್ನಲ್ಲಿ ಮಳೆ ನೀರು ಕೊಯ್ಲು, ಪರಿಸರ ಸ್ನೇಹಿಯಂತಹ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಮಾದರಿ ಕೇಂದ್ರೀಯ ವಿವಿ ಕ್ಯಾಂಪಸ್ ರೂಪಿಸಲು ಪ್ರಯತ್ನಿಸಿದ್ದರು.