ಜಿಲ್ಲಾಧಿಕಾರಿಗೆ ರೈತರ ಮನವಿ
ಯಾದಗಿರಿ: ಗುರುಮಠಕಲ್ ಮತಕ್ಷೇತ್ರದ ನಂದೆಪಲ್ಲಿ ಗ್ರಾಮದಿಂದ ಚಲೇರಿ ಹಳ್ಳದವರೆಗೆ ಮರಳು ತೆಗೆಯುವುದನ್ನು ನಿಲ್ಲಿಸುವುದು, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಯಾದಗಿರಿ ತಾಲೂಕಿನಲ್ಲಿ ಎಂಐಎಸ್ ನಿಲ್ಲಿಸುವುದು ಸೇರಿದಂತೆ ವಿಭಿನ್ನ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲೂಕಿನ ವಿವಿಧ ಗ್ರಾಮಗಳ ರೈತರು ಹಾಗೂ ರೈತ ಮುಖಂಡರು ಯಾದಗಿರಿಯ ಜಿಲ್ಲಾಧಿಕಾರಿಗಳ ಕಚೇರಿಯ ಮಂದೆ ಪ್ರತಿಭಟನೆ ನಡೆಸಿ ಮನವಿ ಪತ್ರವನ್ನು ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಎಪಿಎಂಸಿ ಸದಸ್ಯರಾದ ಮಲ್ಲಣ್ಣ ಜೈಗ್ರಾಮ ಅವರು, ನಂದೆಪಲ್ಲಿ ಕರಣಗಿ, ಜೈಗ್ರಾಂ, ಈಡ್ಲೂರ ಮತ್ತು ಚಲೇರಿ ಹಳ್ಳದ ನೀರಿನಿಂದ ರೈತರು ತಮ್ಮ ಹೊಲಗಳಲ್ಲಿ ಬೆಳೆಬೆಳೆದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಅದರೆ ಅಂಧ್ರ ಮೂಲದ ಗುತ್ತಿಗೆದಾರರು ಪ್ರತಿ ನಿತ್ಯ ಟ್ರಾಕ್ಟರ್‌ಗಳ ಮೂಲಕ ಮರಳನ್ನು ಸಾಗಿಸುತ್ತಿರುವುದು ಹಾಗೂ ಲೋಕೋಪಯೋಗಿ ಇಲಾಖೆಯವರು ಮರಳನ್ನು ಸಾಗಿಸಲು ಹಳ್ಳದಲ್ಲಿ ಸರ್ವೆ ಕಾರ್ಯವನ್ನು ಮಾಡುತ್ತಿರುವುದು ಜೀವ ಜಲವನ್ನು ಅಧರಿಸಿ ಜೀವನ ನಡೆಸುತ್ತಿರುವ ರೈತಾಪಿ ಜನತೆಗೆ ತೀವ್ರ ಸಂಕಷ್ಟಕ್ಕೆ ಕಾರಣವಾಗಲಿದೆ. ಈ ಹಿನ್ನೆಲೆಯಲ್ಲಿ ಮರಳು ಸಾಗಣಿಕೆ ಮಾಡುತ್ತಿರುವುದನ್ನು ತಕ್ಷಣದಿಂದಲೇ ನಿಲ್ಲಿಸಿ ರೈತರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.
ಕರವೇ ಜಿಲ್ಲಾಧ್ಯಕ್ಷ ಭೀಮ ನಾಯಕ ಮಾತನಾಡಿ ಕಳೆದ ಒಂದು ತಿಂಗಳಿನಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಯಾದಗಿರಿ ತಾಲೂಕಿನಲ್ಲಿ ಎಂಐಎಸ್ ನಿಲ್ಲಿಸಿರುವುದರಿಂದ ಕೂಲಿ ಕೆಲಸವಿಲ್ಲದೆ, ಇತ್ತ ಹೊಲಗಳಲ್ಲಿ ಬೆಳೆಯಿಲ್ಲದೆ ಗ್ರಾಮೀಣ ಭಾಗದ ಜನತೆ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ತಾಲೂಕಿನ ಯಾವ ಗ್ರಾಮ ಪಂಚಾಯತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವ್ಯವಹಾರ ನಡೆದಿದೆಯೋ, ಅಂತಹ ಗ್ರಾಪಂ ಕೆಲಸ ಕಾರ್ಯಗಳನ್ನು ಮೊಟಕುಗೊಳಿಸಿ. ಆದರೆ ಯಾವುದೇ ಅವ್ಯವಹಾರ ನಡೆಯದೆ ಇರುವ ಗ್ರಾಮ ಪಂಚಾಯತಿಗಳಲ್ಲಿ ಕೆಲಸಗಳನ್ನು ಸ್ಥಗಿತಗೊಳಿಸದೆ ಎಂಐಎಸ್ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.ಬಸವರಾಜ ಸ್ವಾಮಿ, ಕಿಸನರಾವ, ಮಾರೆಪ್ಪ ನಾಯಕ ಸೇರಿದಂತೆ ಅನೇಕ ರೈತ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.