ಪಕ್ಷಗಳ ಧೋರಣೆ ನಾಚಿಕೆಗೇಡಿತನದ್ದು
ಕನ್ನಡಪ್ರಭ ವಾರ್ತೆ ಯಾದಗಿರಿ ಮಾ. 4
ದೇಶದಲ್ಲಿ ಗಂಭೀರ ಸಮಸ್ಯೆಗಳನ್ನು ಹುಟ್ಟು ಹಾಕಿರುವ ಜಾಗತೀಕರಣ-ಉದಾರೀಕರಣ-ಖಾಸಗೀಕರಣ ನೀತಿಗಳನ್ನು ಚರ್ಚೆಗೆ ಗುರಿಪಡಿಸುವ ಬದಲಿಗೆ ಪ್ರಪಂಚದ ದೊಡ್ಡ ಪ್ರಜಾತಂತ್ರ ದೇಶದ ಈ ಮಹಾಚುನಾವಣೆಯ ಪ್ರಚಾರದಲ್ಲಿ 'ಚಾಯ್ ಪೆ ಚರ್ಚಾ' ದಂತಹ ಮಿಥ್ಯಾ ವಿಷಯವನ್ನು ಚರ್ಚೆಗೆ ಎತ್ತಿಕೊಂಡಿರುವ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಧೋರಣೆ ಅತ್ಯಂತ ನಾಚಿಕೆಗೇಡಿನದು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಅಧ್ಯಕ್ಷರಾದ ಕಾಮ್ರೇಡ್ ಸೋಮಶೇಖರ್ ಹೇಳಿದರು.
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಯಾದಗಿರಿ ಜಿಲ್ಲಾ ಸಮಿತಿಯಿಂದ ಮಂಗಳವಾರ ವಿದ್ಯಾ ಮಂಗಲ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಆಶಾ ಕಾರ್ಯಕರ್ತೆಯರ ಜಿಲ್ಲಾ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ದುಡಿಯುವ ಜನರಲ್ಲಿ ಶೇ. 94 ರಷ್ಟು ಇರುವ ಅಸಂಘಟಿತ ಕಾರ್ಮಿಕರ ಬದುಕು ಅತ್ಯಂತ ಶೋಚನೀಯವಾಗಿದೆ. ಈ ವಿಭಾಗಕ್ಕೆ ಸೇರುವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ನೌಕರರ ಸ್ಥಾನಮಾನವನ್ನೇ ನಿರಾಕರಿಸಿ, ದೇಶಾದ್ಯಂತ ಲಕ್ಷಾಂತರ ಮಹಿಳೆಯರನ್ನು ನಿಗದಿತ ಕನಿಷ್ಠ ವೇತನವೂ ಇಲ್ಲದೆ ಗೌರವ ಧನ, ಪ್ರೋತ್ಸಾಹ ಧನ ಇತ್ಯಾದಿಗಳ ಹೆಸರಿನಲ್ಲಿ ಅನಾಗರಿಕವಾಗಿ, ಬಿಟ್ಟಿಯಾಗಿ ದುಡಿಸಿಕೊಳ್ಳುತ್ತಿರುವುದನ್ನು ಖಂಡಿಸಲು ಪದಗಳು ಸಾಲವು ಎಂದರು.
ಅದೇ ರೀತಿಯಲ್ಲಿ ಹೊರಗುತ್ತಿಗೆ ನೌಕರರು, ಗುತ್ತಿಗೆ ಕಾರ್ಮಿಕರು, ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಮನೆಕೆಲಸಗಾರರು ವರ್ಷವಿಡಿ ಕೆಲಸವಿಲ್ಲದೆ, ಅತ್ಯಂತ ಅಲ್ಪ ವೇತನದಲ್ಲಿ, ಯಾವುದೇ ಕಾರ್ಮಿಕ ಕಾಯ್ದೆ ಅನ್ವಯ ದೊರಕಬಹುದಾದ ಸೌಲಭ್ಯಗಳೂ ಇಲ್ಲದೆ, ಸಾಮಾಜಿಕ ಭದ್ರತೆಯಿಲ್ಲದೆ ಬದುಕುತ್ತಿದ್ದಾರೆ.
ಇವರ ಕೆಲಸದ ಅನಿಶ್ಚಿತತೆ, ಅಲ್ಪವೇತನ, ಬೆಲೆಗಳು ಗಗನಕ್ಕೇರಿರುವುದರಿಂದ ಇವರ ಇಡೀ ಕುಟುಂಬ ಉತ್ತಮ ಆಹಾರ, ವಸತಿ, ಶಿಕ್ಷಣ, ಆರೋಗ್ಯ ಸವಲತ್ತುಗಳನ್ನು ಪಡೆಯಲಾಗದಂತಾಗಿರುವುದಕ್ಕೆ ಈವರೆಗೆ ಅಧಿಕಾರ ನಡೆಸಿದ ಈ ಎರಡು ಪಕ್ಷಗಳೇ ಕಾರಣ ಎನ್ನುವುದನ್ನು ಕಾರ್ಮಿಕರು ಮರೆಯಬಾರದು ಎಂದರು.
ಸಂಘದ ಜಿಲ್ಲಾ ಅಧ್ಯಕ್ಷರಾದ ಕಾ. ಡಿ. ಉಮಾದೇವಿ ಮಾತನಾಡುತ್ತಾ ಆಶಾ ಕಾರ್ಯಕರ್ತೆಯರು ಸಂಘದ ನೇತೃತ್ವದಲ್ಲಿ ಸತತವಾಗಿ ರಾಜಿರಹಿತ ಹೋರಾಟದ ಮೂಲಕ ಹಲವಾರು ನ್ಯಾಯಯುತ ಹಕ್ಕುಗಳನ್ನು-ಸೌಲಭ್ಯಗಳನ್ನೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಪಡೆದುಕೊಂಡಿರುವುದು ಸಂತೋಷದ ಸಂಗತಿ ಎಂದರು.
ಆರೋಗ್ಯ ಇಲಾಖೆಯು ಇತ್ತೀಚೆಗೆ ಇನ್ನೂ ಹಲವು ಸೌಕರ್ಯಗಳನ್ನು ನೀಡುವುದಾಗಿ ಘೋಷಿಸಿರುವುದು ಅತ್ಯಂತ ಹರ್ಷದ ವಿಷಯ ಎಂದು ಅವುಗಳನ್ನು ಸಭೆಯಲ್ಲಿ ಪ್ರಕಟಿಸಿದರು.
ಅಲ್ಲದೆ ಪ್ರತಿ ವರ್ಷಒಂದು ಜೊತೆಗೆ ಬದಲಾಗಿ ಎರಡು ಜೊತೆ ಸಮವಸ್ತ್ರ ನೀಡಲಾಗುವುದು. ತೀವ್ರವಾದ, ಮಾರಣಾಂತಿಕ ಕಾಯಿಲೆಗೆ ತುತ್ತಾದ ಆಶಾಗಳಿಗೆ ಅಂಗನವಾಡಿ ಕಾರ್ಯಕರ್ತೆಯರಿಗಿ ಈಗಿರುವಂತೆ ಸರ್ಕಾರದಿಂದ ಪೂರ್ಣ ಉಚಿತ ಚಿಕಿತ್ಸೆ, ಆರ್ಥಿಕ ನೆರವು ನೀಡಲು ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ಜೀವವಿಮೆ ಸೌಲಭ್ಯ ಮತ್ತು ಅವರ ಕುಟುಂಬಕ್ಕೆ ವಾಜಪೇಯಿ ಆರೋಗ್ಯಶ್ರೀ ಕಾರ್ಡ್ ಒದಗಿಸಲಾಗುವುದು ಎಂದು ಭರವಸೆ ನೀಡಿರುತ್ತಾರೆ. ಎಲ್ಲ ತಾಲ್ಲೂಕುಗಳ ನೂರಾರು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.