ಆಲಿಕಲ್ಲು ತಂದ ಆಪತ್ತು
ಆಳಂದ: ತಾಲೂಕಿನಲ್ಲಿ ಸೋಮವಾರ ಸಂಜೆ ಸುರಿದ ಬಿರುಗಾಳಿ, ಆಲಿಕಲ್ಲು ಸಹಿತ ಮಳೆಯಿಂದಾಗಿ ಸುಮಾರು 2,500 ಎಕರೆ ತೋಟಗಾರಿಕೆಯ ಹಣ್ಣು ಮತ್ತು ತರಕಾರಿ ಸೇರಿ 50 ಕೋಟಿ ಹಾನಿಯ ಕುರಿತು ಅಂದಾಜಿಸಲಾಗಿದೆ. 250 ಎಕರೆ ದ್ರಾಕ್ಷಿ, 35 ಎಕರೆ ಪಪ್ಪಾಯಿ, 12 ಎಕರೆ ಬಾಳೆ, 100 ಎಕರೆ ಕಲ್ಲಂಗಡಿ, 400 ಎಕರೆ ಟೊಮೆಟೋ, 350 ಎಕರೆ ಗಜ್ಜರಿ, 600 ಎಕರೆ, 150 ಎಕರೆ ಲಿಂಬೆ, 200 ಎಕರೆ ತರಕಾರಿ ಇತರ ಬೆಳೆ ಸೇರಿ ಒಟ್ಟು 2,500 ಎಕರೆ ತೋಟಗಾರಿಕೆ ತರಕಾರಿ ಮತ್ತು ಹಣ್ಣಿನ ಫಸಲು ನಷ್ಟ ಅನುಭವಿಸಿ ಒಟ್ಟು 50 ಕೋಟಿ ಅಂದಾಜಿನ ನಷ್ಟವಾಗಿದೆ. ತಡಕಲ್, ದಣ್ಣೂರ, ನರೋಣಾ ಮತ್ತು ಖಜೂರಿ ಸೇರಿ 250 ಎಕರೆ ದ್ರಾಕ್ಷಿ ಫಸಲು ಹಾನಿಗೀಡಾಗಿದೆ. ಬೆಳಮಗಿ, ಹಳ್ಳಿಸಲಗರ, ಕರಹರಿ ಗ್ರಾಮದ 35 ಎಕರೆ ಪಪ್ಪಾಯಿ, ಕರಹರಿ, ಕಮಲಾನಗರ, ತಡಕಲ್ ಗ್ರಾಮದ 12 ಎಕರೆ ಬಾಳೆ, ಬೆಳಮಗಿ, ಸಾವಳಗಿ, ಆಳಂದ ಸನಗುಂದ ಗ್ರಾಮದ 100 ಎಕರೆ ಕಲ್ಲಂಗಡಿ, ಕರಹರಿ, ಆಳಂದ, ತಡಕಲ್, ಸನಗುಂದ, ಕಮಲಾನಗರ, ಮಟಕಿ ಗ್ರಾಮದ 600 ಎಕರೆ ಈರಳ್ಳಿ, ತಡಕಲ, ಕಿಣ್ಣಿಸುಲ್ತಾನ ಮಟಕಿ ಚಿತಲಿ ಗ್ರಾಮದ 150 ಎಕರೆ ನಿಂಬೆ ಅಲ್ಲದೆ, 200 ಎಕರೆ ತರಕಾರಿ ಬೆಳೆ ಹಾನಿಯಾಗಿದೆ ಎಂದು ತೋಟಗಾರಿಕೆ ಅಧಿಕಾರಿ ರಾಹುಲ ಬಾವಿದೊಡ್ಡಿ ತಿಳಿಸಿದ್ದಾರೆ. ಪರಿಹಾರ ಒದಗಿಸಬೇಕೆಂದು ರೈತ ಮುಖಂಡ ಮೌಲಾ ಮುಲ್ಲಾ ಒತ್ತಾಯಿಸಿದ್ದಾರೆ.