ಬೇಡಿಕೆಗಳ ಈಡೇರಿಕೆಗೆ ಅರ್ಚಕರ ಆಗ್ರಹ
ಜೇವರ್ಗಿ: ತಾಲೂಕಿನ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ ದೇವಸ್ಥಾನಗಳ ಅರ್ಚಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕು ಅರ್ಚಕರ ಸಂಘದ ನೇತೃತ್ವದಲ್ಲಿ ಮಂಗಳವಾರ ಪಟ್ಟಣದ ಮಿನಿ ವಿಧಾನಸೌಧದ ಎದುರು ಧರಣಿ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ತಾಲೂಕು ಅರ್ಚಕರ ಸಂಘದ ಅಧ್ಯಕ್ಷ ಹಳ್ಳೆಪ್ಪಾಚಾರ್ಯ ಜೋಶಿ ತಾಲೂಕಿನಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ 156 ವಿವಿಧ ಧರ್ಮಗಳ ದೇವಸ್ಥಾನಗಳು, ಮಠಗಳು ಹಾಗೂ ದರ್ಗಾಗಳಿವೆ. 2010 ರಿಂದ 2014 ರವರೆಗೆ ಅಂದರೆ ನಾಲ್ಕು ವರ್ಷಗಳ ತಜದೀಕ್ ಹಣವನ್ನು ಮುಜರಾಯಿ ಇಲಾಖೆಯಿಂದ ಮಾನ್ಯತೆ ಪಡೆದ ಫಲಾನುಭವಿಗಳಿಗೆ ಇಂದಿನವರೆಗೆ ವಿತರಿಸದೆ ಅನ್ಯಾಯ ಮಾಡಿದ್ದಾರೆ. ತಾಲೂಕಿನ ಮಠ, ಮಂದಿರ ಹಾಗೂ ಮಜೀದ್ ಸೇವಕರಿಗೆ ತಜದೀಕ್ ಭತ್ಯೆ ನೀಡಲು ಕಂದಾಯ ನಿರೀಕ್ಷಕರ ಮೂಲಕ ಪಂಚಿನಾಮೆ ಮಾಡಿ ತಹಸೀಲ್ದಾರ್ ಅವರಿಗೆ ವರದಿ ಸಲ್ಲಿಸಬೇಕು. ಎಲ್ಲಾ ಕಂದಾಯ ನಿರೀಕ್ಷಕರಿಗೆ ತಹಸೀಲ್ದಾರ್ ಕಚೇರಿಯಿಂದ ಆದೇಶ ಹೊರಡಿಸಿ ಯಾವ ಯಾವ ಗುಡಿಗಳ ಅರ್ಚಕರು ಯಾರೆಂದು ಸಂಬಂಧಪಟ್ಟ ಗ್ರಾಮ ಲೆಕ್ಕಿಗರಿಂದ ವರದಿ ತರಿಸಿಕೊಂಡು ತಜದೀಕ್ ಭತ್ಯೆ ವಿತರಿಸಬೇಕೆಂದು ಜೋಶಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ನಂತರ ತಹಸೀಲ್ದಾರ್ ಮಲ್ಲಿಕಾರ್ಜುನರೆಡ್ಡಿ ಪಾಟೀಲ್ ಮುಖಾಂತರ ಸಿಎಂಗೆ ಮನವಿ ಪತ್ರ ಸಲ್ಲಿಸಲಾಯಿತು. ಅರ್ಚಕರ ಸಂಘದ ಗೌರವಾಧ್ಯಕ್ಷ ಬಸ್ಸಯ್ಯಸ್ವಾಮಿ ಮಠ ಕೋಳಕೂರ, ಹಳ್ಳೆಪ್ಪಾಚಾರ್ಯ ಕಾಸರಭೋಸಗಾ, ಖಾನಪಟೇಲ್, ರಜಬ್ ಖಾನ್, ದೊಡ್ಡಯ್ಯ ಹಿರೇಮಠ, ಮಲ್ಲಯ್ಯಸ್ವಾಮಿ ನಂದೂರಮಠ, ಕೃಷ್ಣಾಚಾರ್ಯ ದೇವರು, ಸುಧೀಂದ್ರ ಜೋಶಿ, ಶಿವರಾಮ ಜೋಶಿ, ಚಂದ್ರಭಟ್ಟ ಜೋಶಿ, ಭೀಮಾಶಂಕರ ಹೂಗಾರ್, ಗೂಡೂಸಾಬ ಮುಲ್ಲಾ, ರಾಚಯ್ಯ ಸ್ವಾಮಿ ನರಿಬೋಳ ಇದ್ದರು.