ಮತ ಮಹಾಯುದ್ಧಕ್ಕೆ ಜಿಲ್ಲಾಡಳಿತ ಮುನ್ನುಡಿ
ಕ.ಪ್ರ. ವಾರ್ತೆ ್ಣ ಗುಲ್ಬರ್ಗ ್ಣ ಮಾ.5
ಲೋಕಸಭೆ ಚುನಾವಣೆಯ ಮತ ಮಹಾಯುದ್ಧಕ್ಕಾಗಿ ಭರದ ಸಿದ್ಧತೆಗಳಿಗೆ ಜಿಲ್ಲಾಡಳಿತ ಮುನ್ನುಡಿ ಬರೆದಿದೆ. ಏ.17ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಇಲ್ಲಿನ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಡಾ. ಎನ್.ವಿ. ಪ್ರಸಾದ್ ಸಕಲ ಸಿದ್ಧತೆಗಳಿಗೆ ಚುನಾವಣೆ ಘೋಷಣೆಯಾದ ಮೊದಲ ದಿನವೇ ಚಾಲನೆ ನೀಡಿದ್ದಾರೆ.
ನವದೆಹಲಿಯಲ್ಲಿ ಬೆಳಗ್ಗೆ ಮುಖ್ಯ ಚುನಾವಣಾಧಿಕಾರಿ ಸಂಪತ್ ಸುದ್ದಿಗೋಷ್ಠಿಯಲ್ಲಿ ಲೋಕಸಭೆಯ ಚುನಾವಣೆಗಳ ವೇಳಾಪಟ್ಟಿ ಘೋಷಿಸಿದ ಬೆನ್ನಲ್ಲೇ ಚುನಾವಣಾ ಆಯೋಗ ಹೊರಡಿಸಿರುವ 16ನೇ ಲೋಕಸಭೆಯ 9 ಹಂತಗಳ ಚುನಾವಣೆಯ ಸಮಗ್ರ ಮಾಹಿತಿಯೊಂದಿಗೆ ಜಿಲ್ಲಾಡಳಿತ ಅಧಿಕಾರಿಗಳ ತರ್ತು ಸಭೆ ನಡೆಸಿತು.ಅಲ್ಲದೆ ಬರುವ ದಿನಗಳಲ್ಲಿ ಸುಸೂತ್ರ ಹಾಗೂ ಶಾಂತಿಯುತ ಚುನಾವಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳಲು ಅದಾಗಲೇ ಭರದ ಸಿದ್ಧತೆಗಳನ್ನು ಆರಂಭಿಸಿತು.
ನೀತಿ ಸಂಹಿತೆ- ತೀವ್ರ ನಿಗಾ: ಚುನಾವಣೆ ಘೋಷಣೆಯಾದ ಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಜಿಲ್ಲಾದ್ಯಂತ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣಗಳ ಮೇಲೆ ನಿಗಾ ಇಡಲು ಜಿಪಂ ಸಿಇಒ ಕುಮಾರ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ. ಪ್ರಸಾದ್ ಆದೇಶ ಹೊರಡಿಸಿದ್ದಾರೆ.
ಇದಲ್ಲದೆ ನೀತಿ ಸಂಹಿತೆ ಅನುಷ್ಠಾನದ ಮೇಲೆ ನಿಗಾ ಇಡಲು, ಉಲ್ಲಂಘನೆಯ ಪ್ರಕರಣಗಳು ಗಮನಕ್ಕೆ ಬಂದಲ್ಲಿ ತಕ್ಷಣ ಕ್ರಮಕ್ಕಾಗಿ ಫ್ಲಾಯಿಂಗ್ ಸ್ಕ್ವಾಡ್ ಹಾಗೂ ವಿಡಿಯೋ ಚಿತ್ರೀಕರಣ ತಂಡಗಳ ನಿಯೋಜನೆಯನ್ನೂ ಮಾಡಲಾಗಿದೆ.
ಅತಿಥಿ ಗೃಹ ವಶಕ್ಕೆ ಪಡೆದ ಜಿಲ್ಲಾಡಳಿತ: ಗುಲ್ಬರ್ಗ ನಗರ ಸೇರಿದಂತೆ ಜಿಲ್ಲಾದ್ಯಂತ ಇರುವ ಸರ್ಕಾರಿ ಅತಿಥಿ ಗೃಹಗಳನ್ನು ಆಯಾ ತಾಲೂಕಿನ ತಹಸೀಲ್ದಾರರು ತಕ್ಷಣ ತಮ್ಮ ವಶಕ್ಕೆ ಪಡೆಯುವಂತೆಯೂ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಜೊತೆಗೇ ಸದರಿ ಅತಿಥಿಗೃಹಗಳ ಮೇಲೆ ಬರುವ ದಿನಗಳಲ್ಲಿ ನೀತಿ ಸಂಹಿತೆ ಇರುವವರೆಗೂ ಅಲ್ಲಿನ ಚಟುವಟಿಕೆಗಳ ಮೇಲೆ ನಿಗಾ ಇಡುವಂತೆ ಸೂಚಿಸಿದ್ದಾರೆ. ನೀತಿ ಸಂಹಿತೆ ಜಾರಿಯಲ್ಲಿರುವವರೆಗೂ ಸದರಿ ಅತಿಥಿ ಗೃಹಗಳನ್ನು ರಾಜಕೀಯವಾಗಿ ಬಳಸಲು, ಮುಖಂಡರ ಬಳಕೆಗೆ ನೀಡಲೇಬಾರದು ಎಂದು ಕಟ್ಟುನಿಟ್ಟು ಸೂಚನೆಯನ್ನು ಜಿಲ್ಲಾಡಳಿತ ಹೊರಡಿಸಿದೆ.
ಅತಿಥಿಗೃಹಗಳನ್ನು ವಶಕ್ಕೆ ಪಡೆದ ಮಾಹಿತಿಯನ್ನು ಮಾ.6ರ ಸಂಜೆಯೊಳಗಾಗಿ ಜಿಲ್ಲಾಡಳಿತದ ಕಚೇರಿಗೆ ಮಾಹಿತಿ ತಲುಪಿಸುವಂತೆಯೂ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ವಾಹನಗಳು ವಶಕ್ಕೆ: ಚುನಾವಣೆ ಮುಗಿಯುವವರೆಗೂ ಸರ್ಕಾರಿ ವಾಹನಗಳ ಸವಲತ್ತು ಪಡೆದ ಎಲ್ಲ ಮಂಡಳಿ, ಪಾಲಿಕೆ, ಪ್ರಾಧಿಕಾರಗಳ ಜನನಾಯಕರು ಬಳಸುತ್ತಿದ್ದ ವಾಹನಗಳನ್ನೆಲ್ಲ ವಾಪಸ್ ಪಡೆಯಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿದೆ. ಜಿಪಂ ಅಧ್ಯಕ್ಷ, ಉಪಾಧ್ಯಕ್ಷರು, ಪಾಲಿಕೆಯ ಜನನಾಯಕರು ಬಳಸುವ ವಾಹನಗಳು, ಸಹಕಾರಿ ಬ್ಯಾಂಕ್, ಹಾಲು ಒಕ್ಕೂಟ, ತೊಗರಿ ಮಂಡಳಿ, ಹಾಪಕಾಮ್ಸ್, ಎಂಎಸ್ಐಎಲ್, ಎಪಿಎಂಸಿ, ಎನ್ಇಕೆಆರ್ಟಿಸಿ ಅಧ್ಯಕ್ಷರು ಬಳಸುವ ವಾಹನಗಳನ್ನೆಲ್ಲ ಜಿಲ್ಲಾಡಳಿತ ವಶಕ್ಕೆ ಪಡೆದುಕೊಂಡಿದೆ.