ವಿವಿಧ ಬೇಡಿಕೆಗಾಗಿ ಪ್ರತಿಭಟನೆ
ಯಾದಗಿರಿ: ವಿವಿಧ ಬೇಡಿಕೆ ಈಡೇರಿಕೆಗಾಗಿ ಜಿಲ್ಲೆಯ ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು ಆಲ್ ಇಂಡಿಯಾ ಯುಟಿಯುಸಿಯ ರಾಜ್ಯ ಉಪಾಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾಮಿಕರ ಸಂಘದ ರಾಜ್ಯಾಧ್ಯಕ್ಷ ಕಾ. ಕೆ.ಸೋಮಶೇಖರ್ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಸೋಮಶೇಖರ, ಯಾದಗಿರಿ ಜಿಲ್ಲೆಯ ವಸತಿನಿಲಯ ಕಾರ್ಮಿಕರ 5 ವರ್ಷಗಳ ಇಪಿಎಫ್ ಮತ್ತು ಇಎಸ್ಐನ ಹಣ ಕಾರ್ಮಿಕರ ಕೈಸೇರಿಲ್ಲ. ಇಎಸ್ಐ ಕಾರ್ಡ್ಗಳೂ ಲಭಿಸಿಲ್ಲ. ಪ್ರತಿ ಕಾರ್ಮಿಕರ ಹೆಸರಿನಲ್ಲಿ ವರ್ಷಕ್ಕೆ 10 ಸಾವಿರದಂತೆ ಪ್ರತಿ ಕಾರ್ಮಿಕನಿಗೆ ಕಳೆದ 5 ವರ್ಷಗಳ ಸುಮಾರು 50 ಸಾವಿರ ವೇತನ ಬರಬೇಕಾಗಿದೆ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಂಡು ವೇತನ ನೀಡಬೇಕು.
ಅದಕ್ಕೆ ಸಂಬಂಧಪಟ್ಟ ದಾಖಲೆ, ಖಾತೆ ನಂಬರ್ಗಳನ್ನು ಮತ್ತು ಇಎಸ್ಐ ಕಾರ್ಡ್ಗಳನ್ನಾದರೂ ನೀಡಬೇಕು. ಇಲ್ಲವೇ ಅದಕ್ಕಾಗಿ ಸಂಗ್ರಹಿಸಲಾದ ಹಣವನ್ನು ಹಿಂದಿರುಗಿಸಬೇಕೆಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿ ಮನವಿ ಪತ್ರವನ್ನು ಸಲ್ಲಿಸಿದರು. ನಗರದ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಯಾದಗಿರಿ, ಶಹಾಪುರ ಮತ್ತು ಸುರಪುರ ತಾಲೂಕುಗಳಿಂದ ಬಂದಿದ್ದ ನೂರಾರು ಕಾರ್ಮಿಕರು ಬೃಹತ್ ಮೆರವಣಿಗೆ ನಡೆಸಿದರು. ಆಲ್ ಇಂಡಿಯಾ ಯುಟಿಯುಸಿ ಜಿಲ್ಲಾ ಸಮಿತಿಯ ಸದಸ್ಯರಾದ ಡಿ.ಉಮಾದೇವಿ, ಮಲ್ಲಪ್ಪ ಕಂದಕೂರ್, ತಾಜುದ್ದೀನ್, ಹಣಮಂತ, ಗೋವಿಮದಗೌಡ, ಶಂಕ್ರಮ್ಮ, ಮರಳಮ್ಮ ಸೇರಿದಂತೆ ನೂರಾರು ಕಾರ್ಮಿಕರು ಭಾಗವಹಿಸಿದ್ದರು.