ಸುದ್ದಿ ಸಂಕ್ಷೇಪ
ಅಕ್ರಮ ಬ್ಯಾನರ್ಗಳಿಗೆ ಕಡಿವಾಣಕ್ಕೆ ಆಗ್ರಹ
ಶಹಾಪುರ:ಪಟ್ಟಣದ ಸೌಂದರ್ಯ ಹಾಗೂ ಅಕ್ರಮ ಬ್ಯಾನರುಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ತಾಲೂಕು ಕರವೇ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು. ಸಂಘಟನೆಯ ಕಾರ್ಯದರ್ಶಿ ಗೌಡಪ್ಪ ಕೋರಿ ಮಾತನಾಡಿ ಪಟ್ಟಣದ ರಾಜ್ಯ ಹೆದ್ದಾರಿ ಸ್ವಚ್ಛತೆಯಿಲ್ಲದೆ ಗಬ್ಬೆದ್ದು ನಾರುತ್ತಿದೆ. ನಾನಾ ರೀತಿಯ ಬ್ಯಾನರುಗಳು ಮಹಾತ್ಮರ ವೃತ್ತಗಳಲ್ಲಿ ಜೋತಾಡುತ್ತಿವೆ. ರಸ್ತೆಯ ಮೇಲೆ ದನಕರುಗಳದ್ದೇ ಕಾರುಬಾರು. ಅಧಿಕಾರಿಗಳು ಎಷ್ಟು ನಿಯತ್ತಿನಿಂದ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಇದು ಸಾರುತ್ತದೆ ಎಂದರು. ಪ್ರಮುಖ ವೃತ್ತಗಳು ಮರಣ ಹೊಂದಿದವರ ಮಾಹಿತಿಯ ವೃತ್ತಗಳಾಗುತ್ತಿವೆ. ಇದು ತರವಲ್ಲ. ಇದಕ್ಕೆ ಸಂಬಂಧಿಸಿದ ಇಲಾಖೆಯ ಅನುಮತಿ ಪಡೆಯಬೇಕು. ಜತೆಗೆ ಇಲಾಖೆಗೂ ಆದಾಯ ಬರುತ್ತದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಬ್ಯಾನರುಗಳಿಗೆ ಕಡಿವಾಣ ಹಾಕಿ ನಗರದ ಸೌಂದರ್ಯ ಕಾಪಾಡಬೇಕಿದೆ ಎಂದರು. ಅಧಿಕಾರಿಗಳು ಇದಕ್ಕೆ ಸ್ಪಂದಿಸದಿದ್ದಲ್ಲಿ ಸಂಘಟನೆಯಿಂದ ಉಗ್ರ ಹೋರಾಟ ಮಾಡುವುದಾಗಿ ಅವರು ಎಚ್ಚರಿಸಿದರು. ಕಾಸಿಂ ಪಟೇಲ, ರವಿ ತಡಬಿಡಿ, ನಾಗು ಹಳಿಸಗರ, ಗುರುಲಿಂಗಯ್ಯ, ಶಿವಶಂಕರ ವಿಶ್ವಕರ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕೃತಿಗಳ ಆಹ್ವಾನ
ಗುರುಮಠಕಲ್: ಇಲ್ಲಿಯ ಸಿರಿಗನ್ನಡ ಪ್ರತಿಷ್ಠಾನ ಕೇಂದ್ರ ಸಂಘದ ವತಿಯಿಂದ 2013-14ನೇ ಸಾಲಿನ ದಿ. ಕಿಸಾನರಾವ ಮಹೇಂದ್ರಕರ್ ಅವರ ಸ್ಮರಣಾರ್ಥವಾಗಿ ಕೊಡಮಾಡುವ 11ನೇ ವರ್ಷದ ಅಕ್ಷರ ಲೋಕದ ನಕ್ಷತ್ರ ಪ್ರಶಸ್ತಿಗೆ ಕೃತಿಗಳನ್ನು ಅಹ್ವಾನಿಸಲಾಗಿದೆ. ಈ ಪ್ರಶಸ್ತಿ 5 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ. 2011 ನಂತರ ಪ್ರಕಟವಾದ ಯಾವುದೇ ಪ್ರಕಾರದ ಸಾಹಿತ್ಯದ ಎರಡು ಕೃತಿಗಳನ್ನು ಪ್ರಶಸ್ತಿಗೆ ಕಳುಹಿಸಬಹುದಾಗಿದೆ. ಅರ್ಜಿಗಳನ್ನು ಸಲ್ಲಿಸಲು ಮಾ.13 ಕೊನೆಯ ದಿನ. ಕೃತಿಗಳನ್ನು ಕಳುಹಿಸುವ ವಿಳಾಸ- ನಿರ್ದೇಶಕರು, ಕೆ. ಮೊಗುಲಪ್ಪ ಯಾನಗುಂದಿ, ಸಿರಿಗನ್ನಡ ಪ್ರತಿಷ್ಠಾನ ಕೇಂದ್ರ ಸಂಘ, ಗುರುಮಠಕಲ್, ಯಾದಗಿರಿ- 585 214. ವಿವರಕ್ಕೆ ಮೊ. 9902125253 ಸಂಪರ್ಕಿಸಬಹುದು.
ಆಯುರ್ವೇದದಿಂದ ಆರೋಗ್ಯ ವೃದ್ಧಿ
ಯಾದಗಿರಿ: ಪ್ರತಿಯೊಂದು ರೋಗಕ್ಕೆ ಆರ್ಯುವೇದ ಚಿಕಿತ್ಸೆಯನ್ನು ಪಡೆಯುವ ಮೂಲಕ ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಸಾಧ್ಯ ಎಂದು ಜಿಲ್ಲಾ ಆಯುಷ ನೋಡಲ್ ಅಧಿಕಾರಿ ಡಾ. ಸುನಂದಾ ಕುದರಿ ಹೇಳಿದರು. ತಾಲೂಕಿನ ಹತ್ತಿಕುಣಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತ, ಆಯುಷ ಇಲಾಖೆ ಬಿಜಿಆರ್ಎಫ್ ಅಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ತ್ರಿರೋಗಕ್ಕಾಗಿನ ಉಚಿತ ಆರ್ಯುವೇದ ಚಿಕಿತ್ಸಾ ಶಿಬಿರವನ್ನುದ್ದೇಶಿಸಿ ಮಾತನಾಡುತ್ತಿದ್ದರು. ಜಿಲ್ಲಾ ಆಯುಷ್ ಅಧಿಕಾರಿ ಡಾ. ಪ್ರಕಾಶ ಪ್ರಭಾರ, ಹತ್ತಿಕುಣಿ ಗ್ರಾಮ ಪಂಚಾಯತಿಯ ಅಧ್ಯಕ್ಷ ಲಕ್ಷ್ಮೀಕಾಂತ ತಮ್ಮಣ್ಣನೋರ ಅಧ್ಯಕ್ಷತೆ ವಹಿಸಿದ್ದರು. ತಾಪಂ ಉಪಾಧ್ಯಕ್ಷ ಶರಣಮ್ಮ ಕವಾಲ್ದಾರ ಡಾ. ಬಸವರಾಜ ಇದ್ದರು.