2ನೇ ಲೋಕ ಅದಾಲತ್ ಸದುಪಯೋಗಕ್ಕೆ ಸಲಹೆ
ಯಾದಗಿರಿ: ರಾಷ್ಟ್ರೀಯ ಕಾನೂನು ಪ್ರಾಧಿಕಾರ ಏ.12ರಂದು ದೇಶಾದ್ಯಂತ ದ್ವಿತೀಯ ರಾಷ್ಟ್ರೀಯ ಲೋಕ ಅದಾಲತ್ ನಡೆಸಲಿದೆ. ಈ ಹಿಂದೆ 2013ರ ನವೆಂಬರ್ 23ರಂದು ಮೊದಲ ರಾಷ್ಟ್ರೀಯ ಲೋಕಅದಾಲತ್ ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ದೊರೆತ ಯಶಸ್ಸು ಮತ್ತು ಪ್ರಶಂಸೆಯಿಂದ ಏಪ್ರಿಲ್ 12ಕ್ಕೆ ದ್ವಿತೀಯ ರಾಷ್ಟ್ರೀಯ ಲೋಕ ಅದಾಲತ್ ನಡೆಸಲು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ಧರಿಸಿದೆ. ಅದಕ್ಕಾಗಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ರಾಜ್ಯಾದ್ಯಂತ 2ನೇ ಮೆಗಾ ಲೋಕ ಅದಾಲತ್ ಚಾಲ್ತಿಯಲ್ಲಿದೆ.
ಕಲಂ 138 ಎನ್.ಐ. ಆ್ಯಕ್ಟ್ ಅಡಿ ಬರುವ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರ ನ್ಯಾಯಾಧೀಕರಣದ ಪ್ರಕರಣಗಳು, ವೈವಾಹಿಕ, ಕುಟುಂಬ ನ್ಯಾಯಾಲಯದ ಪ್ರಕರಣಗಳು, ಭೂಸ್ವಾಧೀನ, ಸಿವಿಲ್, ಕಂದಾಯ, ಉದ್ಯೋಗ ಖಾತ್ರಿ ಯೋಜನೆ, ವೇತನ, ಭತ್ಯೆಗೆ ಸಂಬಂಧಿಸಿದ ಸೇವಾ ಪ್ರಕರಣಗಳು, ಪಿಂಚಣಿ, ಚೆಕ್ ಬೌನ್ಸ್, ವಿದ್ಯುತ್, ನೀರಿನ ಶುಲ್ಕ ಪ್ರಕರಣಗಳು, ರೈಲ್ವೆ ಕ್ಲೇಮ್‌ಗಳು, ವಿನಾಶ ಸಂಬಂಧಿ ಪರಿಹಾರಗಳು, ಇತರ ಮೇಲ್ಮನವಿಗಳನ್ನು ಈ ಅದಾಲತ್‌ನಲ್ಲಿ ಪರಿಹರಿಸಿಕೊಳ್ಳಬಹುದು.
ಲೋಕ ಅದಾಲತನ ಬೈಠಕ್‌ಗಳು ರಾಜ್ಯದಲ್ಲಿ ಈಗಾಗಲೇ ಜ. 6ರಿಂದ ಎಲ್ಲಾ ನ್ಯಾಯಾಲಯಗಳಲ್ಲಿ ಪ್ರಾರಂಭವಾಗಿವೆ. ಜಿಲ್ಲೆಯಲ್ಲಿ ಈಗಾಗಲೇ ಮಾ.1ರವರೆಗೆ 377 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. ಇನ್ನೂ ಸುಮಾರು 700 ಪ್ರಕರಣಗಳನ್ನಾದರೂ ಏ. 12ರವರೆಗೆ ಇತ್ಯರ್ಥ ಪಡಿಸುವ ಗುರಿ ಇದೆ. ಆದ ಕಾರಣ ಯಾದಗಿರಿ ಜಿಲ್ಲೆಯ ಮೂರೂ ತಾಲೂಕಿನ ಜನರು ಈ ಸುವರ್ಣ ಅವಕಾಶವನ್ನು ಸದುಪಯೋಗಿಸಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರು ಮನವಿ ಮಾಡಿದ್ದಾರೆ.