ಆಲಿಕಲ್ಲು ಮಳೆ: ಪರಿಹಾರ ವಿತರಣೆ
ಯಾದಗಿರಿ: ಜಿಲ್ಲೆಯಲ್ಲಿ ಆಲಿಕಲ್ಲು ಮಳೆ ಮತ್ತು ಬಿರುಗಾಳಿಯಿಂದ ಹಾನಿಗೊಳಗಾದ ಮನೆಗಳ ಸಂತ್ರಸ್ತರಿಗೆ ಸಹಾಯಕ ಆಯುಕ್ತ ಬಿ.ಪಿ. ವಿಜಯ್ ನೇತೃತ್ವದಲ್ಲಿ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಚೆಕ್ ವಿತರಿಸಲಾಯಿತು.
ಕೊಂಕಲ್, ಗುರುಮಠಕಲ್, ಬಳಿಚಕ್ರ ಗ್ರಾಮಗಳಲ್ಲಿ ಇತ್ತೀಚೆಗೆ ಬಿದ್ದ ಆಲಿಕಲ್ಲು ಮಳೆ, ಬಿರುಗಾಳಿಯಿಂದ ಹಾನಿಗೊಳಗಾದ ಮನೆಗಳ ಫಲಾನುಭವಿಗಳಿಗೆ ಪರಿಹಾರ ಚೆಕ್ ವಿತರಿಸಲಾಯಿತು. 405 ಮನೆಗಳ ಸಂತ್ರಸ್ತರಿಗೆ ಪರಿಹಾರ ನೀಡಲಾಯಿತು. ಕೊಂಕಲ್ 108 ಮನೆಗಳು, ಗುರುಮಠಕಲ್ 35 ಮನೆಗಳು, ಬಳಿಚಕ್ರ 252 ಮನೆಗಳು, ಯಾದಗಿರಿ 08 ಮನೆಗಳು, ಸೈದಾಪುರ ಹಾಗೂ ಹತ್ತಿಕುಣಿಯಲ್ಲಿ ತಲಾ 1 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಗಾಯಗೊಂಡ ಜನರ ಬಗ್ಗೆ, ಬೆಳೆ ಹಾನಿ, ತೋಟಗಾರಿಕೆ ಬೆಳೆಗಳ ಹಾನಿಗೆ ಸಂಬಂಧಿಸಿದಂತೆ ವರದಿ ನೀಡುವಂತೆ ಆಯಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆಂದು ವಿಜಯ್ ತಿಳಿಸಿದರು. ಮುನ್ನೆಚ್ಚರಿಕೆ ದೃಷ್ಟಿಯಿಂದ ವಿದ್ಯುತ್ ಕಡಿತಗೊಳಿಸಲಾಗಿದೆ. ತೀವ್ರ ಬಾಧಿತ ಪ್ರದೇಶಗಳಿಗೆ ಕುಡಿವ ನೀರಿನ ಪರ್ಯಾಯ ವ್ಯವಸ್ಥೆ ಕೈಗೊಳ್ಳಲು ಡಿಸಿ ಸೂಚಿಸಿದ್ದಾರೆ.