ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮಳೆ ಹಾನಿ ವರದಿ ಸಲ್ಲಿಸಿ: ಜಿಲ್ಲಾಧಿಕಾರಿ

Mainashree
Updated On : 7 Mar 2014, 10:57 am

ಕನ್ನಡಪ್ರಭ ವಾರ್ತೆ  ಯಾದಗಿರಿ  ಮಾ.6
ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದ್ದು, ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ.  
  ಈ ಭಾಗದಲ್ಲಿ ಬಿಳಿಜೋಳ ಪ್ರಮುಖ ಬೆಳೆಯಾಗಿದ್ದು, ಈಗ ಕಾಳುಕಟ್ಟಿ ಕಟಾವಿಗೆ ಬಂದಿದೆ. ಇನ್ನೂ ಕೆಲವಡೆ ಕಟಾವು ಮಾಡಿ ರಾಶಿಗಾಗಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಈಗ ಬಿದ್ದ ಮಳೆಯಿಂದ ಜೋಳ ಕಪ್ಪುಗಟ್ಟುವ ಸಾಧ್ಯತೆಯೊಂದಿಗೆ ಕೆಟ್ಟುಹೋಗುವ ಸಾಧ್ಯತೆ ಹೆಚ್ಚಾಗಿದೆ. ಇದು ರೈತರಲ್ಲಿ ಭೀತಿ ಮೂಡಿಸಿದೆ.
ಎಪಿಎಂಸಿಯಲ್ಲಿ ಹಾನಿ: ಎಪಿಎಂಸಿ ಆವರಣದಲ್ಲಿ ಮಾರಾಟಕ್ಕೆ ತಂದ ಶೇಂಗಾ ಮತ್ತು ಇತರ ಬೆಳೆಗಳು ಅಕಾಲಿಕ ಮಳೆಯಿಂದ ಒದ್ದೆಯಾಗಿ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಕೋಟ್ಯಾಂತರ ರೂ. ಮೌಲ್ಯದ ಬೆಳೆಗಳನ್ನು ಮಾರುಕಟ್ಟೆಯ ರಸ್ತೆಯ ಮೇಲೆ ಸುರಿಯಲಾಗಿದೆ. ದಿಢೀರ್ ಎಂದು ಸುರಿದ ಮಳೆಯಿಂದಾಗಿ ಬೆಳೆ ರಕ್ಷಣೆ ಮಾಡಲು ಆಗಿಲ್ಲ ಎಂದು ಸಮಿತಿಯ ಅಧಿಕಾರಿಗಳು ತಿಳಿಸಿದ್ದಾರೆ.
ಗುರುಮಠಕಲ್ ವರದಿ: ಮತಕ್ಷೇತ್ರದ ಕೊಂಕಲ್, ಹತ್ತಿಕುಣಿ ಸೈದಾಪುರ, ಬಳಿಚಕ್ರ, ಪುಟಪಾಕ, ಗುರುಮಠಕಲ್ ಹೋಬಳಿಗಳ ಹಲವು ಗ್ರಾಮಗಳಲ್ಲಿ ರೈತರು ಬೆಳೆದ ಜೋಳ ನೆಲಕ್ಕೆ ಉರುಳಿದೆ. ಪರಿಹಾರಕ್ಕಾಗಿ ರೈತರು ದಾರಿಕಾಯುವಂತಾಗಿದೆ.
ಶಹಾಪುರ ವರದಿ: ತಾಲೂಕಿನಲ್ಲಿ ಬುಧವಾರ ರಾತ್ರಿ ಬಿದ್ದ ಮಳೆ ಪ್ರಮಾಣ ಹೀಗಿದೆ: ಶಹಾಪುರ-33 ಎಂಎಂ, ವಡಗೇರಾ-60 ಎಂಎಂ, ಹಯ್ಯಾಳ-66 ಎಂಎಂ, ಹತ್ತಿಗೂಡೂರು-49 ಎಂಎಂ, ಗೋಗಿ-14.2 ಎಂಎಂ ಹಾಗೂ ಭೀಮರಾಯನಗುಡಿ- 9.5 ಎಂಎಂ. ಮಳೆಯಾಗಿದೆ.
  ಯಾದಗಿರಿ ಸಹಾಯಕ ಆಯಕ್ತ ಬಿ ಪಿ ವಿಜಯಕುಮಾರ್ ಶಹಾಪುರ ತಾಲೂಕಿನ ಹಾನಿಗೊಳಗಾದ ಹಳ್ಳಿಗಳ ಭೇಟಿ ಕೈಗೊಂಡಿದ್ದು, ಹಾನಿ ಅಂದಾಜು ನಡೆಸಿದ್ದಾರೆ.
  ಇನ್ನು ಗುಂಡಳ್ಳಿ ಶಾಲಾ ಮೈದಾನದಲ್ಲಿ ನೀರು ಸಂಗ್ರಹವಾಗಿ ಸಣ್ಣ ಕೆರೆಯಂತಾದ ಪ್ರಯುಕ್ತ ಶಾಲಾ ಮಕ್ಕಳು ಶಾಲೆಗೆ ಹೋಗಲು ಪರದಾಡುವ ಸ್ಥಿತಿ ಕಂಡು ಬಂದಿತು. ನಾಯ್ಕಲ್, ಗುಂಡಳ್ಳಿ, ಖಾನಾಪುರ, ಚಟ್ನಳ್ಳಿ, ಗುಂಡಗುತರ್, ಕುರಕುಂದಿ ಹಾಗೂ ಇತರ ಹಳ್ಳಿಗಳ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಹಾಗೂ ಕಟಾವಿಗೆ ಬಂದಿದ್ದ ಜೋಳದ ಬೆಳೆ ನೆಲಕ್ಕುರುಳಿ ಲಕ್ಷಾಂತರ ಮೌಲ್ಯದ ಬೆಳೆ ಹಾನಿಯಾಗಿದೆ.
ಸುರಪುರ ವರದಿ: ಸುರಪುರದಲ್ಲಿ 46 ಮಿಲಿ ಮೀಟರ್, ಕಕ್ಕೇರಾ 17.2, ಹುಣಸಗಿ 9.8, ನಾರಾಯಣಪುರ 8.6, ಕೊಡೇಕಲ್, 27.2, ಕೆಂಭಾವಿ 12 ಮಿ.ಮೀ. ಮಳೆಯಾಗಿರುವುದಾಗಿ ಮಳೆಮಾಪನ ಕೇಂದ್ರ ತಿಳಿಸಿದೆ.  
  ಮಳೆ ಹಾನಿ ಬಗ್ಗೆ ಇದುವರೆಗೂ ದೂರು ಬಂದಿಲ್ಲ. ಒಂದು ವೇಳೆ ದೂರು ಬಂದರೆ ಪರಿಶೀಲಿಸಿ ಮುಂದಿನ ಕ್ರಮಕ್ಯಗೊಳ್ಳಲಾಗುವುದು ಎಂದು ತಹಸೀಲ್ದಾರ್ ಅರುಣಕುಮಾರ ಕುಲಕಣರ್ ತಿಳಿಸಿದ್ಧಾರೆ. ತಾಲೂಕಿನ ಬೇವಿನಾಳ, ರತ್ತಾಳ, ದೇವಿಕೇರಿ, ಶೆಳ್ಳಗಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಧಾರಾಕಾರ ಮಳೆಯಿಂದ ರೈತರು ಬೆಳೆದಿದ್ದ ಶೇಂಗಾ, ಜೋಳ, ಹತ್ತಿ ಬೆಳೆಗಳು ನೆಲಕ್ಕುರಳಿವೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಪರಿಹಾರ ನೀಡಿ: ತಾಲೂಕಿನಲ್ಲಿ ಅಕಾಲಿಕ ಮಳೆಯಿಂದ ಹಾನಿಗೊಳಗಾದ ರೈತರ ಜಮೀನುಗಳ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಎಂದು ರೈತ ಮುಖಂಡರಾದ ಸೋಮಶೇಖರ ಶಾಬಾದಿ, ಡಾ.ಶರಣಪ್ಪ ಯಾಳಗಿ ಡಿಸಿಗೆ ಒತ್ತಾಯಿಸಿದ್ದಾರೆ.
ಹಾನಿಯ ಬಗ್ಗೆ ವರದಿ ಸಂಗ್ರಹಿಸಲು ಸೂಚನೆ: ಜಿಲ್ಲೆಯಲ್ಲಿ ಕಳೆದ ಎರಡು ಮೂರು ದಿನದಿಂದ ಬಿದ್ದ ಮಳೆ ಮತ್ತು ಬಿರುಗಾಳಿಯಿಂದ ರೈತರ ಬೆಳೆಗಳು ಹಾನಿಯಾದ ಬಗ್ಗೆ ತಿಳಿದು ಬಂದಿದೆ. ಜತೆಗೆ ಅನೇಕ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು, ಗಿಡಮರಗಳು ಬಿದ್ದು ಸಾಕಷ್ಟು ಹಾನಿಯಾದ ಬಗ್ಗೆಯೂ ವರದಿಯಾಗಿದೆ.  ಈ ಹಿನ್ನೆಲೆಯಲ್ಲಿ, ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ಮಾಡಿ ನಷ್ಟದ ಅಂದಾಜು ವರದಿಯನ್ನು ಸಿದ್ದಪಡಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಫ್.ಆರ್.ಜಮಾದಾರ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement