ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನೀತಿಸಂಹಿತೆ ಅನುಷ್ಠಾನಗೊಳಿಸಿ

Rashmi Kasaragodu
Updated On : 8 Mar 2014, 10:53 am

ಯಾದಗಿರಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾ. 5ರಿಂದ ನೀತಿ ಸಂಹಿತಿ ಜಾರಿಯಲ್ಲಿದ್ದು ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ಎಫ್.ಆರ್.ಜಮಾದಾರ ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ನೀತಿ ಸಂಹಿತೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ರಾಜಕೀಯ ಪಕ್ಷದವರಾಗಲಿ ಅಥವಾ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಾಗಲಿ, ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಚುನಾವಣೆ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸಿಕೊಂಡು ಹೋಗಬೇಕು. ನೀತಿ ಸಂಹಿತಿ ಉಲ್ಲಂಘನೆಯಾಗಿರುವುದು ಗಮನಕ್ಕೆ ಬಂದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಯಾವುದೇ ರಾಜಕೀಯ ಪಕ್ಷ, ಚುನಾವಣೆ ಆಯೋಗದ ಅನುಮತಿ ಇಲ್ಲದೆ  ಬ್ಯಾನರ್ ಬಂಟಿಂಗ್ಸ್ ಇತ್ಯಾದಿ  ಅಳವಡಿಸಬಾರದು. ಗೋಡೆಬರಹ, ಧ್ವನಿವರ್ಧಕ ಬಳಕೆ ಹಾಗೂ ಜಾಥಾಗಳನ್ನು ಹಮ್ಮಿಕೊಳ್ಳುವ ಮೊದಲು ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳಬೇಕೆಂದು ತಿಳಿಸಿದರು.
 ಚುನಾವಣೆಗೆ ಸಂಬಂಧಿಸಿದಂತೆ ಏನಾದರೂ  ಮಾಹಿತಿ ಬೇಕಾದಲ್ಲಿ ಅಥವಾ ದೂರುಗಳು ಇದ್ದಲ್ಲಿ  ಸಹಾಯಕ ಚುನಾವಣಾಧಿಕಾರಿಗಳಿಗಾಗಲಿ ಅಥವಾ ತಹಸೀಲ್ದಾರರಿಗಾಗಲಿ ಸಂಪರ್ಕಿಸಬಹುದು ಎಂದು ತಿಳಿಸಿದರು.
ಚುನಾವಣೆ ಆಯೋಗದ ನಿರ್ದೇಶನದ  ಮೇರೆಗೆ, ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದೇ ಇದ್ದಲ್ಲಿ  ಹೆಸರು ಸೇರ್ಪಡೆಗಾಗಿ ವಿಶೇಷ ಶಿಬಿರವನ್ನು ಮಾ.9 ರಂದು ಜಿಲ್ಲೆಯ ಎಲ್ಲಾ ಮತದಾನ ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಸಹಾಯಕ ಆಯುಕ್ತರಾದ ಬಿ.ಪಿ. ವಿಜಯ, ವಿಶೇಷ ಭೂಸ್ವಾಧೀನ ಅಧಿಕಾರಿ ಶಿವಾನಂದ ಕರಾಳೆ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಾಮಣಗೌಡ, ಜಿ.ಪಂ. ಯೋಜನಾಧಿಕಾರಿ ಬಸವರಾಜ, ಪೊಲೀಸ್ ಇಲಾಖೆ, ಜಿಲ್ಲಾಮಟ್ಟದ ಅಧಿಕಾರಿಗಳು, ರಾಜಕೀಯ ಪಕ್ಷಗಳ ನಾಯಕರು ಇದ್ದರು.
ಪೂರ್ವಭಾವಿ ಸಭೆ: ನಾಮಪತ್ರಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ ಮಾ. 26. ನಾಮಪತ್ರಗಳನ್ನು ಸಂಬಂಧಪಟ್ಟ ಲೋಕಸಭಾ ಕ್ಷೇತ್ರದ ಕೇಂದ್ರ ಸ್ಥಾನದ ಜಿಲ್ಲಾಧಿಕಾರಿಗಳ ಕಾರ್ಯಲಯದಲ್ಲಿ ಸ್ವೀಕರಿಸಲಾಗುವುದು. ರಾಯಚೂರು ಲೋಕಸಭಾ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಿದ್ದು, ರಾಯಚೂರ ಲೋಕಸಭಾ ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಸಂಖ್ಯೆ 36-ಶೋರಾಪುರ, 6-ರಾಯಚೂರು, 37-ಶಹಾಪುರ,  38-ಯಾದಗಿರಿ ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಸೇರುತ್ತದೆ.
ಗುಲ್ಬರ್ಗ ಲೋಕಸಭಾ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಿದ್ದು,  5-ಗುಲ್ಬರ್ಗ, 39-ಗುರುಮಿಠಕಲ್, ಗುಲ್ಬರ್ಗ ಲೋಕಸಭಾ ಕ್ಷೇತ್ರಕ್ಕೆ ಸೇರುತ್ತದೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. ಯಾದಗಿರಿ ಜಿಲ್ಲೆಯಾದ್ಯಂತ ಸುರಪುರ, ಶಹಾಪುರ, ಯಾದಗಿರಿ, ಗುರುಮಠಕಲ್ ಸೇರಿದಂತೆ ಒಟ್ಟು 1,006 ಮತಗಟ್ಟೆಗಳಿವೆ. ಯಾದಗಿರಿ ಜಿಲ್ಲೆ ವಿಧಾನಸಭಾ ಕ್ಷೇತ್ರದ ಮಾಹಿತಿ ಪ್ರಕಾರ 4,17,780 ಪುರುಷ ಹಾಗೂ 4,11,853 ಮಹಿಳೆಯರೂ ಸೇರಿ ಒಟ್ಟು 8,29,633 ಮತದಾರರಿದ್ದಾರೆ ಎಂದು ಹೇಳಿದರು.
 ನೀತಿ ಸಂಹಿತೆ ಪ್ರಕಾರ ಕಟ್ಟುನಿಟ್ಟನ ಕ್ರಮಕೈಗೊಳ್ಳಲು ಪೋಲಿಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ಹಾನಿ ಉಂಟಾಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಂಚಾರಿ ದಳ, ಎಸ್‌ಎಸ್‌ಟಿ. ಹಾಗೂ  ಎಂಸಿಸಿ. ತಂಡಗಳನ್ನು ರಚಿಸಲು ಕ್ರಮ ಕೈಗೊಳ್ಳಲಾಗುವುದು  ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಸಭೆಯಲ್ಲಿ ಸಹಾಯಕ ಆಯುಕ್ತರಾದ ಬಿ. ಪಿ.  ವಿಜಯ, ವಿಶೇಷ ಭೂಸ್ವಾಧೀನ ಅಧಿಕಾರಿ ಶಿವಾನಂದ ಕರಾಳೆ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಾಮಣಗೌಡ, ಜಿ.ಪಂ. ಯೋಜನಾಧಿಕಾರಿ ಬಸವರಾಜ, ಪೊಲೀಸ್  ಇಲಾಖೆ  ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement