ಕ್ರೀಡಾಪಟುಗಳಿಗೆ ತಾಳ್ಮೆ ಅಗತ್ಯ: ಗಗನದೀಪ್
ಯಾದಗಿರಿ: ಪ್ರತಿಯೊಬ್ಬ ಆಟಗಾರ ತಾಳ್ಮೆಯನ್ನು ಹೊಂದಿರುವುದು ಅಗತ್ಯ. ಇದರಿಂದ ಅವರಿಗೆ ಯಶಸ್ಸು ಖಂಡಿತ ಸಿಗುತ್ತದೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕೆ. ವಿ. ಗಗನದೀಪ್ ಹೇಳಿದರು.
ಇಲ್ಲಿನ ಆಫೀಸರ್ಸ್ ಕ್ಲಬ್‌ನಲ್ಲಿ ನಡೆಯುತ್ತಿರುವ ವಿಭಾಗ ಮಟ್ಟದ 7ನೇ ಟೆನಿಸ್ ಟೂರ್ನಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಮಾನಸಿಕ ಖಿನ್ನತೆ ಅನುಭವಿಸುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಕ್ರೀಡಾಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಮಾನಸಿಕ ಒತ್ತಡವನ್ನು ನಿವಾರಣೆ ಮಾಡಿಕೊಳ್ಳಬಹುದು ಎಂದು ಅವರು ಹೇಳಿದರು.ರಾಜೀವ್ ಗಾಂಧಿ ಅಭಿವೃದ್ಧಿ ನಿಗಮದ ನಿರ್ದೇಶಕ ಡಾ.ಕೆ. ಜಿ. ಜಗದೀಶ ಮಾತನಾಡಿ, ಜಿಲ್ಲೆಯಲ್ಲಿ ಟೆನಿಸ್ ಕೋರ್ಟ್ ಸ್ಥಾಪಿಸಿದ್ದು, ಈ ಭಾಗದ ಯುವ ಪ್ರತಿಭೆಗಳಿಗೆ ಇದು ಸಹಾಯವಾಗಲಿದೆ. ಇದರ ಸದುಪಯೋಗವನ್ನು ಎಲ್ಲರು ಪಡೆದುಕೊಳ್ಳಬೇಕು ಎಂದರು. ಸಂಘಟಕ ಡಾ.ಶರಣರಡ್ಡಿ ಕೊಡ್ಲಾ ಮಾತನಾಡಿದರು. ತರಬೇತುದಾರರಾದ ವಿವೇಕ ಚತುರ್ವೇದಿ, ರೋನಿ ಸಹಗಲ್ ವೇದಿಕೆಯಲ್ಲಿದ್ದರು. ಗುಲ್ಬರ್ಗ, ಬಿಜಾಪುರ, ಯಾದಗಿರಿ, ಬೀದರ್, ಬೆಂಗಳೂರ, ರಾಯಚೂರ, ಹೊಸಪೇಟೆ, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳ 65 ತಂಡಗಳು ಟೂರ್ನಿಯಲ್ಲಿ ಭಾಗವಹಿಸಿವೆ.