ಬೇಸಿಗೆ ಶುರುವಾಯ್ತು, ಕಲ್ಲಂಗಡಿ ಬೇಡಿಕೆ ಹೆಚ್ಚಾಯ್ತು
ಹುಣಸಗಿ: ಬೇಸಿಗೆಯ ಬಿಸಿಲಿನ ತಾಪದಿಂದ ದಾಹವನ್ನು ತೀರಿಸಿಕೊಳ್ಳಲು, ಮಾರ್ಚ್ ಆರಂಭದಲ್ಲಿ ಚುರುಕು ಬಿಸಿಲಿನ ಧಗೆಯನ್ನು ಅನುಭವಿಸುತ್ತ ಉಶ್...ಎನ್ನುತ್ತ, ಮಾರುಕಟ್ಟೆಗೆ ಕಲ್ಲಂಗಡಿ ಹಣ್ಣುಗಳು ಬಂದಿವೆ. ನಗರದ ನಾಗರಿಕರು ಮುಗಿಬಿದ್ದು ಖರೀದಿಯಲ್ಲಿ ತೊಡಗಿದ್ದಾರೆ. ಇನ್ನೂ ಬೇಸಿಗೆ ಆರಂಭದಲ್ಲೇ ಇಷ್ಟು ಬಿಸಿಲು ಇರುವಾಗ ಇನ್ನೂ ಮುಂದಿನ ದಿನಗಳಲ್ಲಿ ಬಿಸಿಲಿನ ಪ್ರಮಾಣ ಎಷ್ಟೆಂದು ಲೆಕ್ಕ ಹಾಕುತ್ತಿರುವವರು ಕಲ್ಲಂಗಡಿಗೆ ಮೊರೆ ಹೊಗುತ್ತಿರುವುದು ಪಟ್ಟಣದಲ್ಲಿ ಸಾಮಾನ್ಯ ದೃಶ್ಯವಾಗಿದೆ.
ಕಲ್ಲಂಗಡಿಗೆ ರು. 40 ರಿಂದ ರು. 150 ಆದರೂ, ತಲೆ ಕೆಡಿಸಿಕೊಳ್ಳದೇ ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಕೃಷ್ಣಾ ತೀರದ ಗ್ರಾಮಗಳಾದ ಹೆಮ್ಮಡಗಿ, ಸೂಗೂರು, ದೇವದುರ್ಗ, ಜಾಲಹಳ್ಳಿ, ಅಡ್ಡವಡಗಿ, ವಡ್ಡೋಡಗಿ ಮುಂತಾದ ಊರುಗಳಿಂದ ಆಮದು ಮಾಡಿಕೊಂಡು ಒಳ್ಳೆಯ ಬೆಲೆಗೆ ಇಲ್ಲಿನ ವ್ಯಾಪಾರಿಗಳು ವ್ಯಾಪಾರ ಚನ್ನಾಗಿ ನಡೆಸುತ್ತಿದ್ದಾರೆ.
ಸುಮಾರು 20 ವರ್ಷಗಳಿಂದ ಕಲ್ಲಂಗಡಿ ಹಣ್ಣಿನ ವ್ಯಾಪಾರ ಮಾಡುತ್ತಿರುವ ಶಾಂತಮ್ಮ ಅವರ ಪ್ರಕಾರ, ಕಳೆದ ಸುಮಾರು ವರ್ಷಗಳಿಗಿಂತ ಈ ವರ್ಷ ವ್ಯಾಪಾರ ಚೆನ್ನಾಗಿದೆ. ಇದೀಗ ಎರಡು ಲೋಡ್ಗಳನ್ನು ತರಿಸಿಕೊಂಡಿದ್ದು, ಬೇಸಿಗೆ ಅನ್ನುವಷ್ಟರಲ್ಲಿ ಹೆಚ್ಚಿಗೆ ಮಾರಾಟ ಮಾಡುವ ಉದ್ದೇಶ ಹೊಂದಿದ್ದೇವೆಂದು ಪತ್ರಿಕೆಗೆ ತಿಳಿಸಿದರು.
ಕಲ್ಲಂಗಡಿ ಹಿನ್ನಲೆ: ಮಧ್ಯಮಾವಧಿ ತಳಿಯಾದ ಇದು, ಭಾರತ ಮತ್ತು ಆಫ್ರಿಕಗಳ ಮೂಲ ಬೆಳೆಯಾಗಿದೆ.
ಜಗತ್ತಿನ ಪ್ರತಿಯೊಂದು ದೇಶಗಳಲ್ಲಿ ಬೆಳೆಯುವ ಹಣ್ಣಾಗಿದೆ. ಇದು ಉಷ್ಣ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಇದು ಕುಕುಬರ್ಟೇಸಿ ಕುಟುಂಬಕ್ಕೆ ಸೇರಿದ ಬಳ್ಳಿ. ಬೆಚ್ಚಗಿನ ಹವೆಯಲ್ಲಿ ಚೆನ್ನಾಗಿ ಬೆಳೆಯುತ್ತದೆ.
ಔಷಧಿಯಾಗಿ ಕಲ್ಲಂಗಡಿ: ಈ ಹಣ್ಣಿನಲ್ಲಿ 20ಕ್ಕೂ ಹೆಚ್ಚು ಆರೋಗ್ಯವರ್ಧಕ ಗುಣಗಳಿದ್ದು, ಇದು ಆರೋಗ್ಯಕ್ಕೆ ತುಂಬಾ ಲಾಭದಾಯಕವಾಗಿದೆ. (ಮಧುಮೇಹಿಗಳ ಹೊರತು ಪಡಿಸಿ) ಕಾಮಾಲೆ, ಮಲಬದ್ಧತೆಗೆ, ಮಂಡಿನೋವು, ಕಾಲು ಸೆಳೆತಕ್ಕೆ ಇದು ರಾಮಬಾಣವಾಗಿದೆ. ಈ ಹಣ್ಣಿನಲ್ಲಿ ಪ್ರತ್ಯಾಮ್ಲಗಳು ಅಧಿಕವಾಗಿರುತ್ತವೆ. ದೇಹಕ್ಕೆ ಹಾನಿಯುಂಟು ಮಾಡುವ ಬೇಡದ ರಾಸಾಯನಿಕಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.
ಸೌಂದರ್ಯಕ್ಕೆ ಕಲ್ಲಂಗಡಿ: ಮೊಡವೆಗಳಿಂದ ಮುಖದಲ್ಲಿ ಕಲೆಗಳಿದ್ದರೆ ದುಬಾರಿ ಬೆಲೆಯ ಲೋಷನ್, ಕ್ರೀಂಗಳು, ಹಚ್ಚುವದರ ಬದಲು ಕಲ್ಲಂಗಡಿ ಹಣ್ಣಿನ ಸಿಪ್ಪೆಯನ್ನು ಬಳಸಬಹುದಾಗಿದೆ.
ದೇಹದ ಕಾಂತಿ, ಸೌಂದರ್ಯ ವರ್ಧಕವೂ ಆಗಿದೆ. ಹೆಚ್ಚಿನ ಭಾಗ ನೀರಿನಿಂದ ಕೂಡಿರುವುದರಿಂದ ನಿರಂತರವಾಗಿ ತಿನ್ನುವುದರಿಂದ ದೇಹದಲ್ಲಿನ ಅತಿ ಉಷ್ಣತೆ ಸಮಸ್ಥಿತಿಗೆ ಬರುತ್ತದೆ.
ಕಲ್ಲಂಗಡಿಗೂ ರೋಗಗಳು: ಮನುಷ್ಯರಿಗೆ, ಪ್ರಾಣಿಗಳಿಗೆ ಮಾತ್ರ ರೋಗಗಳು ಸೀಮಿತವಾಗಿರದೇ ಹಣ್ಣುಗಳಿಗೂ ಬಂದು ಬಿಡುತ್ತವೆ. ಆ ರೋಗಗಳೆಂದರೆ ಸಸ್ಯ ಹೇನು, ಹಣ್ಣಿನ ನೊಣ, ಬಾಡುವ ರೋಗ, ಚಿಬ್ಬುರೋಗ, ತುಪ್ಪುಳಿನ ರೋಗ, ಬೂದಿರೋಗ, ಸೊರಗುರೋಗ ಇನ್ನೂ ಮುಂತಾದವುಗಳಿವೆ. ಇದು ಕಲ್ಲಂಗಡಿ ಬೆಲೆ ಇಳಿಕೆಗೂ ಕಾರಣವಾಗುತ್ತದೆ.
ಆರೋಗ್ಯದಲ್ಲಿ ಸಂಜೀವಿನಿ
ಹಣ್ಣಿನ ರಸದ ಸೇವನೆ ದಣಿದ ದೇಹಕ್ಕೆ ನವೋಲ್ಲಾಸ ನೀಡುತ್ತದೆ. ಕಡಿಮೆ ಹಣ ಕೊಟ್ಟು ದೇಹಕ್ಕೆ ಅಧಿಕ ಲಾಭ ಪಡೆಯುವ ಹಣ್ಣೆಂದರೆ ಕಲ್ಲಂಗಡಿ. ಕ್ಯಾಲ್ಶಿಯಂ, ಮ್ಯಾಂಗನೀಸ್, ಸಸಾರಜನಕ, ಕಬ್ಬಿಣ, ಮೇದಸ್ಸು, ವಿಟಾಮಿನ್ ಸಿ, ಮೊದಲಾದ ಜೀವಸತ್ವಗಳು, ಪೌಷ್ಟಿಕಾಂಶಗಳಿಂದ ಕೂಡಿದೆ. ಕಲ್ಲಂಗಡಿಯ ಎಲೆಗಳು ರಕ್ತ ವೃದ್ಧಿಯಲ್ಲಿ ಸಹಾಯಕವಾರುತ್ತದೆ. ಅಂಗಾಲುಗಳಲ್ಲಿ ಉರಿ, ಕಣ್ಣಿನ ಉರಿ, ತಲೆನೋವು, ಉರಿ ಮೂತ್ರ, ಇರುವವರಿಗೆ ಒಳ್ಳೆಯ ಹಣ್ಣು ಇದಾಗಿದೆ.