ಶೋಷಣೆಯ ವಿರುದ್ಧ ಧ್ವನಿಗೂಡಿಸಿ: ಚೆಗುಂಟಾ
ಯಾದಗಿರ: ಶಿಕ್ಷಣ ಪಡೆದ ಪ್ರತಿಯೊಬ್ಬರು ಶೋಷಣೆಯ ವಿರುದ್ಧ ದನಿ ಎತ್ತಬೇಕು. ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಪೋಷಕರು ಹೆಣ್ಣು ಮಕ್ಕಳಿಗೆ ಪ್ರಥಮ ಪ್ರಾಶ್ಯಸ್ತ್ಯ ನೀಡಬೇಕು ಎಂದು ಸಮಾಜ ಸೇವಕಿ ಸರಸ್ವತಿ ಚೆಗುಂಟಾ ಮನವಿ ಮಾಡಿದರು.
ಇಲ್ಲಿನ ಲಿಂಗೇರಿ ಕೋನಪ್ಪ ಮಹಿಳಾ ಕಾಲೇಜಿನಲ್ಲಿ ಶನಿವಾರ ನಡೆದ ವಿಶ್ವ ಮಹಿಳಾ ದಿನಾಚರಣೆ ಹಾಗೂ ವಿದ್ಯಾರ್ಥಿಗಳಿಗಾಗಿನ ಸೌಂದರ್ಯ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸಿ ಶಿಕ್ಷಣ ಸಂಸ್ಥೆಗಳು ಅವರ ಪ್ರತಿಭೆಗೆ ತಕ್ಕ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ. ವರದಕ್ಷಿಣೆ ಪಿಡುಗು ಇನ್ನಿತರ ಶೋಷಣೆ ವಿರುದ್ಧ ಹೋರಾಡುವಂತಹ ಮನೋಸ್ಥೈರ್ಯವನ್ನು ಮಹಿಳೆಯುರ ಬೆಳಿಸಿಕೊಳ್ಳಬೇಕು ಎಂದರು.
ಸಂಸ್ಥೆಯ ಜಂಟಿ ಕಾರ್ಯದರ್ಶಿ ರಘುನಾಥರಡ್ಡಿ ಪಾಟೀಲ ಮಾತನಾಡಿ, ಮಹಿಳೆಯರು ಪುರುಷರಂತೆ ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರಬೇಕು. ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರ ತರುವ ನಿಟ್ಟಿನಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು. ಪ್ರಾಂಶುಪಾಲ ಗುರಪ್ಪಾಚಾರ್ಯ ವಿಶ್ವಕರ್ಮ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಡಾ.ಶೈಲಜಾ ನಾಯ್ಕಲ್, ಡಾ.ಜಯಶ್ರೀ, ಶೀಬಾ ಪಾಲ್, ಲಲಿತಾ ಅನಪೂರ, ಶರಣಮ್ಮ ನಾಯಕ್, ಹಾಗೂ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿ ಭೀಮಮ್ಮ ಅವರನ್ನು ಸನ್ಮಾನಿಸಲಾಯಿತು.