ಕಸ ವಿಲೇವಾರಿಯಲ್ಲಿ ಪುರಸಭೆ ದಿವ್ಯ ನಿರ್ಲಕ್ಷ್ಯ
ಶಹಾಪುರ: ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿನ ಹಲವಾರು ವಾರ್ಡ್ಗಳಲ್ಲಿ ಅಧಿಕಾರಿಗಳು ಕಸವಿಲೇವಾರಿ ಬಗ್ಗೆ ಗಮನಹರಿಸದೆ ಇರುವ ಹಿನ್ನೆಲೆಯಲ್ಲಿ ಇದೀಗ ಈ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ ಎಂದು ಹಳೆಪೇಟೆ ವಾರ್ಡ್ನ ಮಹ್ಮದ್ ಇಸ್ಮಾಯಿಲ್ ಇಬ್ರಾಹಿಂ ಖಲೀಲ ತಿಮ್ಮಾಪುರಿ ಆರೋಪಿಸಿದ್ದಾರೆ.
ಈ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ತಿಳಿದು ಬಂದ ಪ್ರಕಾರ 2013-13ನೇ ಸಾಲಿಗಾಗಿ ಸುಮಾರು 26 ಲಕ್ಷಕ್ಕಿಂತಲೂ ಹೆಚ್ಚಿನ ಹಣವನ್ನು ಕಸ ವಿಲೇವಾರಿ ಮಾಡಲು ಖರ್ಚು ಮಾಡಲಾಗಿದೆ. ಅದರೂ ನಿಗದಿತವಾಗಿ ಹಳೆಪೇಟೆಗೆ ಸಂಬಂಧಿಸಿದಂತೆ 15ರಿಂದ 18ನೇ ವಾರ್ಡ್ನವರೆಗೆ ಚರಂಡಿಗಳ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ನೀರು ಸರಾಗವಾಗಿ ಹರಿಯದೆ ಮುಖ್ಯರಸ್ತೆಯಲ್ಲಿ ಕಸಗುಡಿಸುವವರ ಕೊರತೆ ಎದ್ದು ಕಾಣುತ್ತಿದೆ. ಕಾರ್ಮಿಕರ ಕೊರತೆ ನೆಪದಲ್ಲಿ ಪಟ್ಟಣದ ಮೂಲಭೂತ ಸೌಕರ್ಯವನ್ನು ಕಡೆಗಣಿಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇಲ್ಲಿನ ಬೀದಿ ದೀಪಗಳು ಸಂಪೂರ್ಣವಾಗಿ ಕೆಟ್ಟು ಹೋಗಿದ್ದು ಜನತೆ ಕತ್ತಲಲ್ಲಿ ಕಾಲ ಕಳೆಯುವಂಥ ಸ್ಥಿತಿ ಉಂಟಾಗಿದೆ. ಇನ್ನು ಹಳೆಪೇಟೆಯ ಆದಿಲ್ಪುರ ಬಡಾವಣೆಯಂತೂ ಪುರಸಭೆಯ ಕಣ್ಣಿಗೆ ಕಾಣದಂತಾಗಿದೆ. ಈ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳು ಶೀಘ್ರ ಈ ಕುರಿತು ಗಮನ ಹರಿಸಿ ವಾರ್ಡ್ಗಳನ್ನು ಶುದ್ಧ ಮತ್ತು ಸ್ವಚ್ಛವಾಗಿಡುವಂತೆ ತಿಮ್ಮಾಪುರಿ ಆಗ್ರಹಿಸಿದ್ದಾರೆ.