ಕೊರತೆ ಮಧ್ಯೆ ಫಲಿತಾಂಶ ನಿರೀಕ್ಷೆ
ಮಂಜುನಾಥ ಸ್ವಾಮಿ
ಕನ್ನಡಪ್ರಭ ವಾರ್ತೆ ಯಾದಗಿರಿ ಮಾ.9
ಇದೇ ಮಾರ್ಚ್ 28ರಿಂದ ಪ್ರಾರಂಭವಾಗುತ್ತಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಶಿಕ್ಷಣ ಇಲಾಖೆ ಸಕಲ ಸಿದ್ಧತೆಕೈಗೊಂಡಿದೆ. ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಮಧ್ಯೆ ಫಲಿತಾಂಶ ಹೆಚ್ಚಳ ನಿರೀಕ್ಷೆಯಲ್ಲಿ ಶಿಕ್ಷಣ ಇಲಾಖೆ ಕಾರ್ಯಗತವಾಗಿದೆ.
ಜಿಲ್ಲೆಯಾದ್ಯಂತ 39 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಯಾದಗಿರಿ ತಾಲ್ಲೂಕಿನಲ್ಲಿ 16, ಸುರಪುರ 12, ಶಹಾಪುರದಲ್ಲಿ 11 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ.
ಈ ಬಾರಿ ಪರೀಕ್ಷೆಯಲ್ಲಿ 10,245 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಅದರಲ್ಲಿ 750 ಖಾಸಗಿ ವಿದ್ಯಾರ್ಥಿಗಳಿದ್ದಾರೆ.
ಕಳೆದ ಬಾರಿ ಫಲಿತಾಂಶದಲ್ಲಿ ಜಿಲ್ಲೆಯ ಕಳಪೆ ಸಾಧನೆಗೆ ಎಲ್ಲೆಡೆಯಿಂದ ಶಿಕ್ಷಣ ಇಲಾಖೆ ವಿರುದ್ಧ ವ್ಯಾಪಕ ದೂರುಗಳು ಬಂದಿದ್ದವು. ಇದರಿಂದ ಎಚ್ಚೆತ್ತ ಶಿಕ್ಷಣ ಇಲಾಖೆ ಈ ಬಾರಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಂಡು ಹಲವು ಯೋಜನೆಗಳನ್ನು ರೂಪಿಸಿ ಪರೀಕ್ಷೆಗೆ ಸನ್ನದ್ಧವಾಗಿದೆ.
ತಾಲೂಕು ಮಟ್ಟದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ತನಿಖಾ ತಂಡ ಹಾಗೂ ಆಯಾ ತಾಲ್ಲೂಕುಗಳಲ್ಲಿ ಸ್ಥಾನಿಕ ಜಾಗೃತ ದಳ ನೇಮಿಸಲಾಗಿದೆ. ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆಯದ ಹಾಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ.
ಶಿಕ್ಷಕರ ಕೊರತೆ: ಜಿಲ್ಲೆಯಲ್ಲಿ ಸುಮಾರು 1,100 ಶಿಕ್ಷಕರ ಕೊರತೆ ಇದ್ದು, ಇಂಗ್ಲಿಷ್ ಮತ್ತು ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಶಿಕ್ಷಕರ ಕೊರತೆ ಇದ್ದು, ಈ ವಿಷಯದಲ್ಲಿ ವಿದ್ಯಾರ್ಥಿಗಳ ಕೊರತೆಗಳನ್ನು ನೀಗಿಸಲು ಅತಿಥಿ ಶಿಕ್ಷಕರನ್ನು ತಾತ್ಕಲಿಕವಾಗಿ ನೇಮಿಸಿಕೊಂಡು ಬೋಧನೆ ಮಾಡಲಾಗಿದೆ.
ಫಲಿತಾಂಶ ಹೆಚ್ಚಳಕ್ಕೆ ಕ್ರಮ:ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಗೆ ಫಲಿತಾಂಶ ಹೆಚ್ಚಳಕ್ಕಾಗಿ ಈ ಬಾರಿ ಸಾರ್ವಜನಿಕ ಶಿಕ್ಷಣ ಇಲಾಖೆ 13 ಅಂಶಗಳ ಕಾರ್ಯಕ್ರಮದಡಿ ಶಿಕ್ಷಕರಿಗೆ ಮತ್ತು ವಿಧ್ಯಾರ್ಥಿಗಳಿಗೆ ಯಾವ ರೀತಿಯಲ್ಲಿ ತರಬೇತಿ ನೀಡಬೇಕು. ಹಾಜರಾತಿ ಹೆಚ್ಚಿಸುವಲ್ಲಿ ಕ್ರಮ, ವಿಧ್ಯಾರ್ಥಿಗಳಿಗಾಗಿ ಪ್ರತಿ ತಿಂಗಳು ಸರಣಿ ಪರೀಕ್ಷೆಗಳನ್ನು ನಡೆಸಿ ಕಡಿಮೆ ಅಂಕ ಪಡೆದ ವಿಧ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಸರಿಯಾದ ರೀತಿಯಲ್ಲಿ ಅಭ್ಯಾಸ ಮಾಡಿಸುವಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದರು.
ಜಿಲ್ಲೆಯಾದ್ಯಂತ ಹಲವು ಶಾಲೆಗಳಲ್ಲಿನ ಶಿಕ್ಷಕರ ಕೊರತೆ, ಸೌಲಭ್ಯಗಳ ಕೊರತೆಯ ಮಧ್ಯೆ ಶಿಕ್ಷಣ ಪಡೆಯಬೇಕಾದ ಅನಿವಾರ್ಯತೆಯಿಂದ ಕೆಲವು ಕಡೆ ವಿದ್ಯಾರ್ಥಿಗಳು ಅರ್ಧದಲ್ಲೇ ಶಾಲೆ ಬಿಡುತ್ತಿರುವುದರಿಂದ ಸಾಕ್ಷರತೆ ಪ್ರಮಾಣ ಶೇ. 44 ಆಸುಪಾಸಿನಲ್ಲಿದ್ದು, ತರಗತಿಯಿಂದ ತರಗತಿಗೆ ದಾಖಲಾತಿ ಪ್ರಮಾಣ ಕಡಿಮೆಯಾಗಿರುವುದು ಕಳವಳಕ್ಕೆ ಕಾರಣವಾಗಿದೆ. ಶಾಲೆ ಬಿಟ್ಟ ವಿದ್ಯಾರ್ಥಿಗಳು ಖಾಸಗಿ ವಿದ್ಯಾರ್ಥಿಗಳಾಗಿ ಪರೀಕ್ಷೆ ಬರೆಯಲು ನಿರ್ಧರಿಸುತ್ತಾರೆ. ಇಂಥವರಿಂದಾಗಿ ಜಿಲ್ಲೆಯ ಫಲಿತಾಂಶದಲ್ಲಿ ಏರುಪೇರಾಗುತ್ತಿರುವದು ಮೇಲ್ನೋಟಕ್ಕೆ ಕಂಡು ಬರುತ್ತದೆ.
ಒಟ್ಟಿನಲ್ಲಿ ಶಿಕ್ಷಣ ಇಲಾಖೆ ಫಲಿತಾಂಶ ಹೆಚ್ಚಳಕ್ಕೆ ಅವಿರತ ಶ್ರಮವಹಿಸಿ ತಯಾರಿ ನಡೆಸಿದೆ. ಈ ಬಾರಿಯಾದರೂ ಜಿಲ್ಲೆಯ ಫಲಿತಾಂಶದಲ್ಲಿ ಹೆಚ್ಚಳ ಕಾಣಲಿ ಎಂಬುವದು ಪ್ರಜ್ಞಾವಂತರ ಅನಿಸಿಕೆಯಾಗಿದೆ.
ಕಳೆದ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 50ಕ್ಕಿಂತಲೂ ಕಡಿಮೆ ಫಲಿತಾಂಶ ಪಡೆದ ಶಾಲೆಗಳನ್ನು ಗುರುತಿಸಲಾಗಿದೆ. ಅಲ್ಲಿನ ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಅವರಿಗೆ ವಿಷಯವಾರು ಪಠ್ಯಕ್ರಮಗಳ ಪುಸ್ತಕಗಳನ್ನು ಕೊಡುವ ಮೂಲಕ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಕ್ರಮಕೈಗೊಳ್ಳಲಾಗಿದೆ.
ಟಿ ಟಿ.ರಾಮಲಿಂಗಪ್ಪ, ವಿಷಯ ಪರಿವೀಕ್ಷಕರು, ಯಾದಗಿರಿ