ಮದ್ಯ ಮಾರಾಟ: ಬಂಧನ
ಆಳಂದ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಅಬಕಾರಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ ಘಟನೆ ತಾಲೂಕಿನ ಧಂಗಾಪೂರ್ ಗ್ರಾಮದಲ್ಲಿ ನಡೆದಿದೆ.ಬಂಧಿತನನ್ನು ಇಬ್ರಾಹಿಂ ತಂದೆ ಭಾಷಾಸಾಬ್ ಕಂಟೇಕೋರ್ ಎಂದು ಗುರುತಿಸಲಾಗಿದೆ. ಬಂಧಿತನಿಂದ 1300 ಮೌಲ್ಯದ ಮದ್ಯ ಮಾರಿದ ಹಣ ಜಪ್ತಿಮಾಡಿಕೊಳ್ಳಲಾಗಿದೆ. ಈ ಕುರಿತು ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಟಕಾ ಬುಕ್ಕಿ ಬಂಧನ: ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ಆರೋಪಿಯನ್ನು ತಾಲೂಕಿನ ಲಾಡ್ ಚಿಂಚೋಳಿ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಧುತ್ತರಗಾಂವ್ ಗ್ರಾಮದ ಚಿದಾನಂದ್ ತಂದೆ ಬಸಣ್ಣ ಜಮಾದಾರ್ ಎಂದು ಗುರುತಿಸಲಾಗಿದೆ. ಬಂಧಿತನಿಂದ ಮಟಕಾ ಚೀಟಿ ಬರೆದ ಒಂದು ಚೀಟಿ, ಒಂದು ಬಾಲ್ಪೆನ್ನು ಹಾಗೂ 1100 ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಈ ಕುರಿತು ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
3 ದಿನಗಳ ವಿಶೇಷ ಉಪನ್ಯಾಸ
ಗುಲ್ಬರ್ಗ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಬೆಂಗಳೂರು ಇವರ ಸಹಯೋಗಿತ್ವದಲ್ಲಿ ಮಾರ್ಚ್ 10.11,12 -2014ರವರೆಗೆ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದಲ್ಲಿ ಜೀವ ವಿಜ್ಞಾನದಲ್ಲಿ ಆಧುನಿಕತೆ ಕುರಿತು ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ತುಮಕೂರ ವಿವಿ ಕುಲಪತಿ ಪ್ರೊ. ಎ.ಹೆಚ್. ರಾಜಾಸಾಬ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಸದಸ್ಯರಾದ ಡಾ. ಪಿ.ಎಸ್. ಶಂಕರ, ಎತ್ನೆ ಬಾಟನಿ ಮುಖ್ಯ ಅತಿಥಿಯಾಗಿ ಆಗಮಿಸುವರು.ವಿಜ್ಞಾನ- ತಂತ್ರಜ್ಞಾನ ಅಕಾಡೆಮಿ ಸದಸ್ಯರಾದ ಡಾ. ಶಂಕರ್, ಎತ್ನೆ ಬಾಟನಿ, ಡಾ. ಗಣೇಶಯ್ಯ ಸಸ್ಯ ವೈವಿಧ್ಯತೆ ಕುರಿತು ಉಪನ್ಯಾಸ ನೀಡಲಿದ್ದಾರೆ. ಶಿವಮೂರ್ತಿ, ಸಿ.ಆರ್. ನಾಗೇಂದ್ರನ್, ಎಂ.ವಿ. ದೇಶಪಾಂಡೆ, ಡಾ. ಯೋಗೇಶ, ಡಾ. ಎಸ್ಕೆ ಸಿಂಗ್ ಸೇರಿದಂತೆ ಹಲವು ತಜ್ಞರು ಭಾಗವಹಿಸಿ ಉಪನ್ಯಾಸ ನೀಡಲಿದ್ದಾರೆಂದು ಸಸ್ಯಶಾಸ್ತ್ರ ವಿಭಾಗದ ಅಧ್ಯಕ್ಷ ಡಾ. ವಿದ್ಯಾಸಾಗರ ತಿಳಿಸಿದ್ದಾರೆ.
ಗಣನೀಯ ಸೇವೆಗೆ ಪ್ರಶಸ್ತಿ
ಚಿಂಚೋಳಿ: ಪಟ್ಟಣದ ಹಾರಕೂಡ ಚೆನ್ನಬಸವ ಶಿವಯೋಗಿಗಳ 63ನೇ ಜಾತ್ರಾ ಮಹೋತ್ಸದ ನಿಮಿತ್ತ ಪ್ರಥಮವಾಗಿ ಚೆನ್ನಶ್ರೀ ಪ್ರಶಸ್ತಿ ಸಂಗೀತ, ಸಾಹಿತ್ಯ ಮತ್ತು ಕಲೆ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ 3 ಜನರಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಹಾರಕೂಡ ಪೀಠಾಧಿಪತಿ ಚೆನ್ನವೀರ ಶ್ರೀ ತಿಳಿಸಿದರು.ಪಂಡಿತ ಪುಟ್ಟರಾಜ್ ಗವಾಯಿಗಳವರ ಶಿಷ್ಯರಾದ ವೇದಮೂರ್ತಿ ಪಂಡಿತ ಪ್ರಭಯ್ಯ ಶಾಸ್ತ್ರಿಗಳು ಹಿರೇಮಠ ಮಹಾರಾಜಪೇಠ ಹಾನಗಲ್, ಸಂಗೀತಗಾರ ವೀರುಪಾಕ್ಷಯ್ಯ ಗವಾಯಿಗಳು ವಂದಲಿ ಮತ್ತು ಆಕಾಶವಾಣಿ ತಬಲಾ ವಾದಕರಾದ ಸಿದ್ದಣ್ಣ ದೇಸಾಯಿ ಕಲ್ಲೂರ ಚೆನ್ನಶ್ರೀ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ. ಪ್ರಶಸ್ತಿ 5ಗ್ರಾಂ ಚಿನ್ನ ಮತ್ತು ನಗದು 5ಸಾವಿರ ರೂಪಾಯಿ ಒಳಗೊಂಡಿರುತ್ತದೆ.ಪ್ರಶಸ್ತಿಯನ್ನು ಮಾ.10 ರಂದು ಸೋಮವಾರ ದಿನದಂದು ಸಂಜೆ 7ಕ್ಕೆ ಜರಗುವ ಶಿವಾನುಭ ಚಿಂತನ ಗೋಷ್ಠಿ ಕಾರ್ಯಕ್ರಮದಲ್ಲಿ ನೀಡಲಾಗುವುದೆಂದು ಹಾರಕೂಡ ಪೀಠಾಧಿಪತಿ ಚೆನ್ನವೀರ ಶ್ರೀ ತಿಳಿಸಿದರು.
ನಿರ್ಗಮನ ಪಥಸಂಚಲನ ಇಂದು
ಗುಲ್ಬರ್ಗ: ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ ಗುಲ್ಬರ್ಗದ 14ನೇ ತಂಡದ ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ಗಳ ನಿರ್ಗಮನ ಪಥ ಸಂಚಲನವು ಮಾ.10ರಂದು ಬೆಳಗಿನ 9 ಗಂಟೆಗೆ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಜರುಗಲಿದೆ. ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ(ತರಬೇತಿ) ಸುಶಾಂತ್ ಮಹಾಪಾತ್ರ ಹಾಗೂ ಈಶಾನ್ಯ ವಲಯ ಪೊಲೀಸ್ ಮಹಾ ನಿರೀಕ್ಷಕ ಡಾ. ಸುರೇಶ ಕುನ್ಹಿ ಮೊಹಮದ್ ಮುಖ್ಯ ಅತಿಥಿಗಳಾಗಿರುವರು.
'ವಿದ್ಯಾಧರ ಗುರೂಜಿ ಕಡೆಗಣನೆ'
ಚಿಂಚೋಳಿ: ಗುಲ್ಬರ್ಗ ವಿವಿ ಇತ್ತೀಚೆಗೆ 12 ಜನ ಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಸತ್ಕರಿಸಿದೆ. ಆದರೆ ಹೈ-ಕ ಪ್ರದೇಶದ ಮಾಜಿ ವಿಧಾನಪರಿಷತ್ ಸದಸ್ಯ ವಿದ್ಯಾಧರ ಗುರೂಜಿ ಅವರನ್ನು ಕಡೆಗಣಿಸಿದ್ದು, ತುಂಬಾ ಖೇದದ ಸಂಗತಿ ಎಂದು ಸಮಾಜ ಕಾರ್ಯಕರ್ತ ರಮೇಶ ಯಾಕಾಪುರ ತಿಳಿಸಿದ್ದಾರೆ. ವಿದ್ಯಾಧರ ಗುರೂಜಿ ಶತಾಯುಷಿಯಾಗಿದ್ದು, ಹಿಂದುಳಿದವರ, ದೀನ ದಲಿತರ ಮತ್ತು ಅಲ್ಪಸಂಖ್ಯಾತರ ಏಳಿಗೆಗಾಗಿ ಶ್ರಮಿಸಿದ್ದಾರೆ. ಆದರೆ 2013-14ನೇ ಸಾಲಿನ ಗೌಡಾ ಪದವಿಯನ್ನು ವಿದ್ಯಾಧರ ಗುರೂಜಿ ಅವರಿಗೂ ನೀಡಬೇಕಾಗಿತ್ತು ಎಂದು ಗುಲ್ಬರ್ಗ ವಿವಿ ಕುಲಪತಿ ಈ.ಟಿ. ಪುಟ್ಟಯ್ಯಗೆ ಬರೆದ ಪತ್ರದಲ್ಲಿ ಸಮಾಜ ಸೇವಕ ರಮೇಶ ಯಾಕಾಪುರ ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.