ಮಹಿಳೆಯಿಲ್ಲದ ಸಮಾಜ ಊಹಿಸಲು ಅಸಾಧ್ಯ: ಡಾ. ರಾಣಿ
ಸುರಪುರ: ಮಹಿಳೆ ಇಲ್ಲದ ಸಮಾಜವನ್ನು ಊಹಿಸಲು ಸಾಧ್ಯವಿಲ್ಲ. ಪುರುಷನಿಗೆ ಸಮಾನಾಂತರವಾದ ಬಹುತೇಕ ಹಕ್ಕುಗಳನ್ನು ಮಹಿಳೆ ಪಡೆದಿದ್ದಾಳೆ. ಪ್ರಸ್ತುತ ದಿನಗಳಲ್ಲಿ ಸಮಾಜ ಪುರುಷ ಪ್ರಧಾನವಾಗಿ ಉಳಿಯದೆ, ಮಹಿಳೆ ಮತ್ತು ಪುರುಷ ಪ್ರಧಾನ ಸಮಾಜವಾಗಿ ಮಾರ್ಪಟ್ಟಿದೆ ಎಂದು ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಡಾ. ರಾಣಿ ಸುವರ್ಣಾದೇವಿ ನಾಯಕ ಹೇಳಿದರು. ಇಲ್ಲಿಯ ಜನನಿ ಮಹಿಳಾ ಪದವಿ ಕಾಲೇಜಿನಲ್ಲಿ ಶನಿವಾರ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಲಿಂಗ ಅಸಮಾನತೆಯಿಂದ ಉಂಟಾಗುತ್ತಿರುವ ಸ್ತ್ರೀಭ್ರೂಣ ಹತ್ಯೆಯಿಂದ ಲಿಂಗ ಸರಾಸರಿಯಲ್ಲಿ ವ್ಯತ್ಯಾಸವಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು. ಬಾಲಕರ ಕಾಲೇಜಿನ ಶಿಕ್ಷಕಿ ರಾಜೇಶ್ವರಿ ಪಾಣಿ ಮಾತನಾಡಿ, ದೇಶದಲ್ಲಿ ಸ್ತ್ರೀಯರ ಕುರಿತು ಎಷ್ಟೇ ಜಾಗೃತಿ ಮೂಡಿಸುವ ಕೆಲಸ ನಡೆದರೂ ಸ್ತ್ರೀಯರ ಅಪರಹರಣ, ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಪ್ರಾಚಾರ್ಯೆ ಗೀತಾ ಕಡೆಚೂರು ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಕಸ್ತೂರಿ ಕವಲಿ, ಜ್ಯೋತಿಬಾಯಿ ಮಾಮಡಿ ವೇದಿಕೆಯಲ್ಲಿದ್ದರು.