ಮಾ.31ರವರೆಗೆ ಕಾಲುವೆ ನೀರು ಹರಿಸಿ
ಹುಣಸಗಿ: ಕೃಷ್ಣಾ ಅಚ್ಚಕಟ್ಟು ಪ್ರದೇಶದಲ್ಲಿ ಸದ್ಯ ವ್ಯಾಪಕ ಮಳೆಯಾಗುತ್ತಿದ್ದು, ನೀರಿನ ಅವಶ್ಯಕತೆಯಿಲ್ಲ. ಕಾರಣ ಈಗ ನೀರು ಹರಿಸುವುದನ್ನು ನಿಲ್ಲಿಸಿ, ನಂತರ ಮಾ.31ರವರೆಗೆ ಕಾಲುವೆಗೆ ನೀರು ಹರಿಸಲು ರೈತರು ಹಾಗೂ ಶಾಸಕ ರಾಜಾ ವೆಂಕಟಪ್ಪ ನಾಯಕ ಆಗ್ರಹಿಸಿದ್ದಾರೆ.
ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಸತತವಾಗಿ ಅಲಿಕಲ್ಲು ಮಳೆಯಾಗುತ್ತಿದ್ದು, ಸದ್ಯ ಬೆಳೆಗೆ ನೀರಿನ ಅವಶ್ಯಕತೆಯಿಲ್ಲ. ಆದರೆ ಅಧಿಕಾರಿಗಳು ಇದನ್ನು ಗಮನಿಸದೆ ಕಾಲುವೆಗೆ ನೀರು ಹರಿಸುತ್ತಿದ್ದು ವ್ಯರ್ಥವಾಗುತ್ತಿದೆ. ತಕ್ಷಣದಿಂದ ನೀರು ಹರಿಸುವುದನ್ನು ನಿಲ್ಲಿಸಿ ಕಾಲುವೆಗೆ ನೀರು ಹರಿಸುವ ದಿನಾಂಕವನ್ನು ಮಾ.31ಕ್ಕೆ ವಿಸ್ತರಿಲು ಒತ್ತಾಯಿ
ಸಿದ್ದಾರೆ.
ಮಾ.10 ಕೊನೆಯ ದಿನವಾಗಿತ್ತು: ಆಲಮಟ್ಟಿಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ಜಲಾಶಯದಲ್ಲಿ ನೀರಿನ ಲಭ್ಯತೆ ಗಮನಿಸಿ ಫೆ.22ರ ವರೆಗೆ ನೀರು ಹರಿಸಲು ನಿಶ್ಚಯಿಸಲಾಯಿತು. ಆದರೆ ಇದಕ್ಕೆ ಶಾಸಕರು ವಿರೋಧ ವ್ಯಕ್ತಪಡಿಸಿದ್ದಕ್ಕೆ ಅಧಿಕಾರಿಗಳು ಮಾ.10ರ ವರೆಗೆ ಕಾಲುವೆಯಲ್ಲಿ ನೀರು ಹರಿಸಲು ನಿರ್ಣಯ ಕೈಗೊಂಡಿದ್ದರು.
ಆದರೀಗ ಸುರಿದ ಮಳೆಯಿಂದ ಬೆಳೆಗಳಿಗೆ ನೀರಿನ ಅವಶ್ಯಕತೆಯಿಲ್ಲದಿದ್ದರೂ ನೀರನ್ನು ವ್ಯರ್ಥ ಮಾಡುತ್ತಿರುವುದು ಸರಿಯಲ್ಲ. ಕೂಡಲೇ ನೀರು ಹರಿಸುವುದನ್ನು ನಿಲ್ಲಿಸಿ, ಅಗತ್ಯವಿದ್ದಾಗ ಮಾರ್ಚ್ ಕೊನೆಯವರೆಗೂ ನೀರು ಹರಿಸಿ ನಷ್ಟದಲ್ಲಿದ ರೈತರ ನೆರವಿಗೆ ಬರಲು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಶಾಸಕರ ಒತ್ತಾಯ: ನೀರಾವರಿ ಸಲಹಾ ಸಮಿತಿಯ ಸಭೆಯ ನಿರ್ಧಾರದಂತೆ ಮಾ.10 ನಂತರ ಕಾಲುವೆಯಲ್ಲಿ ನೀರು ಹರಿಸುವುದನ್ನು ನಿಲ್ಲಿಸಲು ಜಲಾಶಯದ ಅನುಷ್ಠಾನ ಅಧಿಕಾರಿಗಳು ನಿರ್ಧರಿಸಿದ ಬಗ್ಗೆ ತಿಳಿದ ಶಾಸಕರು, ಈ ಕುರಿತು ನೀರಾವರಿ ಸಲಹಾ ಸಮಿತಿಯ ಕಾರ್ಯದರ್ಶಿ, ನಿಗಮದ ಮುಖ್ಯ ವ್ಯವಸ್ಥಾಪಕರಿಗೆ, ಜಲಾಶಯಗಳ ಅನುಷ್ಠಾನ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಶಾಸಕರು ತಕ್ಷಣದಿಂದಲೇ ಕಾಲುವೆಗೆ ನೀರು ಹರಿಸುವುದನ್ನು ನಿಲ್ಲಿಸಿ ಅದನ್ನು ಮಾ.31ರವರೆಗೆ ಕಾಲುವೆಗೆ ನೀರು ಹರಿಸಬೇಕೆಂದು ತಿಳಿಸಿದ್ದಾರೆ.
ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ತಕ್ಷಣದಿಂದಲೇ ಕಾಲುವೆಗೆ ನೀರು ಹರಿಸುವುದನ್ನು ನಿಲ್ಲಿಸಿದ್ದಾರೆ. ಆದರೆ ಅದನ್ನು ಮಾರ್ಚ್ ಕೊನೆಯವರೆಗೆ ನೀರು ಹರಿಸುತ್ತಾರೋ, ಇಲ್ಲವೋ ಎನ್ನುವುದು ಮಾತ್ರ ರೈತರಲ್ಲಿ ಗೊಂದಲ ಮೂಡಿಸಿದೆ.
ರೈತರಿಗಾಗಿ ಉಪವಾಸ: ಕಳೆದೆರಡು ವರ್ಷಗಳ ಹಿಂದೆ ಸೇವೆ ಸಲ್ಲಿಸಿದ ನೀರಾವರಿ ಅಧಿಕಾರಿಗಳು ಅನುಭವದ ಕೊರತೆಯಿಂದ ರೈತರ ಹಿಂಗಾರಿ ಹಂಗಾಮಿನ ಬೆಳೆಗಾಗಿ 20ದಿನ ನೀರು ಹರಿಸಲು ಹೊಂದಾಣಿಕೆ ಮಾಡಲಾಗದೆ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಸಾವಿರಾರು ಕೋಟಿ ಮೌಲ್ಯದ ಬೆಳೆಹಾನಿ ಮಾಡಿದ್ದಾರೆ.
ಇದೀಗ ಮತ್ತೆ ಕಾಲುವೆ ನವೀಕರಣ ಕಾಮಗಾರಿಗೆ ಟೆಂಡರ್ ಅಂತಿಮಗೊಳಿಸಿ ಸದರಿ ಗುತ್ತಿಗೆದಾರರಿಗೆ ಕನಿಷ್ಠ ಮೂರು ತಿಂಗಳ ಸಮಯ ನಿಗದಿಗೊಳಿಸಲಾಗಿದೆ. ಮಾ.10ರಿಂದ ನೀರು ಹರಿಸುವುದನ್ನು ನಿಲ್ಲಿಸಿ ಗುತ್ತಿಗೆದಾರರಿಗೆ ಕಾಮಗಾರಿ ನಡೆಸಲು ಅನುವು ಮಾಡಿಕೊಡಲು ರೈತರಿಗೆ ಬರೆ ಎಳೆಯಲು ಮುಂದಾಗಿದ್ದಾರೆ. ಇದನ್ನು ನಾನು ಸಹಿಸೆನು. ನಮ್ಮದೇ ಸರ್ಕಾರವಿದ್ದರೂ ಲೆಕ್ಕಿಸದೆ ರೈತರಿಗಾಗಿ ಕಚೇರಿಯ ಮುಂದೆ ಉಪವಾಸ ಸತ್ಯಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.