ಸಂಚಾರಿ ನಿಯಮ ಪಾಲಿಸಿ, ಅಪಘಾತ ತಡೆಗಟ್ಟಿ
ಯಾದಗಿರಿ: ವಾಹನ ಸಂಚಾರ ಮಾಡುವಾಗ ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ಗೌರವಿಸಿ ಕಟ್ಟುನಿಟ್ಟಾಗಿ ಪಾಲಿಸುವುದು ಅವಶ್ಯವಾಗಿದೆ. ಇದರಿಂದ ಅಪಘಾತಗಳನ್ನು ತಡೆಯಬಹುದು ಎಂದು ಜಿಲ್ಲಾ ಪೊಲೀಸ್ ಅಪರಾಧ ವಿಭಾಗದ ಸಿಪಿಐ ವೈ.ಎಸ್. ಏಗನಗೌಡರ ಹೇಳಿದರು.
ಶುಕ್ರವಾರ ನಗರದ ಹೊಸಳ್ಳಿ ಕ್ರಾಸ್ ಹತ್ತಿರ ಇಂಡಸ್ ಟವರ್ ಕಂಪನಿಯು ತನ್ನ ಸಿಬ್ಬಂದಿಗಾಗಿ ಹಮ್ಮಿಕೊಂಡಿದ್ದ ಸುರಕ್ಷಿತ ವಾಹನ ಸಂಚಾರ ಹಾಗೂ ಪರಿಸರ ಮಾಲಿನ್ಯ ತಡೆಗಟ್ಟುವ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿಬ್ಬಂದಿ ಹಾಗೂ ಸಾರ್ವಜನಿಕರು ವಾಹನ ಸಂಚಾರ ಮಾಡುವಾಗ ಮೊದಲು ಮೊಬೈಲ್ ಬಳಕೆ ಮಾಡುವುದನ್ನು ಬಿಡಬೇಕು. ಜತೆಗೆ ಹೆಲ್ಮೆಟ್ ಧರಿಸಿ, ನಿಯಂತ್ರಣ ವೇಗದಲ್ಲಿ ವಾಹನ ಚಲಾಯಿಸಬೇಕು ಎಂದು ಸಲಹೆ ನೀಡಿದರು.
ಪ್ರಸಕ್ತ ದಿನಗಳಲ್ಲಿ ಯುವಕರು ಮಧ್ಯಪಾನ ಮಾಡಿ ಬೈಕ್ಗಳಲ್ಲಿ 3-4 ಜನರು ಕುಳಿತು ವಾಹನ ಚಲಾಯಿಸುತ್ತಾರೆ. ನಿಯಮ ಉಲ್ಲಂಘಿಸುತ್ತಾರೆ. ಇದು ಸರಿಯಲ್ಲ. ಇದರಿಂದ ಬೈಕ್ ನಿಯಂತ್ರಣ ಕಳೆದುಕೊಂಡು ಅಫಘಾತಗಳು ಸಂಭವಿಸಿ ಪ್ರಾಣಹಾನಿ ಘಟನೆಗಳು ಹೆಚ್ಚಾಗಿ ಸಂಭವಿಸುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು. ಕಂಪನಿಯ ವಲಯ ವ್ಯವಸ್ಥಾಪಕ ಸಿದ್ದಲಿಂಗ ಬುಳ್ಳಾ ಮಾತನಾಡಿ, ಸಿಬ್ಬಂದಿ, ಟವರ್ ದುರಸ್ತಿ ಕೆಲಸ ಮಾಡುತ್ತಿರುವಾಗ ತಪ್ಪದೆ ಸೂಕ್ತ ಉಪಕರಣಗಳನ್ನು ಬಳಕೆ ಮಾಡಬೇಕು. ಇದರಿಂದ ಜೀವಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಕಿವಿ ಮಾತು ಹೇಳಿದರು. ಇದೆ ಸಂದರ್ಭದಲ್ಲಿ ಸಿಬ್ಬಂದಿಗಳಿಗೆ ಜಾಕೆಟ್ ಹಾಗೂ ಇನ್ನಿತರ ವಸ್ತುಗಳನ್ನು ವಿತರಿಸಲಾಯಿತು.