ಜಾಹೀರಾತು, ಬಂಟಿಂಗ್ಸ್ ತೆರವು; ಚುನಾವಣಾ ಆಯೋಗದ ತಾರತಮ್ಯ
ಶಹಾಬಾದ್: ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದಾಗ ಚುನಾವಣಾಧಿಕಾರಿಗಳು ಸ್ಥಳೀಯ ಮುಖಂಡರ ಭಾವಚಿತ್ರ, ಬಂಟಿಂಗ್ಸ್ ತೆಗೆದಿದ್ದರು. ಸಿದ್ದರಾಮಯ್ಯನವರ ಸರ್ಕಾರಿ ಜಾಹೀರಾತು ಮಾತ್ರ ರಾರಾಜಿಸುತ್ತಿದ್ದು, ಚುನಾವಣಾಧಿಕಾರಿಗಳ ಈ ತಾರತಮ್ಯ ನೀತಿ ಸಾರ್ವಜನಿಕರ ಹುಬ್ಬೇರಿಸುವಂತೆ ಮಾಡಿದೆ.
ಇತ್ತೀಚೆಗೆ ನಗರಕ್ಕೆ ಆಗಮಿಸಿದ್ದ ಕೇಂದ್ರ ರೇಲ್ವೆ ಸಚಿವ ಡಾ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸ್ವಾಗತ ಕೋರಲು, ಗುಲ್ಬರ್ಗ ಆಗಮಿಸಿದ ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಕಾರ್ಯಕ್ರಮಕ್ಕಾಗಿ ಎರಡು ಪಕ್ಷ ಕಾರ್ಯಕರ್ತರು ಬ್ಯಾನರ್, ಬಂಟಿಂಗ್ಸ್ ಕಟ್ಟಿದ್ದರು. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಚುನಾವಣಾ ಆಯೋಗದ ಆದೇಶದಂತೆ ನಗರಸಭೆ ಬ್ಯಾನರ್, ಬಂಟಿಂಗ್ಸ್ ಕಿತ್ತು ಹಾಕಿತ್ತು.
ಅಲ್ಲದೆ, ನಗರದಲ್ಲಿ ಒಂದು ತಿಂಗಳು ಕಾಲ ನಡೆಯುತ್ತಿರುವ ಸಿದ್ದೇಶ್ವರ ಸ್ವಾಮಿಗಳ ಪ್ರವಚನ ಕಾರ್ಯಕ್ರಮಕ್ಕೆ ಸ್ವಾಗತ ಕೋರುವ ಬ್ಯಾನರ್‌ಗಳಲ್ಲಿ ಸ್ಥಳೀಯ ಪ್ರಮುಖ ಪಕ್ಷಗಳ ಮುಖಂಡರ ಭಾವಚಿತ್ರಗಳನ್ನು ಸಹ ತೆಗೆಸಿ ಹಾಕಿ ಚುನಾವಣಾ ಆಯೋಗ ತನ್ನ ಕರ್ತವ್ಯ ನಿರ್ವಹಿಸಿತ್ತು.
ಆದರೆ, ನಗರಸಭೆ ಎದುರಗಡೆ, ಉಪ ತಹಸೀಲ್ದಾರ್ ಕಚೇರಿಯ ಎದುರು ಮುಖ್ಯಮಂತ್ರಿ ಸಿದ್ದರಾಮಯ್ಯನರ ಭಾವಚಿತ್ರ ಇರುವ ಸರ್ಕಾರದ ಯೋಜನೆಗಳನ್ನು ಜಾಹೀರುಗೊಳಿಸುವ, ದೊಡ್ಡ ಜಾಹೀರಾತನ್ನು ತೆಗೆಸದೆ ಚುನಾವಣೆ ಆಯೋಗದ ಅಧಿಕಾರಿಗಳು ಆಡಳಿತ ಯಂತ್ರದ ಪರ ಮೃದು ಧೋರಣೆ ತಳೆದಿರುವುದು, ಸಾರ್ವಜನಿಕರ ಕೆಂಗಣ್ಣಿಗೆ ಕಾರಣವಾಗಿದೆ.