ಫ್ಲೈಯಿಂಗ್ ಸ್ಕ್ವಾಡ್ 24 ಗಂಟೆ ಕರ್ತವ್ಯ ನಿರ್ವಹಿಸಲು ಸೂಚನೆ
ಕ.ಪ್ರ. ವಾರ್ತೆ ಗುಲ್ಬರ್ಗ ಮಾ.11
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 2ರಂತೆ ಫ್ಲೈಯಿಂಗ್ ಸ್ಕ್ವಾಡ್ಗಳನ್ನು ರಚಿಸಲಾಗಿದ್ದು, ಈ ತಂಡಗಳು ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಲ್ಲಿ ದಿನದ 24 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎನ್.ವಿ. ಪ್ರಸಾದ ತಿಳಿಸಿದರು.
ಸೋಮವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಚುನಾವಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಫ್ಲೈಯಿಂಗ್ ಸ್ಕ್ವಾಡ್ ತಂಡದ ಮುಖ್ಯಸ್ಥರು ಚುನಾವಣಾ ನೀತಿ ಸಂಹಿತೆಯಲ್ಲಿ ಪಾಲಿಸಬೇಕಾದ ನಿಯಮಗಳನ್ನು ತಿಳಿದುಕೊಂಡು ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣ ಪ್ರಕರಣ ದಾಖಲಿಸುಂತೆ ತಿಳಿಸಿದರು.
ಫ್ಲೈಯಿಂಗ್ ಸ್ಕ್ವಾಡ್ ತಂಡವು ಕರ್ತವ್ಯ ನಿರ್ವಹಿಸುವ ವರದಿಯನ್ನು ಮರುದಿನ ಬೆಳಗ್ಗೆ 10 ಗಂಟೆಯೊಳಗಾಗಿ ಆಯಾ ತಾಲೂಕಿನ ತಹಸೀಲ್ದಾರ್ ಕಚೇರಿಯಲ್ಲಿ ನಿಗದಿತ ನಮೂನೆಯಲ್ಲಿ ಸಲ್ಲಿಸಬೇಕು. ತಹಸೀಲ್ದಾರ್ ಕಚೇರಿಯಿಂದ ಜಿಲ್ಲಾ ಚುನಾವಣಾಧಿಕಾರಿಗೆ 10.30 ರೊಳಗಾಗಿ ವರದಿ ತಲುಪುವಂತೆ ಎಚ್ಚರಿಕೆ ವಹಿಸಬೇಕು ಎಂದರು.
ಸ್ಟ್ಯಾಟಿಕ್ ಸರ್ವೆಲೆನ್ಸ್ ತಂಡಗಳು ನೀತಿಸಂಹಿತೆ ಜಾರಿಯಾದಾಗಿನಿಂದ ಕರ್ತವ್ಯದಲ್ಲಿದ್ದು, ಚೆಕ್ ಪೋಸ್ಟ್ಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಚುನಾವಣಾ ನೀತಿಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಯಾವುದಾದರೂ ಸಂಶಯ ಬಂದಲ್ಲಿ ಈ ತಂಡಗಳು ತಕ್ಷಣ ಕಾರ್ಯೋನ್ಮುಖರಾಗಬೇಕು. ಯಾವುದೇ ದಾಖಲೆಗಳಿಲ್ಲದೆ 50 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ಸಾಗಿಸುತ್ತಿದ್ದರೆ ಅಂತಹವರನ್ನು ಕಂಡುಹಿಡಿದು ಕ್ರಮ ಜರುಗಿಸಬೇಕು. ಸಂಶಯಾಸ್ಪದವಾಗಿ ಹಣ ಇಟ್ಟುಕೊಂಡಿರುವುದು ಕಂಡುಬಂದಲ್ಲಿ ಸೂಕ್ತ ಕ್ರಮ ಜರುಗಿಸಬೇಕು. ಸ್ಟಾರ್ ಕ್ಯಾಂಪೇನರ್ ಆಗಮಿಸಿದಾಗ ಅವರ ಹತ್ತಿರ ಒಂದು ಲಕ್ಷದವರೆಗೆ ಹಣವಿದ್ದಲ್ಲಿ ತೊಂದರೆಯಿಲ್ಲ. ಇದಕ್ಕಿಂತಲೂ ಹೆಚ್ಚಿಗೆ ಹಣವಿದ್ದರೆ ಆದಾಯ ತೆರಿಗೆ ಅಧಿಕಾರಿಗಳಿಗೆ ದೂರು ಸಲ್ಲಿಸಬೇಕು ಎಂದರು.
ಅಬಕಾರಿ ಇಲಾಖೆಯ ಜಿಲ್ಲಾ ಅಧಿಕಾರಿಗಳು ಚಿಲ್ಲರೆ ಮದ್ಯ ಮಾರಾಟ ಮಾಡುವವರ ಮಳಿಗೆಗಳನ್ನು ತಪಾಸಣೆ ಮಾಡಬೇಕು. ಪ್ರತಿದಿನ ಮದ್ಯ ಮಾರಾಟದ ಮೇಲೆ ನಿಗಾ ವಹಿಸಬೇಕು. ಮದ್ಯ ತಯಾರಿಸುವ ಕಂಪನಿಗಳಿಂದ ಪ್ರತಿದಿನ ವರದಿ ಪಡೆಯಬೇಕು ಹಾಗೂ ತಾಲೂಕಿಗೊಂದು ತಂಡಗಳನ್ನು ರಚಿಸಿ ತಪಾಸಣೆ ಕೈಗೊಂಡು ಪ್ರತಿದಿನ ವರದಿ ನೀಡುವಂತೆ ತಿಳಿಸಿದರು. ಆಯುಧ ಲೈಸನ್ಸ್ ಹೊಂದಿದವರು 203 ದಿನಗಳಲ್ಲಿ ತಮ್ಮ ಆಯುಧಗಳನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಆಯುಧವನ್ನು ಸಲ್ಲಿಸಿ ಸ್ವೀಕೃತಿ ಪಡೆದುಕೊಳ್ಳಬೇಕು. ಆಯುಧಗಳ ಅವಶ್ಯಕತೆಯಿದ್ದವರು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿರುವ ಸಮಿತಿಗೆ ಕಾರಣದೊಂದಿಗೆ ಮನವಿ ಸಲ್ಲಿಸಬೇಕು ಎಂದರು.
ಚುನಾವಣಾ ನೀತಿ ಸಂಹಿತೆ ಜಾರಿಯಾಗುವುದಕ್ಕಿಂತ ಮುಂಚೆ ಹಮ್ಮಿಕೊಂಡಿರುವ ಕಾಮಗಾರಿಗಳನ್ನು ಮುಂದು ವರೆಸಬಹುದಾಗಿದೆ. ಬರಗಾಲ, ನೆರೆ, ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಪರಿಹಾರ ಕಾಮಗಾರಿಗಳನ್ನು ನೀತಿ ಸಂಹಿತೆ ಜಾರಿಯಿದ್ದಾಗಲು ಕೈಗೊಳ್ಳಲು ಅವಕಾಶಗಳಿವೆ. ಅತಿ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯ ವೈದ್ಯಕೀಯ ವೆಚ್ಚವನ್ನು ಭರಿಸಬಹುದಾಗಿದೆ ಎಂದರು.