ಅಕ್ಷರ ದಾಸೋಹಕ್ಕೆ ಅಡುಗೆ ಅನಿಲ ಸಮಸ್ಯೆ
ಮಂಜುನಾಥ ಸ್ವಾಮಿ
ಕ.ಪ್ರ. ವಾರ್ತೆ ಯಾದಗಿರಿ ಮಾ.12
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹಾಗೂ ಮಕ್ಕಳ ಆರೋಗ್ಯ ವೃದ್ಧಿಗಾಗಿ ಆರಂಭಿಸಿದ ಅಕ್ಷರ ದಾಸೋಹಕ್ಕೆ ಜಿಲ್ಲೆಯಲ್ಲಿ ಮೂಲ ಸೌಕರ್ಯಗಳ ಕೊರತೆ ಹೆಚ್ಚಾಗಿದೆ.
ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಅಡುಗೆ ಅನಿಲ ಸಿಲಿಂಡರ್ ಕೊರತೆ ಹೆಚ್ಚಾಗಿದ್ದು, ಕೆಲವು ಶಾಲೆಗಳಲ್ಲಿ ಕಟ್ಟಿಗೆ, ಸೀಮೆಎಣ್ಣೆ ಬಳಸಿ ಅಡುಗೆ ಮಾಡಲು ಸೂಚಿಸಲಾಗಿದೆ
ಜಿಲ್ಲೆಯಲ್ಲಿ ಒಟ್ಟು 1094 ಸರ್ಕಾರಿ ಹಾಗೂ ಅನುದಾನಿತ ಹಾಗೂ ಮದರಸಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿದ್ದು, ಸುಮಾರು 1,82,717, ವಿದ್ಯಾರ್ಥಿಗಳು ಅಕ್ಷರ ದಾಸೋಹ ಯೋಜನೆಯಡಿ ಬಿಸಿಯೂಟ ಸೇವಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಬಿಸಿಯೂಟ ತಯಾರಿಕೆಗೆ ಒಟ್ಟು 2478 ಅಡುಗೆ ಅನಿಲ ಸಿಲಿಂಡರ್ಗಳ ಅವಶ್ಯಕತೆ ಇದೆ. ಆದರೆ ಮಂಜೂರಾಗಿದ್ದು ಮಾತ್ರ 1771 ಗ್ಯಾಸ್ ಸಿಲಿಂಡರ್ಗಳು. ಇನ್ನುಳಿದ ಶಾಲೆಗಳಲ್ಲಿ ಅಡುಗೆ ಮಾಡಲು ಕಟ್ಟಿಗೆ, ಸೀಮೆಎಣ್ಣೆಯ ಮೊರೆ ಹೋಗುವುದು ಅನಿವಾರ್ಯವಾಗಿದೆ.
ಬಿಡುಗಡೆಯಾದ ಅನುದಾನ: ಅಕ್ಷರ ದಾಸೋಹ ಯೋಜನೆಯ 2013-14 ನೇ ಸಾಲಿಗೆ 19.91ಕೋಟಿ ಅನುದಾನ ಮಂಜೂರಾಗಿದ್ದು, ರು. 14.93 ಕೋಟಿ ಬಿಡುಗಡೆಯಾಗಿದೆ. ಅದರಲ್ಲಿ ರು. 14.73 ಕೋಟಿ ಖರ್ಚು ಮಾಡಿದ್ದು, 20 ಲಕ್ಷದಷ್ಟು ಅನುದಾನ ಬಾಕಿ ಉಳಿದಿದ್ದರೂ, ಸಮಸ್ಯೆ ಉಲ್ಬಣಗೊಂಡಿದೆ.
ಅಡುಗೆ ಕೋಣೆಗಳ ಕೊರತೆ: ಸರ್ಕಾರ ಪತ್ರಿಯೊಂದು ಶಾಲೆಗೆ ಅಡುಗೆ ಕೋಣೆ ನಿರ್ಮಿಸಲು ಮೂರರಿಂದ ನಾಲ್ಕು ಲಕ್ಷ ರುಪಾಯಿಗಳನ್ನು ನೀಡುತ್ತಿದೆ. ಆದರೆ ಈವರೆಗೆ ಜಿಲ್ಲೆಯ ಬಹುತೇಕ ಕಡೆ ಅಡುಗೆ ಕೋಣೆಗಳು ನಿರ್ಮಾಣ ಕಾರ್ಯಗಳು ಕುಂಟುತ್ತಾ ಸಾಗಿವೆ. ಇನ್ನು ಕೆಲವು ಕಡೆ ಕಟ್ಟಡ ಕಾಮಗಾರಿಯೇ ಪ್ರಾರಂಭವಾಗಿಲ್ಲ. ಅಡುಗೆ ಕೋಣೆಗಳ ಕೊರತೆ ಇದ್ದಲ್ಲಿ ಶಾಲೆಯ ತರಗತಿಯ ಕೊಠಡಿಗಳಲ್ಲೇ ಅಡುಗೆ ಮಾಡಲು ಸೂಚಿಸಲಾಗಿದೆ. ಸದ್ಯ 307 ಅಡುಗೆ ಕೋಣೆಗಳಿದ್ದು, 435 ಕೋಣೆಗಳಿಗೆ ಮಂಜೂರಾತಿ ದೊರಕಿದೆ. ಆದರೂ 249 ಕೋಣೆಗಳು ಅವಶ್ಯವಾಗಿವೆ.
ಕೊಠಡಿ ಕೊರತೆ: ಜಿಲ್ಲೆಯಾದ್ಯಂತ ಸುಮಾರು 435ಕ್ಕೂ ಹೆಚ್ಚು ಅಡುಗೆ ಕೋಣೆಗಳು ನಿರ್ಮಾಣ ಮಾಡಬೇಕಾಗಿದೆ. ಈ ಭಾರಿ ಬಜೆಟ್ನಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು. ಇನ್ನೂ ಕೆಲವೆಡೆ ಜಾಗದ ಕೊರತೆ ಇರುವುದರಿಂದ ಕಾಮಗರಿಗಳು ಪ್ರಾರಂಭವಾಗಿಲ್ಲ. ಇದನ್ನು ಎಸ್ಡಿಎಂಸಿ ಜೊತೆ ಮಾತನಾಡಿ, ಅಡುಗೆ ಕೋಣೆ ಸ್ಥಳಕ್ಕೆ ಅವಕಾಶ ಮಾಡಿಕೊಡಲು ಸೂಚಿಸಿಲಾಗಿದೆ ಎಂದು ಅಕ್ಷರ ದಾಸೋಹದ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಕೆಲವು ಭಾಗದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಬಿಸಿಯೂಟದ ಜವಾಬ್ದಾರಿಯನ್ನು ವಹಿಸಲಾಗಿದೆ. ಬಹುತೇಕ ಕಡೆದ ಬಿಸಿಯೂಟದ ಅಡುಗೆ ಕೋಣೆಗಳು ಇನ್ನೂ ಸಹ ನಿರ್ಮಾಣವಾಗಿಲ್ಲ.
ಅಡುಗೆ ಸಹಾಯಕರ, ನೀರಿನ ಕೊರತೆ ಹೀಗೆ ಇನ್ನಿತರ ಸೌಲಭ್ಯಗಳು ಇಲ್ಲದೇ, ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಬಿಸಿಯೂಟ ಸರಿಯಾಗಿ ನೀಡಲಾಗುತ್ತಿಲ್ಲವೆಂಬ ಆರೋಪಗಳು ಕೇಳಿಬರುತ್ತಿವೆ.
ಜಿಲ್ಲೆಯಲ್ಲಿ ಅಕ್ಷರ ದಾಸೋಹ ಯೋಜನೆಯಡಿ ಅಡುಗೆ ತಯಾರಿಸಲು ಅವಶ್ಯಕ ಇರುವ ಅಡುಗೆ ಅನಿಲ ಸಿಲಿಂಡರ್ ಪೂರೈಕೆ ಆಗಿಲ್ಲ. ಈ ಹಿನ್ನೆಲೆಯಲ್ಲಿ ಕೆಲವು ಶಾಲೆಗಳಲ್ಲಿ ಕಟ್ಟಿಗೆ, ಸೀಮೆಎಣ್ಣೆ ಬಳಸಿ ಅಡುಗೆ ತಯಾರಿಸಲು ಸೂಚಿಸಲಾಗಿದೆ.
ಟಿ ಡಿ.ಎಂ. ಹೊಸಮನಿ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ