'ನವೋದಯ ಶಾಲೆ ಮೀಸಲು ಜಾಗ ಬಿಟ್ಟುಕೊಡಲ್ಲ'
ಗುಲ್ಬರ್ಗ: ತಾಲೂಕಿನ ಹಾಗರಗಾ ಗ್ರಾಮದ ಜವಾಹರ ನವೋದಯ ಶಾಲೆ ಕಟ್ಟಡಕ್ಕೆಂದು ಮೀಸಲಿರುವ ಜಮೀನಿನಲ್ಲಿ ವಕ್ಫ್ ಕಮಿಟಿ, ಹಜ್ ಕಮಿಟಿ ಭವನಗಳ ನಿರ್ಮಾಣಕ್ಕೆ ಕಸರತ್ತು ಸಾಗಿರುವುದನ್ನು ಉಗ್ರವಾಗಿ ಖಂಡಿಸಿರುವ ಬಹುಜನ ಜಾಗೃತಿ ವೇದಿಕೆ ಸದಸ್ಯರು, ಹಾಗರಗಾ ಗ್ರಾಮದವರು ನವೋದಯ ಶಾಲೆಗೆ ಮೀಸಲಾಗಿರುವ ಜಮೀನು ಯಾವ ಕಾರಣಕ್ಕೂ ಅನ್ಯ ಉದ್ದೇಶ ಬಳಕೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಸರ್ಕಾರ ನವೋದಯ ಶಾಲೆಯ ಸ್ಥಳವನ್ನು ಹಜ್ ಭವನಕ್ಕೆಂದು ಬಳಸಲು ಮುಂದಾಗಿರುವುದು ಮೋಸ. ಶಾಲೆಗೆ ಹಳ್ಳಿಯ ಜಮೀನು ಬಿಟ್ಟು ಕೊಡುವಂತೆ ಸರ್ಕಾರವನ್ನು ಆಗ್ರಹಿಸಿ ಬಹುಜನ ಜಾಗೃತಿ ವೇದಿಕೆ ಜಿಲ್ಲಾಧಿಕಾರಿ, ತಹಸಿಲ್ದಾರ್, ಜಿಲ್ಲಾ ಉಸ್ತುವಾರಿ ಸಚಿವ ಖಮರಲ್ ಇಸ್ಲಾಂ ಅವರ ಮನೆ ಹಾಗೂ ಕಚೇರಿ ಮುಂದೆ ಹೋರಾಟ ಮಾಡಲು ಮುಂದಾಗಿದೆ.
ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಪ್ರಕಾಶ ಎಸ್. ಹಾಗರಗಿ, ಹಾಗರಗಾ ಗ್ರಾಮದ ಸರ್ವೆ ನಂ. 315ರಲ್ಲಿರುವ ಒಟ್ಟು 50 ಎಕರೆ 37 ಗುಂಟೆಗಳಲ್ಲಿ 25 ಎಕರೆ ಜಮೀನು ನವೋದಯ ಶಾಲೆ ಕಟ್ಟಡ ನಿರ್ಮಾಣಕ್ಕಾಗಿ 25 ಎಕರೆ ಜಮೀನು ಮಂಜೂರು ಮಾಡಲಾಗಿದ್ದು ಕೆಲಸವೂ ಆರಂಭವಾಗಿದೆ ಎಂದರು.
ಕಂದಾಯ ಇಲಾಖೆಯವರು ನವೋದಯ ಶಾಲೆ ಸ್ಥಳವೂ ಖಾಲಿಯಿರುವಂತೆ ವರದಿ ನೀಡಿ ಅಲ್ಲಿ ವಕ್ಫ್ ಕಮಿಟಿ, ಹಜ್ ಕಮಿಟಿ ನಿರ್ಮಾಣ ಮಾಡಲು ಆದೇಶ ನೀಡಿದ್ದಕ್ಕೆ ಜಿಲ್ಲಾಧಿಕಾರಿ ನಿರ್ಲಕ್ಷ್ಯವೇ ಕಾರಣ ಎಂದು ದೂರಿದ್ದಾರೆ.
ಲಕ್ಷ್ಮಣ ಎಸ್. ಕೋರಿ, ಸಮಾಜ ಸೇವಕ ಚಿತ್ರಶೇಖರ ಬಿ. ಕೇಸುರ, ಗ್ರಾಪಂ ಸದಸ್ಯ ಕುಮಾರ ಮಠಪತಿ, ಹಿರಿಯ ಮುಖಂಡ ಬಸವರಾಜ ಎಸ್. ಬಿರಾದಾರ, ಜಿಲ್ಲಾಧ್ಯಕ್ಷ ಧರಂಸಿಂಗ್ ತಿವಾರಿ, ರವಿ ಆರ್. ಕೋರಿ ಇತರರಿದ್ದರು.