ನೀರಿಗಾಗಿ ಡಿಸಿ ಕಚೇರಿ ಮುತ್ತಿಗೆ
ಗುಲ್ಬರ್ಗ: ಜಿಲ್ಲೆಯ ಆಳಂದ ತಾಲೂಕಿನಲ್ಲಿ ಕುದುಮುಡು ತಾಂಡಾದ ಗ್ರಾಮಸ್ಥರ ಕುಡಿವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಅದನ್ನು ಬಗೆಹರಿಸುವಂತೆ ಕುದಮೂಡ ತಾಂಡಾದ ನೂರಾರು ಗ್ರಾಮಸ್ಥರು ಹಾಗೂ ಮಹಿಳೆಯರು ಖಾಲಿ ಕೊಡಗಳೊಂದಿಗೆ ಧರಣಿ ನಡೆಸಿ, ಜಿಲ್ಲಾಧಿಕಾರಿಗೆ ಬಿಎಸ್‌ಆರ್ ಕಾಂಗ್ರೆಸ್ ಮನವಿ ಮಾಡಿತು.
ಜಿಲ್ಲೆಯಲ್ಲಿ 6 ತಿಂಗಳಿಂದ ನೀರಿನ ಸಮಸ್ಯೆಯಿದ್ದು, 2 ಕೊಳವೆ ಬಾವಿಗಳಿದ್ದು ಅವುಗಳಿಗೆ ಮೊಟಾರಗಳಿರುವುದಿಲ್ಲ, 2 ಬಾವಿಗಳಿದ್ದು ಒಂದು ಬಾವಿ ಹೂಳು ಬಿದ್ದಿದ್ದು, ಇನ್ನೊಂದು ಬಾವಿಯಲ್ಲಿ ಸ್ವಲ್ಪ ಪ್ರಮಾಣದ ನೀರಿದ್ದು ಕೊಳವೆ ವ್ಯವಸ್ಥೆ ಇಲ್ಲ.
ಬೇಸಿಗೆ ಇರುವುದರಿಂದ 3 ಕಿ.ಮೀ ದೂರದಿಂದ ತಲೆಯ ಮೇಲೆ ನೀರು ಹೊತ್ತುಕೊಂಡು ಬರುವುದು ಕಷ್ಟವಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿ 3 ದಿನದಲ್ಲಿ ನೀರಿನ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ಧರಣಿ ಸತ್ಯಾಗ್ರಹ ಮಾಡುವುದು ಅನಿವಾರ್ಯ ಎಂದು ಜಿಲ್ಲಾಧ್ಯಕ್ಷ ಕಲ್ಯಾಣರಾವ ಅಂಬಲಗಿ ಎಚ್ಚರಿಕೆ ನೀಡಿದರು.