ಮುದ್ರಕರ ವಿವರ ಕಡ್ಡಾಯ; ಡಿಸಿ ಅದೇಶ
ಗುರುಮಠಕಲ್: ಲೋಕಸಭಾ ಚುನಾವಣೆ ಘೋಷಣೆಯಾಗಿರುವುದರಿಂದ ಚುನಾವಣೆಗೆ ಸಂಬಂಧಿಸಿದ ಯಾವುದೇ ಪೋಸ್ಟರ್, ಬ್ಯಾನರ್, ಕರಪತ್ರ ಇತ್ಯಾದಿಯನ್ನು ಮುದ್ರಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ಯಾದಗಿರಿಯ ತಹಸೀಲ್ದಾರ್ ಗುರುಪಾಟೀಲ್ ತಿಳಿಸಿದರು.
ಅವರು ಪಟ್ಟಣದಲ್ಲಿ ಇಂದು ಸ್ಥಳಿಯ ಮುದ್ರಣಾಲಯ ಸ್ಥಳಿಯ ಕೇಬಲ್ ಟಿವಿ ಹಾಗೂ ವಸತಿ ಗೃಹಗಳ ಮಾಲೀಕರ ಸಭೆ ಕರೆದು ಸಭೆಯಲ್ಲಿ ಈ ವಿಯಷ ತಿಳಿಸಿದರು.
ಈ ಕುರಿತು ಜಿಲ್ಲಾಧಿಕಾರಿಗಳು ಅದೇಶವನ್ನು ಹೊರಡಿಸಿದ್ದು, ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಕಲಂ 77 ಮತ್ತು 127(ಎ)ಮೇರೆಗೆ ಚುನಾವಣೆಗೆ ಸಂಬಂಧಿಸಿದ ಯಾವುದೇ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ಮುದ್ರಿಸಿದಲ್ಲಿ ಅಂಥ ಪ್ರಚಾರ ಸಾಮಗ್ರಿ ಮೇಲೆ ಮುದ್ರಕರ ಹೆಸರು ಹಾಗೂ ಮುದ್ರಿಸಿದ ಪ್ರತಿಗಳ ಸಂಖ್ಯೆಗಳನ್ನು ಕಡ್ಡಾಯವಾಗಿ ನಮೂದಿಸಬೇಕು. ಅವುಗಳ 4 ಪ್ರತಿಗಳನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಘೋಷಣಾ ಪತ್ರದೊಂದಿಗೆ ಸಲ್ಲಿಸತಕ್ಕದು. ತಪ್ಪಿದಲ್ಲಿ ಅಂತ ಮುದ್ರಣಾಲಯದವರ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆಯನನ್ವಯ ಕ್ರಮ ಜರುಗಿಸಲಾಗುವುದು.
ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೆ ಸಹಕರಿಸಬೇಕೆಂದು ಅವರು ಮನವಿ ಮಾಡಿದರು. ಪಟ್ಟಣ ಪಂಚಾಯತಿಯ ಮುಖ್ಯಧಿಕಾರಿಗಳಾದ ರವೀಂದ್ರ ವೈಲಂಬು ಸೇರಿದಂತೆ ಸಿಬ್ಬಂದಿ ಹಾಗೂ ವಿವಿಧ ಮುದ್ರಣಾಲಯಗಳ ಮಾಲೀಕರು ಸಭೆಯಲ್ಲಿ ಹಾಜರಿದ್ದರು.