ರೇವುನಾಯಕ ಹೇಳಿಕೆಗೆ ಕಾಂಗ್ರೆಸ್ ತೀವ್ರ ಆಕ್ಷೇಪ
ಆಳಂದ: ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ. ಮತದಾರರ ದಿಕ್ಕು ತಪ್ಪಿಸಲು ದಿನಕ್ಕೊಂದು ಕಾರ್ಯಕ್ರಮ ಬರಿ ಹೆಸರಿಗೆ ಮಾತ್ರಾ ಮಾಡಿದ್ದಾರೆ ಎಂದು ಬಿಜೆಪಿ ಮಾಜಿ ಸಚಿವ ರೇವುನಾಯಕ ಬೆಳಮಗಿ ಅವರ ಹೇಳಿಕೆಗೆ ಕಾಂಗ್ರೆಸ್ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಹಲವು ಮುಖಂಡರು ಸಾಮೂಹಿಕವಾಗಿ ರೇವುನಾಯಕ ಹೇಳಿಕೆಯನ್ನು ಖಂಡಿಸಿದರು. ಹೈ-ಕ ಪ್ರದೇಶದಲ್ಲಿ ಖರ್ಗೆ ಅವರು ಮಾಡಿದ ಸಾಧನೆ ಜನ ಮೆಚ್ಚುತ್ತಿರುವಾಗ ಬೆಳಮಗಿ ಅವರು ನೀಡಿರುವ ಹೇಳಿಕೆ ಹಾಸ್ಯಾಸ್ಪದವಾಗಿದೆ. ಸೋಲಿನ ಭೀತಿಯಿಂದ ಏನಾದರೂ ಹೇಳಿಕೆ ನೀಡಿ ಮತ ಸೆಳೆಯುವ ತಂತ್ರ ರೂಪಿಸಿದ್ದಾರೆ. ಮೂರು ಬಾರಿ ಶಾಸಕರಾಗಿ, ಎರಡು ಬಾರಿ ಮಂತ್ರಿಗಳಾಗಿ ತಮ್ಮ ಕ್ಷೇತ್ರದಲ್ಲೇ ಏನನ್ನೂ ಮಾಡದ ಬೆಳಮಗಿ ಅವರಿಗೆ ಖರ್ಗೆ ಕುರಿತು ಮಾತನಾಡುವ ಯಾವುದೇ ಹಕ್ಕಿಲ್ಲ. ಇಂಥ ಅಸಂಬಂದ್ಧ ಹೇಳಿಕೆಗಳನ್ನು ನಿಲ್ಲಿಸಬೇಕು ಎಂದು ಕೆಪಿಸಿಸಿ ಸದಸ್ಯ ಜಗನಾಥ ಶೇಗಜಿ, ಬಸೀರ ಗುತ್ತೇದಾರ ಮತ್ತು ಮುಖಂಡ ದತ್ತಪ್ಪಾ ಹೊನ್ನಳ್ಳಿ ಮತ್ತಿತರರು ತಿರುಗೇಟು ನೀಡಿದರು. ಅಧ್ಯಕ್ಷತೆ ವಹಿಸಿದ್ದ ಜಗನಾಥ ಶೇಗಜಿ ಅವರು ಮಾತನಾಡಿದರು. ಆಳಂದ ಬ್ಲಾಕ್ ಅಧ್ಯಕ್ಷ ಮಹಮದ್ ಮಕ್ದುಮ ಅನ್ಸಾರಿ ಕಾಲೇಮಿರ್, ಮಾದನಹಿಪ್ಪರಗಾ ಬ್ಲಾಕ್ ಅಧ್ಯಕ್ಷ ಬಸವಂತರಾಯ ಮಾತನಾಡಿದರು.