ಸೌಲಭ್ಯ ವಂಚಿತ ಚಿತ್ತಾಪುರ ಬಾಲಕರ ಹಾಸ್ಟೆಲ್
ವಿಶೇಷ ವರದಿ
ಕ.ಪ್ರ. ವಾರ್ತೆ ಚಿತ್ತಾಪುರ ಮಾ.12
ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸರ್ಕಾರ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದ್ದು ಆ ಸೌಲಭ್ಯಗಳು ವಿದ್ಯಾರ್ಥಿಗಳಿಗೆ ಎಷ್ಟರ ಮಟ್ಟಿಗೆ ತಲುಪುತ್ತಿವೆ ಎನ್ನಲು ಇಲ್ಲಿನ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಬಾಲಕರ ವಸತಿ ನಿಲಯವೇ ಸಾಕ್ಷಿ.
ವಿದ್ಯಾರ್ಥಿ ನಿಲಯದ ಗೇಟ್ ತೆರೆದು ಒಳ ಹೊಕ್ಕರೆ ಒಂದೊಂದಾಗಿ ಕತೆಗಳು ತೆರೆದುಕೊಳ್ಳುತ್ತವೆ. ಅಲ್ಲಿನ ಚಿತ್ರಣಗಳು ಎಂತಹವರನ್ನು ಮೂಕ ವಿಸ್ಮಿತರನ್ನಾಗಿ ಮಾಡುತ್ತವೆ.
ಈ ವಿದ್ಯಾರ್ಥಿ ನಿಲಯ ವಿದ್ಯಾರ್ಥಿಗಳಿಗೆ ವರದಾನವಾಗುವ ಬದಲು ಮಾರಕವಾಗಿರುವುದು ನಿಜಕ್ಕೂ ದುರಂತ. ಪಟ್ಟಣದ ಹಳೆಯ ವಿದ್ಯಾರ್ಥಿನಿಲಯ ಇದಾಗಿದ್ದು, ಈ ದುರವಸ್ಥೆಗೆ ಇಲ್ಲಿನ ಮೇಲ್ವಿಚಾರಕರ ದಿವ್ಯ ನಿರ್ಲಕ್ಷವೇ ಕಾರಣ ಎಂದು ಹೇಳಲಾಗುತ್ತಿದೆ. ವಿದ್ಯಾರ್ಥಿಗಳ ರಕ್ಷಣಿಗೆ ಇರಬೇಕಾದ ಇವರು ಹಾಸ್ಟೆಲ್‌ಗೆ ಬರುವುದೇ ವಾರಕ್ಕೊಮ್ಮೆ.
ವಸತಿ ನಿಲಯದಲ್ಲಿ ಒಟ್ಟು 100 ವಿದ್ಯಾರ್ಥಿಗಳಿಗೆ ಪ್ರವೇಶ ದಾಖಲಾತಿಯಿದ್ದು, ಇಲ್ಲಿ ಹಾಜರಾತಿ ಇರುವುದು ದಾಖಲೆಗಳಲ್ಲಿ ಮಾತ್ರ. ಇಲ್ಲಿ ಮುಂಜಾನೆ ಮತ್ತು ಸಾಯಂಕಾಲ ಊಟಕ್ಕೆ ವಿದ್ಯಾರ್ಥಿಗಳು ಬರುತ್ತಾರೆ. ರಾತ್ರಿ ಕೇವಲ 30 ರಿಂದ 35 ವಿದ್ಯಾರ್ಥಿಗಳು ಇರುತ್ತಾರೆ ಎಂದು ವಿಧ್ಯಾರ್ಥಿಗಳು ಹೇಳುತ್ತಾರೆ.
ಪ್ರತಿದಿನ ಇಲ್ಲಿ ವಿಧ್ಯಾರ್ಥಿಗಳಿಗೆ ನರಕಯಾತನೆ ತಪ್ಪಿದ್ದಿಲ್ಲ. ಶೌಚಾಲಯಗಳಿದ್ದರೂ ಅವು ಪ್ರಯೋಜನಕ್ಕೆ ಬಾರದಂತಾಗಿವೆ. ಮೂರು ಮಂಚಗಳಿದ್ದು ಅವು ಉಪಯೋಗಕ್ಕೆ ಯೋಗ್ಯವಿಲ್ಲ. ಹರಿದ ಹಾಸಿಗೆಯಲ್ಲೇ ಎಲ್ಲಾದರೂ ಮೈಚಾಚಿಕೊಳ್ಳಬೇಕಿರುತ್ತದೆ. ಕೋಣೆಯಲ್ಲಿ ಫ್ಯಾನ್ ವ್ಯವಸ್ಥೆ ಇಲ್ಲ. ದುರ್ನಾತ ಬೀರುವ ಶೌಚಾಲಯ, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ವಿದ್ಯುತ್ ಕೈ ಕೊಟ್ಟರೆ ಕತ್ತಲೆಯೇ ಗತಿ. ರಾತ್ರಿ ಕಾವಲುಗಾರರ ವ್ಯವಸ್ಥೆ ಇಲ್ಲ. ಹೀಗಾಗಿ ನಮ್ಮ ವಸ್ತುಗಳು ಅನೇಕ ಸಲ ಕಳ್ಳತನವಾಗುತ್ತಿವೆ. ಇತ್ತೀಚೆಗೆ ಸೈಕಲ್ ಕಳುವಾಗಿರುವುದೇ ಇದಕ್ಕೆ ಸಾಕ್ಷಿ ಎನ್ನುತ್ತಾರೆ ವಿದ್ಯಾರ್ಥಿಗಳು. ಮೇಲ್ವಿಚಾರಕರಂತೂ ಕಾಟಾಚಾರಕ್ಕಾಗಿ ವಾರಕ್ಕೊಮ್ಮೆ ಹೀಗೆ ಬಂದು ಹಾಗೆ ಹೋಗುತ್ತಾರೆ. ಅವರು ನಮ್ಮ ಕಷ್ಟ ಕೇಳುವದಿಲ್ಲ. ನಾವು ಏನಾದರೂ ದೂರು ಹೇಳಲು ಹೋದರೆ ನಮಗೆ ಹೆದರಿಸಿ ಹೊಡೆಯಲು ಬರುತ್ತಾರೆ ಎಂದು ವಿದ್ಯಾರ್ಥಿಗಳು ನೋವಿನಿಂದ ಹೇಳುತ್ತಾರೆ.
ಶಾಸಕ ಪ್ರಿಯಾಂಕ್ ಖರ್ಗೆ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ವಸತಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಲಯದ ದುರವಸ್ಥೆ ಬಗ್ಗೆ ತನಿಖೆ ಮಾಡಿ, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಅಲಿಸಿ ಪರಿಹಾರ ಒದಗಿಸಿಕೊಡಬೇಕಿದೆ