ಕಾರ್ಯಕರ್ತರಿಗೆ ಬಲ, ಈ ಚುನಾವಣೆ ಸಲೀಸು
ಗುಲ್ಬರ್ಗ: ಆಗದ ಭರವಸೆ ನೀಡಲು ಹೋಗಿಲ್ಲ, ಸಂಸದನಾಗಿ 5 ವರ್ಷಗಳಲ್ಲಿ ನಾನು ಮಾಡಿದ ಪ್ರಗತಿ ಕೆಲಸಗಳೆಲ್ಲವೂ ಕಣ್ಣಿಗೆ ಕಾಣುವಂತಿವೆ. ನಾನು ಮೊದಲ ಬಾರಿಗೆ ಸ್ಪರ್ಧಿಸಿದಾಗ ದೌರ್ಜನ್ಯಗಳು ಹೆಚ್ಚುತ್ತವೆ ಎಂದು ಆತಂಕಗೊಂಡಿದ್ದ ಕ್ಷೇತ್ರದ ಜನತೆ 5 ವರ್ಷಗಳಲ್ಲಿ ಅವರನ್ನು ಕಾಡಿದ ಆತಂಕ ನಿಜವಾಗಿಲ್ಲ, ಹೀಗಾಗಿ ನನ್ನನ್ನು ವಿರೋಧಿಸುವವರೂ ಈ ಬಾರಿ ಗೆಲ್ಲಿಸಬೇಕೆಂದು ಸಂಕಲ್ಪ ಮಾಡಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
2009ರ ಚುನಾವಣೆಗಿಂತಲೂ ಈ ಚುನಾವಣೆ ಸಲೀಸಾಗಿದೆ. ಮಾತಿನಲ್ಲೇ ವಿರೋಧಿಸುವವರು, ಮಾತಿಗೆಂದು ವಿರೋಧ ಮಾಡುವವರು ಹಾಗೂ ಖರ್ಗೆ ಅವರೆಂದರೆ ಗೊತ್ತಿಲ್ಲವೆ ಎಂದು ಚರ್ಚೆಯಲ್ಲಿ ವಿರೋಧ ಮಾಡುತ್ತಿದ್ದವರೂ ಈಗ ನನ್ನ ಸಾಧನೆಗೆ ಮೆಚ್ಚಿದ್ದಾರೆ. ಅವರೆಲ್ಲರೂ ಈ ಚುನಾವಣೆಯಲ್ಲಿ ವಿರೋಧ ಬಿಟ್ಟು ಬೆಂಬಲಕ್ಕೆ ನಿಲ್ಲುವಷ್ಟು ಪರಿವರ್ತಿತರಾಗಿದ್ದಾರೆ ಎಂಬಂಶ ತಮಗೆ ಅನೇಕ ಸಂದರ್ಭಗಳಲ್ಲಿ ಅರಿವಿಗೆ ಬಂದಿದೆ ಎಂದು ಖರ್ಗೆ ಇಲ್ಲಿನ ತಮ್ಮ ನಿವಾಸ ಲುಂಬಿನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಅಭಿಪ್ರಾಯಪಟ್ಟಿದ್ದಾರೆ.
ಹಲವು ಕೆಲಸ ಕಾರ್ಯಗಳು: ಹೈ-ಕ ಕ್ಕೆಂದೆ ಪ್ರತ್ಯೇಕ ಸಂವಿಧಾನ ಎಂಬಂತಿರುವ ಕಲಂ 371 (ಜೆ) ತಿದ್ದುಪಡಿ ಮಾಡಿ ಅನುಷ್ಠಾನಕ್ಕೆ ತರಲಾಗಿದೆ. ಇಂತಹ ಹತ್ತು ಹಲವು ಕೆಲಸ ಕಾರ್ಯಗಳು ಜನರಿಗೆ ಅನುಭವಕ್ಕೆ ಬಂದಿವೆ. ಇದರಿಂದಾಗಿಯೇ ಈ ಚುನಾವಣೆ ಇನ್ನೂ ಸಲೀಸಾಗಲಿದೆ ಎಂದರು.
ಜನಮನ ಗೆದ್ದಿದೆ: ಪ್ರಶ್ನೆಯೊಂದಕ್ಕೆ ಉತ್ತರಿಸಿದ ಖರ್ಗೆ ಅವರು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ 9 ತಿಂಗಳಲ್ಲಿ ತಾನು ನೀಡಿದ್ದ ಚುನಾವಣೆ ಭರವಸೆಗಳಲ್ಲಿ ಸಿಂಹಪಾಲು ಪ್ರಮುಖವಾದಂತಹ ಭರವಸೆಗಳನ್ನು ಈಗಾಗಲೇ ಈಡೇರಿಸಿದೆ. ಅನ್ನಭಾಗ್ಯ, ಕ್ಷೀರಭಾಗ್ಯದಂತಹ ಜನಪ್ರಿಯ ಯೋಜನೆಗಳಿಂದಾಗಿ ಜನಮನ ಗೆದ್ದಿದೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯ ಸರ್ಕಾರದ ಸಾಧನೆಯ ಜೊತೆಗೆ ಅನೇಕ ಸಂಗತಿಗಳು ಗಣನೆಗೆ ಬರುತ್ತವೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಆಚಾರ- ವಿಚಾರ ಇದ್ದರೂ ಪ್ರಚಾರದ ಕೊರತೆ ಕಾಡುತ್ತಿದೆ. ಅದಕ್ಕೇ ಅದೆಷ್ಟೋ ಉತ್ತಮ ಕೆಲಸ ಮಾಡಿದರೂ ದೊರಕಬೇಕಾದಂತಹ ಪ್ರಚಾರ ಮಾತ್ರ ದೊರಕದಂತಾಗಿದೆ ಎಂದು ವಿಷಾದಿಸಿದರು. ಬಿಜೆಪಿಯವರು ಅಲ್ಪ ಕೆಲಸಕ್ಕೂ ಅಬ್ಬರದ ಪ್ರಚಾರ ಪಡೆಯುವ ಜಾಲ ಹೊಂದಿದ್ದಾರೆ. ಈ ವಿಚಾರದಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಸರಿಗಟ್ಟಲಾಗುತ್ತಿಲ್ಲ ಎಂದು ಬಿಜೆಪಿಯ ಪ್ರಚಾರ ಕೇಂದ್ರೀಯ ಕೆಲಸದ ವೈಖರಿಯನ್ನು ಲೇವಡಿ ಮಾಡಿದರು