ಖರ್ಗೆ ಅವಿರೋಧ ಆಯ್ಕೆಗೆ ಆಗ್ರಹ
ಗುಲ್ಬರ್ಗ: ತಮ್ಮ 4 ದಶಕಗಳ ರಾಜಕೀಯ ಜೀವನದಲ್ಲಿ ಹತ್ತು ಹಲವು ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಹೈ-ಕ ಸೇರಿದಂತೆ ಇಡಿ ಕರ್ನಾಟಕ ಅಭಿವೃದ್ಧಿಯ ಹರಿಕಾರರಾಗಿರುವ ದಾರ್ಶನಿಕರಂತೆ ರಾಜಕೀಯದಲ್ಲಿದ್ದು, ದೂರದರ್ಶಿ ಯೋಜನೆಗಳಿಗೆ ಚಾಲನೆ ಕೊಡುತ್ತ ಹೊರಟಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಿ ಕಳುಹಿಸುವ ಮೂಲಕ ಅವರಲ್ಲಿ ಸ್ಫೂರ್ತಿ ತುಂಬುವ ಕೆಲಸ ಎಲ್ಲಾ ರಾಜಕೀಯ ಪಕ್ಷಗಳವರು ಮಾಡಲಿ ಎಂದು ಕಾಂಗ್ರೆಸ್ ವಕ್ತಾರ ಬಸವರಾಜ ರಾಯರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಗುಲ್ಬರ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸತತ 9 ಅಸೆಂಬ್ಲಿ ಚುನಾವಣೆಗಳನ್ನು ಗೆದ್ದಿರುವ ಖರ್ಗೆ 10 ನೇ ಚುನಾವಣೆ ರೂಪದಲ್ಲಿ 2009ರಲ್ಲಿ ಲೋಕಸಭೆ ಪ್ರವೇಶಿಸಿದವರು. ಇದೀಗ ಮತ್ತೊಂದು ಲೋಕಸಭೆ ಚುನಾವಣೆ ಎದುರಾಗಿದೆ. ಖರ್ಗೆಯವರ ಕೆಲಸ ಕಾರ್ಯಗಳನ್ನು ಮೆಚ್ಚಿ ಈ ಭಾಗದ ಎಲ್ಲರೂ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕು. ಆ ಮೂಲಕ ದೂರದರ್ಶಿ ನಾಯಕನನ್ನು ಬೆಂಬಲಿಸಬೇಕು ಎಂದರು.
ಹಿಂದುಳಿದ ನೆಲದ ಪ್ರಗತಿಗೆ: 1952ರಲ್ಲಿ ಟಿಟಿ ಕೃಷ್ಣಮಾಚಾರಿ, 1957ರಲ್ಲಿ ಪಿಎ ಸಂಗ್ಮಾ, ಪಿಎಂ ಸಯೀದ್, ಕರ್ನಾಟದ ಹಾಸನದಿಂದ ನಂಜಪ್ಪ, ತೀರ ಈಚೆಗೆ ಉ. ಪ್ರದ ಕನೌಜ್ ಕ್ಷೇತ್ರದಿಂದ ಅಖಿಲೇಶ ಯಾದವ ಪತ್ನಿ ಡಿಂಪಲ್ ಯಾದವ್ ಇವರೆಲ್ಲರನ್ನು ಅವಿರೋಧವಾಗಿ ಆಯ್ಕೆಮಾಡಿದ್ದಿದೆ. ಖರ್ಗೆ ಯವರಂತೂ ಹಿಂದುಳಿದ ನೆಲದ ಪ್ರಗತಿಗೆ ಹೆಚ್ಚಿನ ಒತ್ತು ನೀಡಿ ಕೆಲಸ ಮಾಡುತ್ತ ಹೊರಟವರು. ಯಾಕೆ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಬಾರದು ಎಲ್ಲಾ ರಾಜಕೀಯ ಪಕ್ಷಗಳವರು ಈ ಬಗ್ಗೆ ಚಿಂತನೆ ನಡೆಸಲು ಇದು ಸಕಾಲ. ಇನ್ನೂ ನಾಮಪತ್ರ ಸಲ್ಲಿಕೆ ಕಾರ್ಯ ಶುರುವಾಗಿಲ್ಲ. ನಾಮಪತ್ರ ವಾಪಸ್ ಪಡೆಯುವವರೆಗೂ ಅವಿರೋಧ ಆಯ್ಕೆ ಕುರಿತಂತೆ ನಿರ್ಣಯ ಕೈಗೊಳ್ಳಲು ಅವಕಾಶಗಳಿವೆ. ಎಲ್ಲ ಪಕ್ಷಗಳವರು ಈ ಬಗ್ಗೆ ಚರ್ಚಿಸಿ ನಿರ್ಣಯಿಸಿದರೆ ದೂರದರ್ಶಿತ್ವ ಇರುವ ರಾಜಕಾರಣಿಗೆ ಬೆಂಬಲ ನೀಡಿದಂತಾಗುತ್ತದೆ ಎಂದರು.
ವೈಯಕ್ತಿಕ ವಿಚಾರ: ತಾವು ಈ ವಿಚಾರವಾಗಿ ಯಾರನ್ನೂ ಸಂಪರ್ಕಿಸಿಲ್ಲ ಎಂದ ರಾಯರೆಡ್ಡಿ, ಇದು ತಮ್ಮ ವೈಯಕ್ತಿಕ ವಿಚಾರವಾಗಿದೆ. ಈ ದಿಶೆಯಲ್ಲಿ ಚರ್ಚೆಗಳಾದರೂ ಸಾಗಲಿ, ನಂತರ ಅದಕ್ಕೊಂದು ರೂಪ ತಾನಾಗಿಯೇ ಬರುವ ವಿಶ್ವಾಸ ತಮಗಿದೆ ಎಂದರು.
ಡಿಸಿಸಿ ಅಧ್ಯಕ್ಷ ಭಾಗಣಗೌಡ ಸಂಕನೂರ್, ಹಿರಿಯ ಉಪಾಧ್ಯಕ್ಷ ಚಂದ್ರಶೇಖರ ಸುಲ್ತಾನಪುರ್, ಬಸವರಾಜ ಭೀಮಳ್ಳಿ, ಮಾಜಿ ಎಂಎಲ್ಸಿ ಮಾರುತಿರಾವ ಮಾಲೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.