ನ್ಯಾಯಸಮ್ಮತ ಚುನಾವಣೆ ನಡೆಸಿ
ಕನ್ನಡಪ್ರಭ ವಾರ್ತೆ ಯಾದಗಿರಿ ಮಾ.13
ಗುಲ್ಬರ್ಗ ಹಾಗೂ ರಾಯಚೂರು ಲೋಕಸಭಾ ಕ್ಷೇತ್ರಗಳಿಗೆ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ಸೂಚಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂಬರುವ ಸಾರ್ವತ್ರಿಕ ಲೋಕಸಭಾ ಚುನಾವಣೆಗಳಿಗಾಗಿ ಈ ಎರಡು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ ಗುರುಮಠಕಲ್, ಯಾದಗಿರಿ, ಶಹಾಪುರ ಮತ್ತು ಸುರಪುರ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ಕಾರ್ಯನಿರ್ವಹಿಸಲು ಈಗಾಗಲೇ 7 ತಂಡಗಳನ್ನು ರಚಿಸಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಸಹಾಯಕ ಚುನಾವಣಾಧಿಕಾರಿಗಳು, ಸಂಚಾರಿ ದಳ, ಎಂಸಿಸಿ ತಂಡ, ಸ್ಥಿರ ಕಣ್ಗಾವಲು ತಂಡ, ವಿಡಿಯೋ ಸರ್ವೆಲನ್ಸ್ ಮತ್ತು ವಿಡಿಯೋ ವಿವಿಂಗ್ ತಂಡ, ಸೆಕ್ಟರ್ ಆಫೀಸರ್ಗಳನ್ನು ಈಗಾಗಲೇ ನೇಮಿಸಿದ್ದು, ಈ ಎಲ್ಲ ತಂಡಗಳು ಜವಾಬ್ದಾರಿಯುತವಾಗಿ ಮತ್ತು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯಲು ಸಹಕರಿಸುವಂತೆ ತಿಳಿಸಿದರು.
ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಿ: ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರವಹಿಸಬೇಕು. ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ನೀತಿಸಂಹಿತೆ ಉಲ್ಲಂಘನೆ ಬಗ್ಗೆ ತಕ್ಷಣ ಪ್ರಕರಣ ದಾಖಲಿಸಿಕೊಳ್ಳಬೇಕು. ಅದರಂತೆ ಸಹಾಯಕ ಆಯುಕ್ತರು ಪ್ರತಿ 2ನೇ ದಿನ ವರದಿ ಪಡೆದು ಸಲ್ಲಿಸಬೇಕು. ಅನುಮತಿ ಇಲ್ಲದೇ ನಡೆಯುವ ಸಭೆ, ಸಮಾರಂಭ ಮತ್ತು ಚುನಾವಣಾ ಅಭ್ಯರ್ಥಿ ಮತ್ತು ಪಕ್ಷಗಳಿಂದ ಅಗುವ ಖರ್ಚು ವೆಚ್ಚಗಳ ಬಗ್ಗೆ ಎಚ್ಚರವಹಿಸಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರವಹಿಸಬೇಕೆಂದು ಸೂಚನೆ ನೀಡಿದರು.
ಬ್ಯಾಂಕ್ಗಳಲ್ಲಿ ನಡೆಯುವ ದೊಡ್ಡ ಪ್ರಮಾಣದ ಹಣಕಾಸಿನ ವ್ಯವಹಾರದ ಬಗ್ಗೆ ಬ್ಯಾಂಕ್ ಅಧಿಕಾರಿಗಳು ನಿಗಾ ಇಟ್ಟು ಈ ಕುರಿತು ದಿನನಿತ್ಯ ವರದಿ ನೀಡಬೇಕು. ಅಬಕಾರಿ ಇಲಾಖೆಯಿಂದ ಅಕ್ರಮ ಮದ್ಯ ಸರಬರಾಜು ಬಗ್ಗೆ ನಿಗಾ ಇಡಬೇಕು. ಸೂಕ್ತ ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಬೇಕೆಂದು ಹೇಳಿದರು.
ರಾಯಚೂರು ಲೋಕಸಭಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಾಗರಾಜ್, ಎಂಸಿಸಿ ತಂಡಗಳು ಮತ್ತು ಪೊಲೀಸ್ ಇಲಾಖೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಎಂಸಿಸಿ ತಂಡಗಳು ಕಾನೂನುಗಳ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿರಬೇಕು. ಪ್ರಚಾರ ಮೆರವಣಿಗೆ ಮತ್ತು ಸಭೆ ಸಮಾರಂಭಗಳಿಗೆ ಮುಂಚಿತವಾಗಿ ಅರ್ಜಿ ಪಡೆದು ಅನುಮತಿ ನೀಡಬೇಕು. ಅದಕ್ಕೆ ಅಗುವ ಖರ್ಚು ವೆಚ್ಚಗಳ ಬಗ್ಗೆ ಸಂಬಂಧಪಟ್ಟ ಕಡತದಲ್ಲಿ ನಮೂದಿಸಬೇಕು. ಅದರಂತೆ ದೂರು ಸ್ವೀಕಾರ ಘಟಕ ಸ್ಥಾಪಿಸಬೇಕೆಂದು ತಿಳಿಸಿದರು.
ಎಸ್ಪಿ ವಂಶಿಕೃಷ್ಣ, ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳ ಬಗ್ಗೆ, ವಲ್ನರೆಬಲ್ ಪ್ರದೇಶ ಹಾಗೂ ಕ್ರಿಟಿಕಲ್ ಮತಗಟ್ಟೆಗಳ ಬಗ್ಗೆ ಹೆಚ್ಚಿನ ಎಚ್ಚರ ವಹಿಸಬೇಕು. ಸೆಕ್ಟರ್ ಅಧಿಕಾರಿಗಳು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಕಾರ್ಯನಿರ್ವಹಿಸಬೇಕು.
ಮುಂಬರುವ 25 ದಿನಗಳ ಕಾಲ ಸಂಚಾರಿ ದಳ ಮತ್ತು ಎಂಸಿಸಿ ತಂಡಗಳಿಂದ ಹೆಚ್ಚಿನ ಪ್ರಕರಣಗಳನ್ನು ದಾಖಲಿಸಿಕೊಳ್ಳಬೇಕೆಂದು ಹೇಳಿದರು. ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.