ಎನ್ನೆಸ್ಸೆಸ್ ಕೇವಲ ಪ್ರಮಾಣ ಪತ್ರಕ್ಕಾಗಿ ಅಲ್ಲ: ಶ್ರೀ ಭಜಂತ್ರಿ
ಗುಲ್ಬರ್ಗ: ವಿದ್ಯಾರ್ಥಿಗಳಲ್ಲಿ ಕಲಿಕೆಯ ಜೊತೆಗೆ ಸೇವಾ ಮನೋಭಾವ ಬೆಳೆಸುವ ಉದ್ದೇಶಕ್ಕಾಗಿ ರಾಷ್ಟೀಯ ಸೇವಾ ಯೋಜನೆ ಆರಂಭವಾಗಿದ್ದು, ಕೇವಲ ಪ್ರಮಾಣಪತ್ರಕ್ಕಾಗಿ ಸೇವಾ ಕಾರ್ಯ ಮಾಡದೇ ನಿಜವಾದ ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಅಂತಹ ಮನೋಭಾವನೆ ಇಲ್ಲಿ ಕಾಣುತ್ತಿದೆ ಎಂದು ಕೆನರಾ ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ಜೆ.ಎಚ್. ಭಜಂತ್ರಿ ತಿಳಿಸಿದರು.
ಪರ್ಯಾಯ ಸಮಾಜಕಾರ್ಯ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಘಟಕವನ್ನು ಉದ್ಘಾಟಿಸಿ ಮಾತನಾಡಿ, ಪರಿಸರ ಸಂರಕ್ಷಣೆ, ಭಾವಕೈತೆ, ಭಾತೃತ್ವ ಭಾವನೆಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು ಕೂಡ ಯೋಜನೆಯ ಕಾರ್ಯಚಟುವಟಿಕೆಗಳಲ್ಲಿ ಒಂದು. ಅಂತಹ ಎಲ್ಲ ಚಟುವಟಿಕೆಗಳಲ್ಲಿ ಪರ್ಯಾಯ ಕಾಲೇಜಿನ ಎನ್ನೆಸ್ಸೆಸ್ ಘಟಕ ಸಕ್ರೀಯವಾಗಿ ಕೆಲಸ ಮಾಡಿ ಉತ್ತಮ ಘಟಕವಾಗಿ ಹೊರಹೊಮ್ಮಲಿ ಎಂದು ಆಶಯ ವ್ಯಕ್ತಪಡಿಸಿದರು.
ಕೃತಜ್ಞರು: ಪ್ರಾಚಾರ್ಯ ಪ್ರೊ. ಮಹೇಶ ಕುಮಾರ ರಾಠೋಡ ಮಾತನಾಡಿ, ಪರ್ಯಾಯ ಕಾಲೇಜಿನಲ್ಲಿ ಎನ್ನೆಸ್ಸೆಸ್ ಘಟಕ ಮಂಜೂರು ಮಾಡಿದ್ದಕ್ಕೆ ವಿಶ್ವವಿದ್ಯಾಲಯದ ಎನ್ನೆಸ್ಸೆಸ್ ಸಂಯೋಜಕರಿಗೆ ಧನ್ಯವಾದಗಳನ್ನು ಹೇಳಿದರು. ಅಲ್ಲದೆ ಮುಂದಿನ ಒಂದು ವರ್ಷದಲ್ಲಿ ಗುವಿವಿಯ ಅತ್ಯುತ್ತಮ ಎನ್ನೆಸ್ಸೆಸ್ ಘಟಕ ಎಂದು ವಿಶ್ವವಿದ್ಯಾಲಯ ಹೆಮ್ಮೆ ಪಡುವಂತೆ ಚಟುವಟಿಕೆಗಳನ್ನು ನಡೆಸುವುದಾಗಿ ಭರವಸೆ ನೀಡಿದರು.
ಉದ್ಘಾಟನೆ ಕೇವಲ ಸಾಂಕೇತಿಕವಾಗಿರದೇ ಗಣೇಶ ನಗರದಲ್ಲಿ ಹಾಳುಬಿದ್ದಿರುವ ಹಾಗೂ ಮುಳ್ಳಿನ ಕಾಡಿನಂತಾಗಿರುವ ಉದ್ಯಾನವನವನ್ನು ದತ್ತು ಪಡೆದು ಸುಂದರ ಉದ್ಯಾನವನವನ್ನಾಗಿ ಮಾರ್ಪಡಿಸಲು ಯೋಜನೆ ರೂಪಿಸಲಾಗಿದೆ. ಅದಕ್ಕಾಗಿ ಇಂದು ಆ ಕಾರ್ಯಕ್ಕೆ ಚಾಲನೆ ನೀಡುವ ಮೂಲಕ ಎನ್ನೆಸ್ಸೆಸ್ ಚಟುವಟಿಕೆ ಪ್ರಾರಂಬಿಸಲಾಗಿದೆ ಎಂದು ವಿವರಿಸಿದರು.
ಪರ್ಯಾಯ ಸಂಶೋಧನೆ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಮೋಹನ ಕುಮಾರ ರಾಠೋಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಧ್ಯಾಪಕ ವಿಠ್ಠಲ ಕಟ್ಟಿ, ಉಪ ಪ್ರಾಚಾರ್ಯ ರೇಖಾ ಭರತೇಶ ಮಾತನಾಡಿದರು.ಎನ್ನೆಸ್ಸೆಸ್ ಕಾರ್ಯಕ್ರಮದ ಅಧಿಕಾರಿ ಕು. ಮಾಧುರಿ ತೆಗನೂಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕು. ಸರೋಜಾ ದಂಡೋತಿಕರ್, ಕುಮಾರಿ ಯೋಗಿತಾ ಕಡಬೂರ, ಡಾ. ರುಕ್ಮೀಣಿಬಾಯಿ, ಕವಿತಾ ಮುಂತಾದವರು ಭಾಗವಹಿಸಿದ್ದರು. ಕು. ಶಮೀಮಬಾನು ಸ್ವಾಗತಿಸಿದರು. ಕು. ಭಾಗ್ಯಶ್ರೀ ವಂದಿಸಿದರು. ಕು. ಪ್ರಜಾಪತಿ ಪ್ರಾರ್ಥನಾ ಗೀತೆ ಹಾಡಿದರು. ಮಂಜುನಾಥ ಎನ್ನೆಸ್ಸೆಸ್ ಗೀತೆ ಹಾಡಿದರು. ರೇಣುಕಾ ಕಾರ್ಯಕ್ರಮ ನಿರೂಪಿಸಿದರು.