ಸಮಾನತೆ ಸಾರಿದ ಮರುಳಸಿದ್ಧರು
ಕನ್ನಡಪ್ರಭ ವಾರ್ತೆ ಯಾದಗಿರಿ ಮಾ.14
ಶೂದ್ರಕುಲದಲ್ಲಿ ಹುಟ್ಟಿ ಸದ್ಧರ್ಮಪೀಠವೊಂದನ್ನು ಸ್ಥಾಪಿಸಿದ ವಿಶ್ವಬಂಧು ಮರುಳಸಿದ್ಧರ ಜೀವನ ವೃತ್ತಾಂತವನ್ನು ನಾಟಕದ ರೂಪದಲ್ಲಿ ಪ್ರಸ್ತುತಪಡಿಸಲಾಯಿತು.
ಶಹಾಪುರ ಪಟ್ಟಣದ ಚರಬಸವೇಶ್ವರ ವಿದ್ಯಾಸಂಸ್ಥೆಯ ಆವರಣದಲ್ಲಿ ಹೈದ್ರಾಬಾದ ಕರ್ನಾಟಕ ಯುವ ಬರಹಗಾರರ ಬಳಗದ ವತಿಯಿಂದ ಸಗರನಾಡಿನ ಸಿರಿ ನಾಟಕ ಹಬ್ಬದ ನಿಮಿತ್ತ ನಾಟಕ 'ವಿಶ್ವಬಂದು ಮರುಳಸಿದ್ಧ' ಅವರ ಜೀವನ ವೃತ್ತಾಂತವನ್ನು ಬಿಂಬಿಸಿತು.
12ನೇ ಶತಮಾನದ ವಚನಕಾರ ಅಣ್ಣ ಬಸವಣ್ಣನವರ ಹಿರಿಯ ಸಮಕಾಲಿನ ಮರುಳಸಿದ್ಧರು. ಇವರು ಹುಟ್ಟಿನಿಂದ ಮಾದಿಗ ಕುಲದವರು. ಸಾಧನೆಯಿಂದ ಮಾನವ ಕುಲದ ಬೆಳಕಾದವರು. ಮಚ್ಚೇಕಾಯಕದ ಶಿವಶರಣ ದಂಪತಿಗಳ ಮಗನಾಗಿ ಜನಿಸಿದ ಮರುಳಸಿದ್ಧರು ಹರೆಯದಲ್ಲಿ ಪ್ರಾಣಿಬಲಿ ವಿರುದ್ಧ ದನಿ ಎತ್ತಿ ಪ್ರಾಣಿದಯೆಯ ಮಹತ್ವ ಸಾರಿದರು.
ಅಸಮಾನತೆ, ಅಸ್ಪಶ್ಯತೆಯ ಆಚರಣೆಗೆ ಕೊಡಲಿಪೆಟ್ಟು ನೀಡಿ ಸಮಾನತೆಯನ್ನು ಎತ್ತಿಹಿಡಿದ ಸಮಾಜ ಸುಧಾರಕನ ಜೀವನವನ್ನು ನಾಟಕದ ಮೂಲಕ ಹಿಡಿದಿಟ್ಟದ್ದು ಪ್ರೇಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಕಾಯಕವಿಲ್ಲದವನಿಗೆ ದೇವರಿಲ್ಲ, ಧರ್ಮವಿಲ್ಲ, ದೇವರು ಧರ್ಮಗಳ ಹೆಸರಲ್ಲಿ ಯಾವುದೇ ವ್ಯಕ್ತಿ ನಿರುದ್ಯೋಗಿಯಾಗಿ ಪರಾವಲಂಬಿಯಾಗಬಾರದು ಎಂಬ ನಿಲುವಿನ ದೃಶ್ಯ ಕಣ್ಣಿಗೆ ಕಟ್ಟಿದಂತಿತ್ತು. ವಚನಕಾರರದ್ದು ಸಂಘಟಿತ ಹೋರಾಟವಾದರೆ ಮರುಳಸಿದ್ಧರದು ಒಬ್ಬಂಟಿ ಹೋರಾಟಗಾರನ ಕಥೆಯಾಗಿದೆ.
ಡಾ. ರಾಜಶೇಖರ ಹನುಮಲಿ ರಚಿಸಿದ, ವೈ.ಡಿ. ಬದಾಮಿ ನಿರ್ದೇಶನದ ಮಹಾಬೆಳಗು ನಾಟಕವು ಲಿಂ. ಶಿವಮೂರ್ತಿ ಶಿವಾಚಾರ್ಯರು ಹಾಳಾಗಿದ್ದ ಆ ಮಠಕ್ಕೆ ಪೀಠಾಧ್ಯಕ್ಷರಾಗಿ ಬಂದು ಅಲ್ಲಿ ಅವರು ಮಾಡಿದ ಸಾಧನೆ ಕುರಿತು ಅತ್ಯಂತ ಮನೋಜ್ಞವಾಗಿ ವಿವರಿಸುವಂತಿತ್ತು.
ತರಳಬಾಳು ಜಗದ್ಗುರು ಶಿವಕುಮಾರ ಶಿವಾಚಾರ್ಯ ಸ್ವಾಮಿಗಳರವರ ಜೀವನದ ಸತ್ಯ ಘಟನೆಗಳನ್ನ ಆಧರಿಸಿದ ನಾಟಕ ಇದಾಗಿತ್ತು. ಸ್ವಾತಂತ್ರ್ಯಪೂರ್ವದಲ್ಲಿ ಜಾತ್ಯತ ಮನೋಭಾವದ ಕಹಳೆ ಊದಿ ಮಠ ಮತ್ತು ಶಾಲಾ ಕಾಲೇಜಿನ ಪ್ರಸಾದ ನಿಲಯಗಳಲ್ಲಿ ಸಹಪಂಕ್ತಿ ಭೋಜನವನ್ನು ಜಾರಿಯಲ್ಲಿ ತಂದ ಅಪರೂಪದ ದೃಶ್ಯ ಮನ ಮುಟ್ಟುವಂತಿತ್ತು.
ಶರಣ ಸತಿ ಲಿಂಗಪತಿ ಎಂಬ ನಾಟಕ ವಿಶ್ವದ ಮಹಿಳಾವರ್ಗದ ಆಧ್ಯಾತ್ಮಿಕ ವೈರಾಗ್ಯದ ಸಂಕೇತವಾಗಿ ಕಂಗೊಳಿಸಿದ ಅಕ್ಕಮಹಾದೇವಿಯ ಬಾಳದಾರಿಯ ಪುಟಗಳನ್ನು ಈ ನಾಟಕ ತೆರೆದಿಡುವಲ್ಲಿ ಯಶಸ್ವಿಯಾಯಿತು.
ಸಾಂಪ್ರದಾಯಿಕ ಸಮಾಜದ ಸಂಕೋಲೆಗಳನ್ನು ಮುರಿದು ತನ್ನ ಇಷ್ಟದೈವವಾದ ಚೆನ್ನಮಲ್ಲಿಕಾರ್ಜುನನ್ನೇ ಪತಿ ಎಂದು ನಂಬಿ ಸಾಧನೆಯ ಮೂಲಕ ಸಿದ್ದಿ ಪಡೆದ ಸಾಧಕಿ. ಭಕ್ತ ಭಗವಂತನ ನಡುವಿನ ಸಂಬಂದವನ್ನ ಸತಿಪತಿ ಭಾವದಲ್ಲಿ ಹಿಡಿದಿಡುವ ವಿಶಿಷ್ಟ ನಾಟಕವಾಗಿತ್ತು. ಅಕ್ಕ ಕೌಶಿಕನನ್ನು ಮದುವೆಯಾಗದಂತೆ, ಮದುವೆಯಾದರೂ ಸುಖಸಂಸಾರಕ್ಕೆ ಅವಕಾಶವೀಯದಂತೆ ನೋಡಿಕೊಳ್ಳುವ ಸಂಚು ಮಾಡುವ ದೃಶ್ಯ
ನಿಬ್ಬೆರಗುಗೊಳಿಸುವಂತಿತ್ತು.
ಒಟ್ಟಾರೆಯಾಗಿ ಮೂರು ದಿನಗಳ ಕಾಲ ಈ ನಾಟಕ ಹಬ್ಬ ಪ್ರೇಕ್ಷರ ಮನರಂಜಿಸಿತಲ್ಲದೆ ಜನಮನ್ನಣೆಗೆ ಪಾತ್ರವಾಯಿತು. ಬಳಗದ ಅಧ್ಯಕ್ಷ ಶಿವರಂಜನ್ ಸತ್ಯಂಪೇಟೆ, ಕಾರ್ಯದರ್ಶಿ ಹುಸನಪ್ಪ ಕಟ್ಟಿಮನಿ, ಖಜಾಂಚಿ ಮಹೇಶ ಗಂವಾರ, ಸಂಘಟನಾ ಕಾರ್ಯದರ್ಶಿ ಡಾ. ಬಸವರಾಜ ಇಜೇರಿ ಮುಂತಾದವರ ಶ್ರಮ ಎದ್ದು ಕಾಣುವಂತಿತ್ತು.