ಸರ್ಕಾರಗಳ ಸಾಧನೆ ತಿಳಿಸಿ ಮತಯಾಚಿಸಿ
ಚಿಂಚೋಳಿ: ಹಿಂದುಳಿದ ಪ್ರದೇಶದ ಅಭಿವೃದ್ಧಿಗಾಗಿ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಮಾಡಿದ ಸಾಧನೆ ಬಗ್ಗೆ ಜನಸಾಮಾನ್ಯರಿಗೆ ತಿಳಿಸಿ ಮತಯಾಚಿಸಬೇಕೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಕಾರ್ಯಕರ್ತರಿಗೆ ಹೇಳಿದರು.
ಸೇಡಂ ವಿಧಾನಸಭಾ ಮತಕ್ಷೇತ್ರಕ್ಕೆ ಒಳಪಟ್ಟಿರುವ ಚಿಂಚೋಳಿ ತಾಲೂಕಿನ ಕುಪನೂರ, ಹೊಡೇಬೀರನಳ್ಳಿ ಗ್ರಾಮಗಳಲ್ಲಿ ಶುಕ್ರವಾರ ಭಾರತ ನಿರ್ಮಾಣ ಯಾತ್ರೆ ನಿಮಿತ್ತ ಪಾದಯಾತ್ರೆ ಕೈಕೊಂಡ ನಂತರ ಸುಲೇಪೇಟ ಗ್ರಾಮದಲ್ಲಿ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ಭಾಗಕ್ಕೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅಗಿರುವ ಅಭಿವೃದ್ಧಿಗಳನ್ನು ಜನ ಸಾಮಾನ್ಯರಿಗೆ ತಿಳಿಸಿ ಅವರಿಂದ ಮತ ಯಾಚಿಸಬೇಕು. ಕಳೆದ 10 ವರ್ಷಗಳಲ್ಲಿ ಯುಪಿಎ ಸರ್ಕಾರ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮಹಾಂತಪ್ಪ ಸಂಗಾವಿ, ಭೀಮರಾವ ತೇಗಲತಿಪ್ಪಿ, ಜಿಲ್ಲಾ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಭಾಗಣ್ಣಗೌಡ, ಧೂಳಪ್ಪ ದೊಡ್ಮನಿ, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕ ಅಧ್ಯಕ್ಷೆ ಪ್ರಭಾವತಿ ಪಾಟೀಲ್ ಸೇರಿದಂತೆ ಮುಂತಾದವರು ಮಾತನಾಡಿದರು. ಸೇಡಂ ಬ್ಲಾಕ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ನಾಗೇಶ್ವರರಾವ ಮಾಲಿಪಾಟೀಲ, ಸುಭಾಶ ನಿಷ್ಟಿ, ಬಸವರಾಜ ಸಜ್ಜನಶೆಟ್ಟಿ ಗುತ್ತೇದಾರ, ಮಸ್ತಾನ ಪಟೇಲ ಪಟ್ಟೆದಾರ, ಚಂದ್ರಕಾಂತ ರಂಗನೂರ,ಜಹೀರ ಪಟೇಲ್, ಧೂಳಪ್ಪ ಬೀರನಳ್ಳಿ, ಶಿವಕುಮಾರ ಕೋಟಪಳ್ಳಿ, ಕಾಂತಪ್ಪ ಪಡಶೆಟ್ಟಿ ಇದ್ದರು. ರೇವಣಸಿದ್ದಪ್ಪ ಅಣಕಲ್ ಸ್ವಾಗತಿಸಿದರು. ಬಸವರಾಜ ಗಿರಿ ನಿರೂಪಿಸಿದರು. ಅಂಬರೀಶ ಗೋಣಿ ವಂದಿಸಿದರು.