ಕಾಶಿನಾಥ ಅಂಬಲಗೆ ಅನುವಾದಿತ ಕೃತಿಗೆ ಗೋಯೆಂಕಾ ಪ್ರಶಸ್ತಿ
ಗುಲ್ಬರ್ಗ: ಕಮಲ ಗೋಯೆಂಕಾ ಫೌಂಡೇಷನ್ ವತಿಯಿಂದ ಪ್ರತಿ ವರ್ಷ ನೀಡಲಾಗುವ ಪ್ರಶಸ್ತಿಗೆ ಗುಲ್ಬರ್ಗದ ಹಿರಿಯ ಲೇಖಕ, ಗಜಲ್, ಕವಿ, ಅನುವಾದಕ ಡಾ. ಕಾಶಿನಾಥ ಅಂಬಲಗೆ ಅವರ ಅನುವಾದಿತ ಕೃತಿ ಆಯ್ಕೆಯಾಗಿದೆ.
ಕಮಲ ಗೋಯೆಂಕಾ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿಗಳಾದ ಶಾಮಸುಂದರ್ ಗೋಯೆಂಕಾ ಅವರು ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದಾರೆ. 2014ನೇ ಸಾಲಿನ ಅತ್ಯುತ್ತಮ ಅನುವಾದಿತ ಕೃತಿಯಾಗಿ 'ಸುಮಿತ್ರಾನಂದನ್ ಪಂತ್ರ ಕವಿತೆಗಳು' ಅನ್ನು ಆಯ್ಕೆಮಾಡಲಾಗಿದೆ. ಡಾ. ಕಾಶಿನಾಥ ಅಂಬಲಗೆ ಈ ಕೃತಿಯನ್ನು ಹಿಂದಿಯಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
ಈ ಪ್ರಶಸ್ತಿಯು 21 ಸಾವಿರ ನಗದು ಬಹುಮಾನ ಮತ್ತು ಸತ್ಕಾರವನ್ನು ಒಳಗೊಂಡಿರುತ್ತದೆ. ಬೆಂಗಳೂರಿನ ರೇಸ್ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನ ಸಭಾಗೃಹದಲ್ಲಿ ಏಪ್ರಿಲ್ 6ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಗೋಯೆಂಕಾ ತಿಳಿಸಿದ್ದಾರೆ. ಗೋಯೆಂಕಾ ಕನ್ನಡ ಸಾಹಿತ್ಯ ಪ್ರಶಸ್ತಿಗೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಹಾಗೂ ಹಿಂದಿ ಸಾಹಿತ್ಯ ಪ್ರಶಸ್ತಿಗೆ ಆರ್. ಆರ್. ನಿಡಗುಂದಿ ಮತ್ತು ಸಾಹಿತ್ಯ ಹೊರತುಪಡಿಸಿ ಅನ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡುವ ದಕ್ಷಿಣ ಧ್ವಜಧಾರಿ ಪ್ರಶಸ್ತಿಗೆ ಸಾಮಾಜಿಕ ಸೇವೆ ಮಾಡುತ್ತಿರುವ ಡಾ. ಹೇಮಾವತಿ ವಿ. ಹೆಗ್ಗಡೆ ಅವರನ್ನು ಆಯ್ಕೆ ಮಾಡಲಾಗಿದೆ.