ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮತದಾನದ ಜಾಗೃತಿ ಜಾಥಾಕ್ಕೆ ಚಾಲನೆ

Lingaraj Badiger
Updated On : 16 Mar 2014, 12:22 pm

ಕ.ಪ್ರ. ವಾರ್ತೆ  ಯಾದಗಿರಿ  ಮಾ.15
ಏ.17 ರಂದು ಲೋಕಸಭಾ ಚುನಾವಣೆ ನಡೆಯಲಿದ್ದು, ಇದೇ ಮಾ.16ರೊಳಗೆ ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವುದರ ಜತೆಗೆ ಈ ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸಬೇಕೆಂದು ಸ್ವೀಪ್ ಮತದಾನ ಜಾಗೃತಿ ವೀಕ್ಷಕ ಮಧುನಾಗ್ ಕರೆ ನೀಡಿದ್ದಾರೆ.
  ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರ ಜಿಲ್ಲಾ ಸ್ವೀಪ್ ಸಮಿತಿಯಿಂದ ಆಯೋಜಿಸಲಾಗಿದ್ದ ಮತದಾರರ ನೊಂದಣಿ ಮತ್ತು ಮತದಾನ ಮಾಡುವ ಕುರಿತ ವಿದ್ಯಾರ್ಥಿಗಳ, ಅಂಗನವಾಡಿ ಕಾರ್ಯಕರ್ತೆಯರ, ಆಶಾ ಕಾರ್ಯಕರ್ತೆಯರ ಬೃಹತ್ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿ ಅರ್ಹ ನಾಗರಿಕರು ಮತ ಚಲಾಯಿಸುವಂತಾಗಬೇಕು. ಶೇ. 100 ರಷ್ಟು ಮತ ಚಲಾವಣೆಯಾಗಬೇಕು. ಇದಕ್ಕಾಗಿ ಮತದಾರರು ಚುನಾವಣಾ ಪ್ರಕ್ರಿಯೆಗಳಲ್ಲಿ ಸಂಪೂರ್ಣ ಪಾಲ್ಗೊಳ್ಳಬೇಕೆಂದ ಅವರು ಮತವನ್ನು ತಪ್ಪದೇ ಚಲಾಯಿಸಿ ಯೋಗ್ಯ ವ್ಯಕ್ತಿಗಳನ್ನು ಆಯ್ಕೆ ಮಾಡುವ ಕುರಿತು ಪ್ರೇರೇಪಿಸಲು ಮತದಾನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
  ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದ ಜಾಗೃತಿ ಜಾಥಾವು ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಹೊರಟು ಸುಭಾಶ್ ಸರ್ಕಲ್, ಲಕ್ಷ್ಮಿ ನಗರ, ಬಸವೇಶ್ವರ ನಗರ, ಪದವಿ ಕಾಲೇಜು ಮೂಲಕ ಹಾಗೂ ನಗರದ ಪ್ರಮುಖ ಸ್ಥಳಗಳಲ್ಲಿ ಸಾಗಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಮುಕ್ತಾಯಗೊಂಡಿತು.
  ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಚುನಾವಣಾಧಿಕಾರಿಗಳಾದ ಎಫ್. ಆರ್ ಜಮಾದಾರ್, ಜಿಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಆಗಿರುವ ಎಸ್. ಎ. ಜಿಲಾನಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಲ್ಲಿಕಾರ್ಜುನ್ ಮುಕ್ಕಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ತಳವಾರ್, ಜಿಪಂ. ಸಹಾಯಕ ಯೋಜನಾ ಅಧಿಕಾರಿಗಳಾದ ಸತೀಶ ಕುಮಾರ, ಸಾ.ಶಿ. ಇಲಾಖೆಯ ಪ್ರಭಾರ ಉಪನಿರ್ದೇಶಕರಾದ ನಾಸಿರುದ್ದೀನ್, ಜಿಲ್ಲಾ ಪಂಚಾಯತ ಎನ್‌ಆರ್‌ಡಿಎಂಎಸ್ ಯೋಜನಾ ಅಧಿಕಾರಿಗಳಾದ ಸಿದ್ದಾರೆಡ್ಡಿ, ಯುವಜನ ಸೇವಾ ಮತ್ತು ಕ್ರೀಡಾ ಅಧಿಕಾರಿ ಸೂಗಪ್ಪ ಪಾಟೀಲ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಶಹಾಪುರ ವರದಿ: ಯಶಸ್ವಿ ಪ್ರಜಾಪ್ರಭುತ್ವಕ್ಕೆ ಮತದಾನದ ಹಕ್ಕು ಬಳಸಿ. ಮತದಾನ ದೇಶಾಭಿಮಾನದ ಸಂಕೇತ ವೆಂಬ ಘೋಷಣೆಯೊಂದಿಗೆ ಶನಿವಾರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನಡೆದ ವಿದ್ಯಾರ್ಥಿಗಳ ಮತ್ತು ಅಧಿಕಾರಿ ವರ್ಗದ ಮತದಾನ ಅರಿವು ಜಾಗೃತಿ ಜಾಥಾ ಎಲ್ಲರ ಗಮನ ಸೆಳೆಯಿತು.
  ತಾಲೂಕಾ ಆಡಳಿತ ಸ್ವೀಪ್ ಸಮಿತಿ ಆಶ್ರಯದಲ್ಲಿ ಪಟ್ಟಣದ ಬಾಲಕರ ಕಾಲೇಜಿನಲ್ಲಿ ಆಯೋಜಿತವಾಗಿದ್ದ ಜಾಥಾಕ್ಕೆ ಚುನಾವಣಾ ಅಧಿಕಾರಿಗ ರಾಮನಗೌಡ ಮತ್ತು ತಹಶೀಲ್ದಾರ ಡಿ. ವೈ. ಪಾಟೀಲ, ಸ್ವೀಪ್ ಸಮಿತಿ ಅಧ್ಯಕ್ಷರಾದ ನರಸಿಂಗರಾವ ಮುತಾಲಿಕ ಚಾಲನೆ ನೀಡಿದರು.  ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು  ಕರ್ತವ್ಯ. ಮತದಾನ ಅತ್ಯಂತ ಮುಖ್ಯವಾದದ್ದು. ಯಾವುದೇ ಆಮಿಷಕ್ಕ ಒಳಗಾಗದೆ ನಿರ್ಭಯದಿಂದ ಮತ ಚಲಾಯಿಸಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡಬೇಕು ಎಂದು ಅವರು ಹೇಳಿದರು.  
  ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ರಾಯಪ್ಪರಡ್ಡಿ, ಸಿಡಿಪಿಓ ಥಾಮಸ್ ದೊಡ್ಮನಿ, ಜಿಪಂ.ನ ಭೀಮರಾವ, ಪಿಐ ನ್ಯಾಮಗೌಡರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಶಿಕ್ಷಣ ಇಲಾಖೆಯ ಸಂಯೋಜಕರು, ಮುಖ್ಯಗುರುಗಳು, ವಿದ್ಯಾರ್ಥಿಗಳು, ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಗುರುಮಠಕಲ್ ವರದಿ: ಏ.17ರಂದು ಲೋಕಸಭಾ ಚುನಾವಣೆ ನಡೆಯಲಿದ್ದು, ಇದೇ ಮಾ. 16ರೊಳಗೆ ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸುವುದರ ಜತೆಗೆ ಈ ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸಬೇಕೆಂದು ವಿಶೇಷ ತಹಸೀಲ್ದಾರ ಏಜಾಜುಲ್ ಹಕ್ ಹೇಳಿದ್ದಾರೆ. ಮತದಾನ ಜಾಗೃತಿಗಾಗಿ ಸ್ವೀಪ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
  ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿ ಅರ್ಹ ನಾಗರಿಕರು ಮತ ಚಲಾಯಿಸುವಂತಾಗಬೇಕು. ಶೇ 100 ರಷ್ಟು ಮತ ಚಲಾವಣೆಯಾಗಬೇಕು. ಇದಕ್ಕಾಗಿ ಮತದಾರರು ಚುನಾವಣಾ ಪ್ರಕ್ರಿಯೆಗಳಲ್ಲಿ ಸಂಪೂರ್ಣ ಪಾಲ್ಗೊಳ್ಳಬೇಕೆಂದ ಅವರು ಮತವನ್ನು ತಪ್ಪದೇ ಚಲಾಯಿಸಿ ಯೋಗ್ಯ ವ್ಯಕ್ತಿಗಳನ್ನು ಆಯ್ಕೆ ಮಾಡುವ ಕುರಿತು ಪ್ರೇರೇಪಿಸಲು ಮತದಾನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.
  ಪಟ್ಟಣ ಪಂಚಾಯತಿ ಕಾರ್ಯಲಯದಿಂದ ಪ್ರಾರಂಭವಾದ ಜಾಥಾ, ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಂಚರಿಸಿ ಮತದಾನದ ಬಗ್ಗೆ, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿತು. ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ಯೆಯರು, ಆಶಾ ಕಾರ್ಯಕರ್ತೆಯರು ಜಾಥಾದಲ್ಲಿ ಭಾಗವಹಿಸಿದ್ದರು. ಪಟ್ಟಣ ಪಂಚಾಯತಿ ಸಿಬ್ಬಂದಿ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement