ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶೇಂಗಾ ಖರೀದಿ ಕೇಂದ್ರಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ

Lingaraj Badiger
Updated On : 16 Mar 2014, 12:22 pm

ಕನ್ನಡಪ್ರಭ ವಾರ್ತೆ  ಸುರಪುರ  ಮಾ.15
ಶೇಂಗಾ ಖರೀದಿ ಕೇಂದ್ರ ಆರಂಭ ಹಾಗೂ ತೂಕ ಮಾಪನದಲ್ಲಿನ ಮೋಸ ಮತ್ತು ಬಿಳಿ ಚೀಟಿ(ನಕಲಿ) ನೀಡುವುದನ್ನು ವಿರೋಧಿಸಿ ವಿವಿಧ ಬೇಡಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘವು ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ನೇತೃತ್ವದಲ್ಲಿ ನೂರಾರು ರೈತರು ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಧರಣಿ ನಡೆಸಿದರು.
  ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ಮಾತನಾಡಿ, ತಾಲೂಕಿನಾದ್ಯಂತ ಕಳೆದೆರಡು ವರ್ಷಗಳಿಂದ ಕಾಲುವೆಯ ನೀರಿನ ಕೊರತೆ, ಸರಿಯಾಗಿ ಮಳೆಯಾಗದೆ ಬರಗಾಲ ಆವರಿಸಿ ರೈತ ತತ್ತರಿಸಿ ಹೋಗಿದ್ದಾನೆ. ಈ ಬಾರಿ ಹಿಂಗಾರು ಮಳೆ ಉತ್ತಮವಾಗಿ ಸುರಿದು ರೈತರ ಕೈಹಿಡಿಯುವ ಭರವಸೆ ನೀಡಿತ್ತು. ಈ ಹಿನ್ನೆಲೆಯಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಶೇಂಗಾ ಬೆಳೆಯನ್ನು ಬೆಳೆದಿದ್ದರು. ಆದರೆ ಮಾರುಕಟ್ಟೆಯಲ್ಲಿ ಬೆಲೆಯಿಲ್ಲದೆ ರೈತ ಸಂಕಷ್ಟಕ್ಕೆ ಗುರಿಯಾಗಿದ್ದಾನೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ರಾಜಿನಾಮೆಗೆ ಆಗ್ರಹ: ಶೇಂಗಾ ಬೆಳೆಗೆ ಸರ್ಕಾರ 4,200 ಬೆಂಬಲ ಬೆಲೆ ಘೋಷಣೆ ಮಾಡಿದೆ. ಆದರೆ ಎಲ್ಲಿಯೂ ಖರೀದಿ ಕೇಂದ್ರಗಳನ್ನು ಆರಂಭಿಸದೆ ರೈತರ ಬದುಕಿನೊಂದಿಗೆ ಚಕ್ಕಂದ ವಾಡುತ್ತಿದೆ. ಸಾಲ ಮಾಡಿಕೊಂಡ ರೈತ ಮಾರುಕಟ್ಟೆಯಲ್ಲಿ ಬೆಲೆಯಿಲ್ಲದೆ ಅಗ್ಗದ ದರಕ್ಕೆ ಬೆಳೆ ಮಾರಿ ನಷ್ಟ ಅನುಭವಿಸುತ್ತಿದ್ದಾನೆ. ರೈತನ ಗೋಳು ಕಣ್ಣಿಗೆ ಕಂಡರೂ ಕಾಣದಂತೆ ವರ್ತಿಸುವ ಕುರುಡು ಸರ್ಕಾರಕ್ಕೆ ಅಧಿಕಾರದಲ್ಲಿರಲು ನೈತಿಕ ಹಕ್ಕಿಲ್ಲ. ರೈತರನ್ನು ಕಡೆಗಣಿಸುವ ಮುಖ್ಯಮಂತ್ರಿ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು.
  ಎಪಿಎಂಸಿಯಲ್ಲಿ ವ್ಯಾಪಾರಿಗಳು ತೂಕದ ವಿದ್ಯುನ್ಮಾನ ಯಂತ್ರಗಳನ್ನು ಉಪಯೋಗಿಸುತ್ತಿಲ್ಲ. ಇದರಿಂದ ತೂಕದಲ್ಲಿ ರೈತರಿಗೆ ಅನ್ಯಾಯವಾಗುತ್ತಿದೆ. ಖರೀದಿದಾರರು ಬೆಳೆ ಖರೀದಿಗೆ ಅಧಿಕೃತ ರಸೀದಿ ನೀಡದೆ ಬಿಳಿಚೀಟಿ ನೀಡಿ ಮೋಸ ಮಾಡುತ್ತಿದ್ದಾರೆ. ವಿನಾಕಾರಣ ಪ್ರತಿ ಚೀಲಕ್ಕೂ ಸೂಟ್ ಮುರಿದು ರೈತರಿಗೆ ನಷ್ಟವನ್ನುಂಟು ಮಾಡುತ್ತಿದ್ದಾರೆ. ಶೇ. 3ರಷ್ಟು ಹಣವನ್ನು ಕಮೀಷನ್ ರೂಪದಲ್ಲಿ ಪಡೆಯಲಾಗುತ್ತಿದೆ ಎಂದು ಹರಿಹಾಯ್ದರು.
ರಸ್ತೆ ತಡೆ ಚಳವಳಿ ಎಚ್ಚರಿಕೆ: ಆಲಿಕಲ್ಲು ಮಳೆಯಿಂದ ಹಾನಿಗೊಳಗಾದ ರೈತರ ಬೆಳೆಗೆ ಹಾಗೂ ಮೃತಪಟ್ಟ ಜಾನುವಾರಗಳಿಗೆ ಸೂಕ್ತ ಪರಿಹಾರ ನೀಡಬೇಕು. ಶೇಂಗಾ ಖರೀದಿ ಕೇಂದ್ರ ಸ್ಥಾಪಿಸಬೇಕು. ಒಂದು ವಾರದಲ್ಲಿ ಬೇಡಿಕೆ ಈಡೇರದಿದ್ದಲ್ಲಿ ಮಾ.21ರಂದು ರಸ್ತಾರೋಕೋ ಚಳವಳಿ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
  ಮನವಿ ಸ್ವೀಕರಿಸಿದ ತಹಸೀಲ್ದಾರ್ ಅರುಣಕುಮಾರ ಕುಲಕರ್ಣಿ ಮಾತನಾಡಿ, ಎಪಿಎಂಸಿಯಲ್ಲಿ ತಕ್ಷಣವೇ ವರ್ತಕರು ಬಿಳಿ ಚೀಟಿಗಳನ್ನು ರದ್ದುಪಡಿಸಿ ಅಧಿಕೃತ ರಸೀದಿಗಳನ್ನು ನೀಡುವಂತೆ ವರ್ತಕರಿಗೆ ಸೂಚಿಸಬೇಕು. ಬಿಳಿ ಚೀಟಿ ನೀಡುವ ವರ್ತಕರ ಮೇಲೆ ಪ್ರಕರಣ ದಾಖಲಿಸುವಂತೆ ಹಾಗೂ ವಿದ್ಯುನ್ಮಾನ ಯಂತ್ರ ಬಳಸುವಂತೆ ಎಪಿಎಂಸಿ ಕಾರ್ಯದರ್ಶಿಗೆ ಆರ್.ಕೆ. ಕಿತ್ತೂರುಗೆ ಆದೇಶಿಸಿದರು.
  ರೈತ ಮುಖಂಡರಾದ ಎಸ್.ಎಂ. ಸಾಗರ, ಗೌರಮ್ಮ ಪಾಟೀಲ್ ಗುಲ್ಬರ್ಗ, ಮುದ್ದಣ್ಣ ಅಮ್ಮಾಪುರ, ಬಸವರಾಜ ಸೂಗೂರು, ನಂದಣಪ್ಪ ವಾರಿ, ಪರಮಣ್ಣ ದೊರೆ, ಹಣಮಂತ್ರಾಯ ಮಡಿವಾಳ, ಬಸವರಾಜ ಐಕೂರು, ರಾಮಣ್ಣ ಕಟ್ಟಿಮನಿ, ಶಿವನಗೌಡ ಸಾಲವಾಡಗಿ, ಸಂಗಯ್ಯ ರುಕ್ಮಾಪುರ, ರಾಮುನಾಯಕ ಕುಪಗಲ್, ಜೆಟ್ಟೆಪ್ಪಗೌಡ ಬೆಂಚಿಗಡ್ಡಿ, ಬಸವರಾಜ ದೊರೆ, ದೇವಿಂದ್ರಪ್ಪ ಟೇಲರ್, ತಿಪ್ಪಣ್ಣ ಜಂಪಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement