ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಯಾದಗಿರಿ ಜಿಲ್ಲಾದ್ಯಂತ ಹೋಳಿ.. ಹೋಳಿ...

Rashmi Kasaragodu
Updated On : 18 Mar 2014, 12:39 pm

ಯಾದಗಿರಿ: ಜಿಲ್ಲಾದ್ಯಂತ ಸೋಮವಾರ ಹೋಳಿ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
  ಹುಣಸಗಿ ಸಮೀಪದ ವಜ್ಜಲ್ ಗ್ರಾಮದಲ್ಲಿ ಚಿಣ್ಣರು ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.
ಚಿಕ್ಕ ಮಕ್ಕಳು ಬೆಳಗ್ಗೆಯಿಂದಲೇ ಬಣ್ಣ ಆಟದಲ್ಲಿ ತೊಡಗಿಸಿಕೊಂಡು ಸಂಭ್ರಮಿಸಿದರು, ಪುಟ್ಟಪುಟ್ಟ ಮಕ್ಕಳು ಬಣ್ಣ ಎರಚುವುದರೊಂದಿಗೆ ಸಂತೋಷದಿಂದ ಕೇಕೆ ಹಾಕುತ್ತ ಜನತೆಗೆ ಬಣ್ಣ ಎರಚಿ ಸಂತೋಷಪಟ್ಟರು.
ಕೆಲವು ಗ್ರಾಮಗಳಲ್ಲಿ ರವಿವಾರ ರಾತ್ರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಾಮದಹನ ಮಾಡಿ ರಾತ್ರಿಯಿಂದಲೇ ಬಣ್ಣದ ಆಟದಲ್ಲಿ ತೊಡಗಿರುವುದು ಕಂಡು ಬಂದಿತು. ಗ್ರಾಮದಲ್ಲಿ ಯುವಕರ ದಂಡು ಹಲಗೆ ಮೆರವಣೆಗೆಯೊಂದಿಗೆ ಮನೆಮನೆಗೆ ತೆರಳಿ ಬಣ್ಣದಾಟದಲ್ಲಿ ತೊಡಗಿರುವುದು ಕಂಡು ಬಂದಿತು. ಹಿರಿಯರು, ಕಿರಿಯರು ಒಬ್ಬರಿಗೊಬ್ಬರು ಬಣ್ಣ ಹಾಕುವ ಮೂಲಕ ಹೋಳಿ ಹಬ್ಬವನ್ನು ಆಚರಿಸಿದರು. ಹೋಳಿ ಹಬ್ಬದ ನಿಮಿತ್ತ ಕೆಲ ಗ್ರಾಮಗಳಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಮಾಡಿ ವ್ಯಾಪಾರಸ್ಥರು ಬಣ್ಣದಾಟದಲ್ಲಿ ತೊಡಗಿದ್ದರು.
ಸುರಪುರ: ರಂಗಂಪೇಟೆ, ತಿಮ್ಮಾಪುರ, ಹಸನಾಪುರ, ಸುರಪುರದಲ್ಲಿ ಸೋಮವಾರ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.  ಭಾನುವಾರ ಸುರಪುರದಲ್ಲಿ ನಾಲ್ಕು ಕಡೆ ಹಾಗೂ ತಿಮ್ಮಾಪುರದಲ್ಲಿ 2 ಕಡೆ ಕಾಮದಹನ ಮಾಡಲಾಯಿತು.
ಆದರೆ ಈಗ ಪ್ರತಿ ವರ್ಷ, ದಿನದಿಂದ ದಿನಕ್ಕೆ ಬಣ್ಣದ ಆಟದ ಕಡೆಗಿನ ಶ್ರದ್ಧೆ  ಕ್ಷೀಣಿಸುತ್ತಾ ಬರುತ್ತಿರುವುದರಿಂದ ಎರಡು ದಿನಗಳವರೆಗೆ ಈ ಹಬ್ಬ ಸೀಮಿತವಾಗಿದೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಹಾಗೂ ಚಿಣ್ಣರು ಬಣ್ಣದ ಓಕುಳಿಯಲ್ಲಿ ತೊಡಗಿದ್ದು ಕಂಡುಬಂತು.
ಪಟ್ಟಣದ ತುಂಬ ಯುವಕರು, ಚಿಣ್ಣರು ಪಿಚಕಾರಿ ಬಾಟಲಿಗಳನ್ನು ಹಿಡಿದು ಬಣ್ಣ ಆಡಿದರು. ಕೆಲವೆಡೆ ಅಣಕು ಶವ ಯಾತ್ರೆಗಳು ಜನರ ಮನಸೂರೆಗೊಂಡವು. ಪಟ್ಟಣದ ವಿವಿಧ ಗಲ್ಲಿಗಲ್ಲಿಗಳಲ್ಲಿ ಯುವಕರು ಬಣ್ಣದ ಬಾಟಲಿ ಹಿಡಿದು ಕೇಕೆ ಹಾಕುತ್ತಾ ತಮ್ಮ ಗೆಳೆಯರಿಗೆ ಬಣ್ಣ ಹಾಕಿ ಕುಣಿದು ಕುಪ್ಪಳಿಸಿದರು. ಸ್ವಾತಂತ್ರ್ಯ ಸೇನಾನಿ ದಿ. ನಾಲ್ವಡಿ ರಾಜಾ ವೆಂಕಟಪ್ಪ ನಾಯಕನ ವೀರ ಯಶೋಗಾತೆ ಕುರಿತು ದುಂದುಮೆ ಪದಗಳನ್ನು ಹಾಡಿ ಸಂತಸ ಪಟ್ಟರು. ಎಲ್ಲೆಂದರಲ್ಲಿ ಲಬೋ.. ಲಬೋ ಎಂಬ ಧ್ವನಿ ಕೇಳಿ ಬರುತಿತ್ತು.
ಕಾಮದಹನ: ಇಲ್ಲಿನ ಲಕ್ಷ್ಮೀನಾರಾಯಣ ಮಂದಿರದ ಹತ್ತಿರದಲ್ಲಿ ಹೋಳಿ ಹಬ್ಬದ ಅಂಗವಾಗಿ ಮಾರ್ವಾಡಿ ಸಮುದಾಯದ ಯುವಕರು ಶ್ರದ್ಧಾಭಕ್ತಿಯಿಂದ ಭಾನುವಾರ ರಾತ್ರಿ ಕಾಮದಹನ ಮಾಡಿ ಸಂಭ್ರದಿಂದ ಹೋಳಿ ಹಬ್ಬ ಆಚರಣೆ ಮಾಡಿದರು.
ರಾತ್ರಿ 9 ಗಂಟೆಗೆ ಕಾಮನ ಚಿತ್ರಪಟ ಬಿಡಿಸಿ ಕಟ್ಟಿಗೆಯ ಮಧ್ಯೆ ಇಟ್ಟು ರಾತ್ರಿ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಿ ದಹನ ಮಾಡಲಾಯಿತು.
ಕಾಮದಹನದ ಬೂದಿಯನ್ನು ಕೆಲವರು ಮನೆಗೆ ತೆಗೆದುಕೊಂಡು ಹೋದರು. ಕೆಲ ಮಕ್ಕಳು ಬೆಂಕಿಯಲ್ಲಿ ಗೆಣಸು, ಶೇಂಗಾ, ಕಡಲೆ, ಉಳ್ಳಾಗಡ್ಡಿಯನ್ನು ಸುಟ್ಟು ತಿಂದರು. ನಂತರ ಚಿಕ್ಕ ಮಕ್ಕಳು ಪಿಚಕಾರಿ ಹಿಡಿದು ಬಣ್ಣದಲ್ಲಿ ಬೂದಿ ಬೆರಸಿ ಬಣ್ಣದ ಓಕುಳಿಯಾಡಿದರು.
ಕೆಂಭಾವಿ:ಹೋಳಿ ಹಬ್ಬವನ್ನು ಪಟ್ಟಣದಲ್ಲಿ ಸೋಮವಾರ ಶಾಂತಿಯುತವಾಗಿ ಆಚರಿಸಲಾಯಿತು ಹುಣ್ಣಿಮೆಯ ದಿನವಾದ ಭಾನುವಾರ ರಾತ್ರಿ ಉತ್ತರಾದಿ ಮಠದ ಬೀದಿಯಲ್ಲಿ ನಡೆದ ಕಾಮದಹನ ಕಾರ್ಯಕ್ರಮ ಎಲ್ಲರ ಮನಸೂರೆಗೊಂಡಿತು.  ನಂತರ ಸೋಮವಾರ ಬೆಳಿಗ್ಗೆಯಿಂದಲೇ ಯುವಕರು, ಮಕ್ಕಳು, ಹಿರಿಯರು ಗುಂಪುಗುಂಪಾಗಿ ಬಣ್ಣದಾಟದಲ್ಲಿ ನಿರತರಾಗಿದ್ದರು. ಉತ್ತರಾದಿ ಮಠ ಬೀದಿ, ಸಂಜೀವ ನಗರ, ಬಜಾರ, ಬಸವೇಶ್ವರ ವೃತ್ತ, ಸೊನ್ನದ ಬಡಾವಣೆ, ಹನುಮನ ಚೌಕ, ಯುಕೆಪಿ ಕ್ಯಾಪ್, ಹಿಲ್‌ಟಾಪ್ ಕಾಲೋನಿ ಸೇರಿದಂತೆ ಹಲವಾರು ಕಡೆಗಳಲ್ಲಿ ಯುವಕರ ಗುಂಪು ಕೇಕೆ ಹಾಕುತ್ತಾ ಒಬ್ಬರಿಗೊಬ್ಬರು ಬಣ್ಣ ಎರಚುತ್ತಾ ಕುಣಿದು ಕುಪ್ಪಳಿಸಿದರು.  ರಸ್ತೆ ಬದಿಯಲ್ಲಿ ನಿಂತು  ಹೋಗುವ ಜನರಿಗೆ ಬಣ್ಣ ಎರಚಿ ಸಂತಸಪಟ್ಟರು. ಪಿಎಸ್‌ಐ ಸುನಿಲ ಮೂಲಿಮನಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.
ಶಹಾಪುರ:ಪಟ್ಟಣದಾದ್ಯಂತ ಸೋಮವಾರ ಹೋಳಿಹಬ್ಬವನ್ನು ಸಂಪ್ರದಾಯಬದ್ಧವಾಗಿ ಆಚರಿಸಲಾಯಿತು. ವಿಶೇಷವಾಗಿ ಬಣ್ಣವಾಡಿದ ನಂತರವೇ ಹೋಳಿ ಸುಡುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಬೆಳಗ್ಗಿನಿಂದಲೇ ಚಿಕ್ಕ ಮಕ್ಕಳಾದಿಯಾಗಿ, ಯುವಕರು, ಹಿರಿಯರು ಖುಷಿಯಿಂದ ರಂಗಿನಾಟದಲ್ಲಿ ತೊಡಗಿದ್ದರು. ಪಟ್ಟಣದ ಹಳೆಪೇಟೆಯಲ್ಲಿ ಮೊದಲಿನಿಂದಲೂ, ಕಾಮನಿಗೆ ಸಂಪ್ರದಾಯಕ್ಕನುಗುಣವಾಗಿ ಪೂಜೆ, ಹೋಳಿಗೆ ನೈವೇದ್ಯ ಸಮರ್ಪಣೆಯಾದ ನಂತರವೇ ಮಧ್ಯಾಹ್ನದ ಸುಮಾರಿಗೆ ಕಾಮದಹನವಾಗುತ್ತದೆ. ಯುವಕರು ಮನೆಮನೆಗೆ ಹೋಗಿ ಬಣ್ಣಹಾಕಿ ಸಂಗ್ರಹಿಸಿದ ಹಣದಿಂದ ಒಂದೆಡೆ ಸೇರಿ ಸರ್ವರಿಗೂ ಉಪಾಹಾರದ ವ್ಯವಸ್ಥೆ ಮಾಡುವುದು ಪರಸ್ಪರ ಬಾಂಧ್ಯವಕ್ಕೆ ಸಾಕ್ಷಿಯಾಗಿದ್ದು ಸಾಂಪ್ರಾದಾಯಿಕತೆ ಉಳಿಸಿ ಬೆಳೆಸುವತ್ತ ಇದು ನೆರವಾಗುತ್ತದೆ.
ಗುರುಮಠಕಲ್: ಗುರುಮಠಕಲ್ ಪಟ್ಟಣದಲ್ಲಿ ಮಕ್ಕಳು ಹಾಗೂ ಯುವಕರು ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ರವಿವಾರ ರಾತ್ರಿ ಕಾಮದಹನದ ನಂತರ ಬೆಳ್ಳಿಗೆ ಮಕ್ಕಳು, ಯುವಕರು ತಮ್ಮ ಸ್ನೇಹ್ನಿತರ ಜತೆಗೂಡಿ ಹೋಳಿ ಹಬ್ಬದ ಸಂತೋಷವನ್ನು ಹಂಚಿಕೊಂಡು ಸಂಭ್ರಮಿಸಿದರು ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೋಲಿಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement