ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ರಂಗಿನೋಕುಳಿ

Rashmi Kasaragodu
Updated On : 18 Mar 2014, 12:38 pm

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಮಾ.17
ಹೋಳಿ ಹಬ್ಬದ ನಿಮಿತ್ತ ಜಿಲ್ಲೆಯ ಜನತೆ ಹೋಳಿ ಬಣ್ಣಗಳಲ್ಲಿ ಮಿಂದೆದ್ದರು. ಸೋಮವಾರ ಬೆಳಗಿನಿಂದ ಸಂಜೆಯವರೆಗೂ ಮಹಿಳೆಯರು, ಮಕ್ಕಳು ಮೊದಲ್ಗೊಂಡು ಆಬಾಲವೃದ್ಧರಾದಿಯಾಗಿ ಎಲ್ಲರೂ ಬಣ್ಣದೋಕುಳಿಯಲ್ಲಿ ಮುಳುಗಿದ್ದರು.
  ಯುವಕರಂತೂ ಬಣ್ಣದ ಬಂಡಿಗಳನ್ನು ಮಾಡಿಕೊಂಡು ದಾರಿಯುದ್ದಕ್ಕೂ ಸಾಗಿ ಬಂಡಿಗೆ ಎದುರಾಗುವ ಎಲ್ಲರ ಮೇಲೆ ಬಣ್ಣದೋಕುಳಿ ಎರಚುತ್ತ ಸಂಭ್ರಮಿಸಿದರೆ ಬಡಾವಣೆಗಳಲ್ಲಿ ಮಕ್ಕಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಗುಂಪಾಗಿ ಬಂದು ಪರಸ್ಪರ ಬಣ್ಣ ಎರಚಿ ಆನಂದಪಟ್ಟರು.
  ರಿಂಗ್ ರಸ್ತೆಯ ಅಂಚಲ್ಲಿರುವ ರವೀಂದ್ರನಾಥ ಟ್ಯಾಗೋರ್ ನಗರ, ಓಝಾ ಬಡಾವಣೆ, ಸರಸ್ವತಿ, ವಿವೇಕಾನಂದ ನಗರದಲ್ಲಿಯೂ ಬಡಾವಣೆಯ ಮಹಿಳೆಯರು ಭಾನುವಾರದ ಕಾಮ ದಹನದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸೋಮವಾರದ ಬಣ್ಣದೋಕುಳಿಯಲ್ಲಿಯೂ ಈ ಬಡಾವಣೆಗಳಲ್ಲಿ ಮಹಿಳೆಯರ ತಂಡಗಳು ಸಕ್ರಿಯವಾಗಿರುವ ಮೂಲಕ ಸರ್ವರ ಗಮನ ಸೆಳೆದರು.
  ಇದಲ್ಲದೆ ಬ್ರಹ್ಮಪುರ, ಗಂಗಾ ನಗರ ಬಡಾವಣೆಯಲ್ಲಿ ಪಾಲಿಕೆ ಸದಸ್ಯೆ ರಾಜೇಶ್ವರಿ ನೇತೃತ್ವದಲ್ಲಿ ಬಡಾವಣೆಯ ಮಹಿಳೆಯರು ಬಣ್ಣದಕೋಳಿಯಾಡಿ ಸಂಭ್ರಮಿಸಿದರು. ಬಡಾವಣೆಯ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು ವಿಶೇಷವಾಗಿತ್ತು.
ಬಣ್ಣದಲ್ಲೇ ತೊಯ್ದುತೊಪ್ಪೆಯಾದ್ರು ಬೆಳಮಗಿ: ಬಿಜೆಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಮಾಜಿ ಮಂತ್ರಿ ರೇವು ನಾಯಕ ಬೆಳಮಗಿ ಇಲ್ಲಿನ ಸರಾಫ್ ಬಜಾರ್ ಬಡಾವಣೆಯಲ್ಲಿನ ಗಣಪತಿ ಮಂದಿರದ ಅಂಗಳದಲ್ಲಿ ರಾಜಸ್ಥಾನಿ ಸೇವಾ ಸಂಘದವರು ಆಯೋಜಿಸಿದ್ದ ಬಣ್ಣದೋಕುಳಿಯಲ್ಲಿ ಭಾಗವಹಿಸಿ ಬಹುಕಾಲ ಹಾಡು, ಕುಣಿತಗಳಲ್ಲಿ ತೊಡಗಿದ್ದರು.
  ಲಂಬಾಣಿ ಸಮುದಾಯದ ಮಹಿಳೆಯರು ಈ ಆಚರಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರು. ರೇವು ನಾಯಕರಿಗಂತೂ ಇಲ್ಲಿ ಬಣ್ಣದಲ್ಲೇ ಮುಳುಗಿಸಲಾಯಿತು. ಇದೇ ಸಂದರ್ಭದಲ್ಲಿ ಸಂಗೀತದ ತಾಳಕ್ಕೆ ತಕ್ಕಂತೆ ರೇವು ಕುಣಿದು ಕುಪ್ಪಳಿಸಿದರು.
  ಈ ಮಂದಿರದಲ್ಲಿ ಬಣ್ಣದ ಗಡಿಗೆ ಒಡೆಯುವುದು, ಕಣ್ಣು ಕಟ್ಟಿಕೊಂಡು ಹಲವು ಮೋಜಿನ ಆಟಗಳಲ್ಲಿ ಭಾಗವಹಿಸುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಇವುಗಳಲ್ಲಿ ಬಹುತೇಕ ಸ್ಪರ್ಧೆಗಳಲ್ಲಿ ರೇವು ನಾಯಕರು ಭಾಗವಹಿಸುವ ಮೂಲಕ ನೆರೆದವರಿಗೆ ರಂಜನೆ ನೀಡಿದರು.
  ನಂತರ ಮಾತನಾಡಿದ ಬೆಳಮಗಿ, ಬಣ್ಣದ ಹಬ್ಬ ಸರ್ವರಿಗೂ ಶಾಂತಿ ತರಲಿ ಎಂದರಲ್ಲದೆ ಚುನಾವಣೆಗೆ ತಾವು ನಿಂತಿದ್ದು, ಪ್ರಚಾರಕ್ಕೆ ಇದಕ್ಕಿಂತ ಉತ್ತಮ ವೇದಿಕೆ ಎಲ್ಲಿ ಸಿಗುತ್ತದೆ ಎಂದರು. ಬರುವ ಲೋಕಸಭೆ ಚುನಾವಣೆಯಲ್ಲಿ ಎಲ್ಲರ ಬೆಂಬಲ ಕೋರಿದರು. ಶಹಾಬಜಾರ್, ಬ್ರಹ್ಮಪುರ, ಲಾಲಗೇರಿ ಕ್ರಾಸ್, ಸುಭಾಸ ಚೌಕ್, ಕೊಂಡೇದ ಗಲ್ಲಿ, ಗೋವಾ ಹೋಟಲ್ ಸರ್ಕಲ್, ಖರ್ಗೆ ಬಂಕ್ ಬಂಡೆ ವೃತ್ತ, ಸರ್ದಾರ್ ಪಟೇಲ್ ವೃತ್ತ, ಮಕ್ತಂಪುರ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಬಣ್ಣದ ಬಂಡಿಗಳ ಮೂಲಕ ಜನ ಹೋಳಿ ರಂಗಿನೋಕುಳಿ ಎರಚಿ ಸಂಭ್ರಮಿಸಿದರು.
ಕನ್ನಡಪ್ರಭ ಸಿಬ್ಬಂದಿ ರಂಗಿನಾಟ: ಗುಲ್ಬರ್ಗ ಆವೃತ್ತಿಯ ಕನ್ನಡಪ್ರಭ ಸಿಬ್ಬಂದಿ ವರ್ಗ ಹೋಳಿ ನಿಮಿತ್ತ ಒಂದೆಡೆ ಸೇರಿ ಬಣ್ಣದೋಕುಳಿಯಲ್ಲಿ ಭಾಗವಹಿಸಿ ಆನಂದಪಟ್ಟಿತು. ದಿನದ ಕಚೇರಿ ಕೆಲಸಗಳಿಗೆ ಬೆಳಗಿನ ಹೊತ್ತು ಕೆಲಸಮಯ ವಿರಾಮ ನೀಡಿದ ಸಿಬ್ಬಂದಿ 2 ಗಂಟೆಗೂ ಹೆಚ್ಚುಕಾಲ ಬಣ್ಣದಾಟದಲ್ಲಿ ಮುಳುಗಿದ್ದರು. ಗೆಳೆಯರೊಂದಿಗೆ ಸೇರಿಕೊಂಡು ತರಹೇವಾರಿ ಬಣ್ಣಗಳನ್ನು ಪರಸ್ಪರರು ಹಚ್ಚಿಕೊಂಡು ನಕ್ಕುನಲಿದರು.
ಪತ್ರಕರ್ತರ ಬಣ್ಣದ ಹರಟೆ
ಇಲ್ಲಿನ ಕಾರ್ಯನಿರತ ಪತ್ರಕರ್ತರ ಸಂಘದಿಂದ ಏರ್ಪಡಿಸಿದ್ದ ಬಣ್ಣದ ಹಬ್ಬ ಹೋಳಿ ಅಂಗವಾಗಿ ಬಣ್ಣದ ಹರಟೆ, ಕವಿಗೋಷ್ಠಿ ಕಾರ್ಯಕ್ರಮಕ್ಕೆ ಹೆಚ್ಚಿನ ಸ್ಪಂದನೆ ದೊರಕಿತ್ತು. ಪತ್ರಕರ್ತರೆಲ್ಲರೂ ಈ ಗೋಷ್ಠಿಯಲ್ಲಿ ಸೇರಿ ತಾವೇ ರಚಿಸಿದ ಕವನಗಳನ್ನು ವಾಚಿಸಿ ಗಮನ ಸೆಳೆದರು. ಇದಲ್ಲದೆ ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ನಗೆಚಟಾಕಿಗಳಿಂದ ಗಮನ ಸೆಳೆದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments