ರಾಜಕೀಯ ರಂಗಿನಾಟ...
ಶಹಾಬಾದ್: ನಗರದಲ್ಲಿ ನಡೆದ ಬಣ್ಣಬಣ್ಣದ ಹೋಳಿ ಹಬ್ಬಕ್ಕೆ ರಾಜಕೀಯ ರಂಗು ಏರಿದ್ದು, ಮಾಜಿ ಸಚಿವ, ಲೋಕಸಭಾ ಅಭ್ಯರ್ಥಿ ರೇವುನಾಯಕ ಬೆಳಮಗಿ ಸುಭಾಷ ಚೌಕನಲ್ಲಿ ಡೋಲು ಬಾರಿಸುವ ಮೂಲಕ ರಂಗಿನಾಟಕ್ಕೆ ಚಾಲನೆ ನೀಡಿದರು.
ಸುಭಾಷಚೌಕ ವೃತ್ತದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಶಾಂತರೆಡ್ಡಿ ದಂಡಗುಲಕರ್, ಮಾಜಿ ಅಧ್ಯಕ್ಷ ಡಾ.ಅಶೋಕ ಜಿಂಗಾಡೆ, ಭೀಮರಾವ ಸಾಳೊಂಕೆ, ಕನಕಪ್ಪ ದಂಡಗುಲಕರ್, ತಾಪಂ ಸದಸ್ಯ ನಿಂಗಣ್ಣ ಹುಳಗೋಳ, ನವನಾಥ ಕುಸಾಳೆ, ಚಂದ್ರಕಾಂತ ಗೊಬ್ಬುರಕರ. ಬಲರಾಮ ಕೋಬಾಳಕರವರು ಬೆಳಮಗಿರಿಗೆ ಸ್ವಾಗಿತಿಸಿದರು. ಕಾರ್ಯಕರ್ತರು ಬೆಳಮಗಿರಿಗೆ ಬಣ್ಣ ಸಿಡಿಸಿ ಸಂಭ್ರಮ ಪಟ್ಟರು. ಬಂಡಿಗಳಲ್ಲಿ ಬಣ್ಣ ಎರಚುತ್ತ ನಗರದ ಪ್ರಮುಖ ರಸ್ತೆಯಲ್ಲಿ ಸಾಗುತ್ತಿದ್ದಂತೆ, ಅವರೊಂದಿಗೆ ಬೆಳಮಗಿ ಸಾಥ್ ನೀಡಿದರು. ಬಣ್ಣದಾಟದೊಂದಿಗೆ, ಯುವಕರು ಕೋಲಾಟ ಆಡಿದರು. ಪ್ರತಿ ವೃತ್ತದಲ್ಲಿ ಮೊಸರು ಗಡಿಗೆಯನ್ನು ಮಾನವ ಪಿರಾಮಿಡ್ ರಚಿಸಿ ಒಡೆಯಲಾಯಿತು. ಮ.12ಕ್ಕೆ ಭಾರತ ಚೌಕನಲ್ಲಿ ರಂಗಿನಾಟ ಮುಕ್ತಾಯವಾಯಿತು.
ಚಿಂಚೋಳಿಯಲ್ಲಿ: ಪಟ್ಟಣ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ಭಾವೈಕ್ಯತೆ ಸಂಕೇತವಾಗಿರುವ ಹೋಳಿ ಹಬ್ಬವನ್ನು ಚಿಕ್ಕ ಮಕ್ಕಳು ಮತ್ತು ಮಹಿಳೆಯರು ಒಬ್ಬರ ಮೇಲೆ ಒಬ್ಬರು ಬಣ್ಣ ಹಾಕಿ ಸಂಭ್ರಮಿಸಿದರು. ವಡ್ಡರ ಗಲ್ಲಿ, ಭವಾನಿ ಗುಡಿ ಹತ್ತಿರ ಚಂದಾಪುರ, ಧನಗರ ಗಲ್ಲಿ, ಮಹಾಂತೇಶ್ವರ ಮಠ, ಬಸ್ ನಿಲ್ದಾಣ ಹತ್ತಿರದಲ್ಲಿ ಬ್ಯಾರೇಲ್‌ಗಳಲ್ಲಿ ವಿವಿಧ ರಂಗು ರಂಗಿನ ಬಣ್ಣವನ್ನು ತುಂಬಿ, ಬಣ್ಣದೋಕುಳಿ ಆಡಿದರು.
ತಾಲೂಕಿನ ಸುಲೇಪೇಟ. ಕೋಡ್ಲಿ, ರಟಕಲ್, ಚಿಮ್ಮನಚೋಡ, ಚಂದನಕೇರಾ, ಚೆಂಗಟಾ, ಐನಾಪೂರ, ನಿಡಗುಂದಾ, ಮೋಘಾ, ಕುಂಚಾವರಂ, ಐನೋಳಿ, ಸಾಲೇಬೀರನಳ್ಳಿ ಇನ್ನೀತರ ಪ್ರಮುಖ ಗ್ರಾಮಗಳಲ್ಲಿ ಜನರು ಹೋಳಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿದರು. ಚಿಕ್ಕ ಮಕ್ಕಳು ಪೋತರಾಜನ ವೇಷ ಧರಿಸಿ ಜನರನ್ನು ರಂಜಿಸಿದರು. ಕೆಲವು ಕಡೆ ಅಣಕು ಶವಯಾತ್ರೆ ನಡೆಸಿ, ಮಹಿಳೆಯ ವೇಷ ಧರಿಸಿದ ಗಂಡಸರು ರೋದಿಸಿ, ನೆರೆದ ಜನರನ್ನು ನಗಿಸಿದರು. ತಾಲೂಕಿನಲ್ಲಿ ಯಾವುದೇ ಅಹಿತಕರ ಘಟನೆ ಆಗದಂತೆ ಹೋಳಿ ಹಬ್ಬವನ್ನು ಅತ್ಯಂತ ಶಾಂತಿ ಸಂಭ್ರಮದಿಂದ ಆಚರಿಸಲಾಯಿತು.
ಹಲವೆಡೆ ಕಾಮದಹನ
ಚಿತ್ತಾಪುರ/ಚಿಂಚೋಳಿ: ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಾಮದಹನ ಮಾಡುವ ಮೂಲಕ ಹಾಗೂ ಬಣ್ಣ ಎರಚುವ ಮೂಲಕ ಸಡಗರ ಸಂಭ್ರಮದಿಂದ ಆಚರಿಸಿದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕಾಮಣ್ಣನ ದಹನ ಮಾಡಲು ಯುವಕರು, ಮಕ್ಕಳು, ಕುಳ್ಳು ಕಟ್ಟಿಗೆ ಸಂಗ್ರಹಿಸಿ ಜೋಡಿಸಿ, ರಾತ್ರಿ ಕಾಮಣ್ಣನಿಗೆ ಪೂಜೆ ಸಲ್ಲಿಸಿ, ಬೆಂಕಿ ಹಚ್ಚಿ ಕಾಮಣ್ಣ ದಹನ ಮಾಡಿದರು.
ನಂತರ ಮಹಿಳೆಯರು ಸಂಪ್ರದಾಯದಂತೆ ಕಾಮಣ್ಣನಿಗೆ ಹಚ್ಚಿದ ಬೆಂಕಿಯನ್ನು ಮನೆಗೆ ತಂದು, ಅದರಿಂದಲೇ ಮನೆಯ ದೀಪವನ್ನು ಬೆಳಗಿಸಿದರು. ಅಲ್ಲದೆ ಕಾಮದಹನ ಮಾಡಿದ ಬೆಂಕಿಯಲ್ಲಿ ಕಡಲೆ, ಈರುಳ್ಳಿ, ಗೆಣಸು ಸುಟ್ಟು ಪ್ರಸಾದವೆಂದು ಸ್ವೀಕರಿಸಿದರು. ಸೋಮವಾರ ದುಲಂಡಿ ದಿನದಂದು ಬೆಳಗ್ಗೆಯಿಂದಲೇ ಮಕ್ಕಳು ಯುವಕರು, ವ್ಯಾಪಾರಸ್ಥರು, ಶಿಕ್ಷಕರು ರಂಗಿನಾಟದಲ್ಲಿ ತೊಡಗಿ ಸಂಭ್ರಮಿಸಿದರು.
ವಿವಿಧ ರೀತಿಯ ಬಣ್ಣಗಳನ್ನು ಹಳೆ ಪಾತ್ರಗಳಲ್ಲಿ ಬಕೀಟ್‌ಗಳಲ್ಲಿ ಹಾಕಿ ಪಿಚಗಾರಿ ಮೂಲಕ ದಾರಿಹೋಕರ ಮೇಲೆ ಬಣ್ಣ ಎರಚಿದರು. ಅಲ್ಲದೆ ತಮ್ಮ ಗೆಳೆಯರ ಮನೆಗೆ ಹೋಗಿ ಅವರನ್ನು ಕರೆತಂದು, ಒಬ್ಬರಿಗೊಬ್ಬರಿಗೆ ಬಣ್ಣ ಎರಚಿ ಮುಖಕ್ಕೆ ಹಚ್ಚಿ ಖುಷಿಪಟ್ಟರು. ಅಲ್ಲದೆ ಗುಂಪಾಗಿ ಸೇರಿ ಚೀರುವುದು ಮಾಡಿದರು. ಬಿಸಿಲೇರಿದಂತೆ ಬಣ್ಣದ ಎರಚಾಟದ ಅರ್ಭಟವೂ ಹೆಚ್ಚಾಯಿತು. ಶಿಕ್ಷಕರು, ಯುವಕರು, ವಾಪ್ಯಾರಸ್ಥರು ಸೇರಿದಂತೆ ಅನೇಕರು ಬಣ್ಣದಾಟದಲ್ಲಿ ತೊಡಗಿದರು. ಸಿಕ್ಕಸಿಕ್ಕವರಿಗೆಲ್ಲ ಬಣ್ಣಗಳನ್ನು ಎರಚಿ ಅವರ ಮುಖಗಳನ್ನು ವಿರೂಪಗೊಳಿಸಿದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.