ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಹಾಡಿ ಕುಣಿದರು, ಬಣ್ಣ ಹಚ್ಚಿ ನಲಿದಾಡಿದರು...

Rashmi Kasaragodu
Updated On : 18 Mar 2014, 12:39 pm

ಯಾದಗಿರಿ: ಸ್ನೇಹ ಸೌಹಾರ್ದತೆಗೆ ಹೆಸರಾದ ಯಾದಗಿರಿ ಜಿಲ್ಲೆಯಲ್ಲಿ ಹೋಳಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲಾಯಿತು.
ಪ್ರತಿ ವರ್ಷದಂತೆ ವಿಜೃಂಭಣೆಯಿಂದ ಹಬ್ಬ ಆಚರಿಸಿದ ಜನತೆ, ಯಾರಿಗೂ ತೊಂದರೆ ಕೊಡದೆ ಬಲವಂತವಾಗಿ ಬಣ್ಣ ಎರಚಿ ಕಲಹಕ್ಕೆ ಎಡೆಮಾಡಿಕೊಡದೆ, ತಮ್ಮಷ್ಟಕ್ಕೆ ತಾವು ಸಂಭ್ರಮಿಸಿ ಸುಮಧುರ ಸ್ನೇಹ ಶಾಶ್ವತವಾಗಿಟ್ಟುಕೊಂಡರು.
ಮುಂಜಾನೆಯಿಂದ ಆರಂಭ:ನಗರದ ಹಲವಡೆ ಸೋಮವಾರ ಮುಂಜಾನೆಯಿಂದ ಆರಂಭವಾದ ಹೋಳಿಹಬ್ಬದ ಆಚರಣೆ ಶಾಂತಿಯುತವಾಗಿ ನಡೆಯಿತು. ನಗರದ ಹೊಸಳ್ಳಿ ಕ್ರಾಸ್, ಸುಭಾಷ ಚೌಕ್, ಗಾಂಧಿ ಚೌಕ್, ಗಂಜ್ ಬಡಾವಣೆ, ಬಸವೇಶ್ವರ ನಗರ, ಗಾಂಧಿನಗರ, ಚಕ್ಕರ ಕಟ್, ಕೋಲಿವಾಡ್, ಲಕ್ಷ್ಮಿ ನಗರ, ಸ್ಟೇಷನ್ ಏರಿಯಾಗಳಲ್ಲಿ, ಹೆಣ್ಣು, ಗಂಡು, ದೊಡ್ಡವರು, ಚಿಕ್ಕವರು, ಧರ್ಮ ಜಾತಿ ಎನ್ನದೆ, ಎಲ್ಲರೂ ಬಣ್ಣ ಹಚ್ಚಿಕೊಂಡು ಸ್ನೇಹ ಸೌಹಾರ್ದತೆಗೆ ಸಂಕೇತವಾದ ಹೋಳಿಯನ್ನು ಯಶಸ್ವಿಗೊಳಿಸಿದರು.
ಕಾಮದಹನದ ಸಂಭ್ರಮ:ಶಿವರಾತ್ರಿ ಅಮಾವಾಸ್ಯೆ ನಂತರ ಚಂದ್ರಕಂಡ ದಿನದಿಂದ ಬೊಬ್ಬೆ ಹೊಡೆದು ಕಾಮದಹನಕ್ಕಾಗ ಕಟ್ಟಿಗೆ ಕುಳ್ಳು ಕದಿಯುತ್ತಾ ಬಣ್ಣ ಆಡುವುದಕ್ಕೆ ಕಾಯುತ್ತಿದ್ದ ಮಕ್ಕಳು ನಗರದ ಪ್ರತಿ ಓಣಿಗಳಲ್ಲಿ ರವಿವಾರ ರಾತ್ರಿ ಕಾಮದಹನ ಮಾಡಿದರು.
ಬೆಳಿಗ್ಗೆ ಬ್ಯಾರೆಲ್‌ಗಟ್ಟಲೆ ಬಣ್ಣವನ್ನು ವಾಹನದೊಳಗೆ ಇಟ್ಟುಕೊಂಡು ಪರಸ್ಪರ ಬಣ್ಣ ಎರಚಿಕೊಂಡರು. ನಗರದ ಪ್ರಮುಖ ಬೀದಿಗಳಲ್ಲಿ ಕೆಲವರು ಧ್ವನಿವರ್ಧಕಗಳನ್ನು ಹಚ್ಚಿ ಕುಣಿದರೆ, ಇನ್ನೂ ಕೆಲವರು ನಾಡಹಲಿಗೆ ನಾದಕೆ ತಕ್ಕಂತೆ ಕುಣಿದು ಕುಪ್ಪಳಿಸಿದರು.
ಬೈಕ್‌ಗಳ ಮೇಲೆ ನಗರದೆಲ್ಲೆಡೆ ಸಂಚಾರ: ಬಣ್ಣ ಹಚ್ಚಿಕೊಂಡು ಯುವಕರು ಬೈಕ್‌ಗಳ ಮೇಲೆ ನಗರದೆಲ್ಲೆಡೆ ಸಂಚರಿಸಿ ಸ್ನೇಹಿತರಿಗೆ ಬಣ್ಣ ಹಚ್ಚುತ್ತಾ ತಿರುಗುವುದು ಕಂಡುಬಂತು. ಹೋಳಿ ಆಚರಿಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಲ್ಲ ಕಡೆಗಳಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಿ ಜಿಲ್ಲಾಡಳಿತ ಶಾಂತಿ ಕಾಪಾಡಿತ್ತು.  ನಗರದ ಅನೇಕ ಏರಿಯಾಗಳಲ್ಲಿ ಅನೇಕ ಹುಡುಗರು ಯವಕರು ಹೋಳಿ ಹಬ್ಬದ ಹಾಡುಗಳನ್ನು ಹಾಡುತ್ತ ತಿರುಗಾಡುತ್ತಿರುವುದು ವಿಶೇಷವೆನಿಸಿತು.
ಪರೀಕ್ಷಾರ್ಥಿಗಳಿಗೆ ತೊಂದರೆ ಇಲ್ಲ: ಹೋಳಿ ಹಬ್ಬದ ದಿನವೇ ದ್ವಿತೀಯ ಪಿಯುಸಿ ಅರ್ಥಶಾಸ್ತ್ರ ವಿಭಾಗದ ಪರೀಕ್ಷೆ ಇತ್ತು. ಬೆಳಗ್ಗೆ ತಮ್ಮ ಮಕ್ಕಳು ಪರೀಕ್ಷೆಗೆ ಹೋಗುವಾಗ ಏನಾದರೂ ಅಹಿತಕರ ಘಟನೆ ಸಂಭವಿಸಬಹುದು ಎಂದು ಪಾಲಕರು, ವಿದ್ಯಾರ್ಥಿಗಳು, ಉಪನ್ಯಾಸಕರು ಆತಂಕದಲ್ಲಿದ್ದರು. ಆದರೆ ಹೋಳಿ ಆಚರಿಸುವವರು ಪರೀಕ್ಷಾರ್ಥಿಗಳಿಗೆ ಯಾವುದೇ ತೊಂದರೆ ನೀಡಲಿಲ್ಲ. ಪರೀಕ್ಷೆ ಇರುವುದರಿಂದ ತಾವು ಹೋಳಿ ಆಚರಿಸದೇ ಇರುವುದಕ್ಕೆ ಬೇಸರಪಟ್ಟುಕೊಂಡ ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಮುಗಿದ ನಂತರ ಮನೆಗೆ ಹೋಗಿ ಬಣ್ಣದ ಆಟವಾಡಿ ಸಂಭ್ರಮಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement